ʻಎಲ್ಲರಂಥವರಲ್ಲʼದ, ಆದರೆ ʼಎಲ್ಲವನೂ ಬಲ್ಲʼ ಎಲ್ಲರ ಅಚ್ಚುಮೆಚ್ಚಿನ ʻತನ್ನಿಚ್ಛೆʼಯಂತೆ ನಡೆದ ಯೆಚೂರಿ…

ಎಡಪಂಥೀಯ ಕಬ್ಬಿಣದ ಕಡಲೆಯಂಥ ಮೌಲ್ಯಾಧಾರಿತ ವಿಚಾರಗಳನ್ನು ಹುರಿಗಡಲೆಯಷ್ಟೆ ಸರಳವಾಗಿ ಜನಸಾಮನ್ಯರಿಗೆ ಮುಟ್ಟಿಸಿ, ಸಮಾಜದ ಆರೋಗ್ಯಪೂರ್ಣ ಚಲನೆಗಾಗಿ ನಿರಂತರವಾಗಿ ದಶಕಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿದ ಮೆಚ್ಚಿನ ನೆಚ್ಚಿನ ಸಿಪಿಎಂ ಪಕ್ಷದ ನಾಯಕ ಸೀತಾರಾಮ ಯೆಚೂರಿ ಇದ್ದಕ್ಕಿಂದ್ದಂತೆ ಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಪ್ರೀತಿಸುವವರನ್ನು ಒಂಟಿ ಮಾಡಿ ನಡೆದು ಬಿಟ್ಟಿದ್ದಾರೆ. ಕರ್ನಾಟಕದ ಸಮಾಜದ ಇಂದಿನ ಕಾಲಕ್ಕೆ ಅತ್ಯಗತ್ಯವಾಗಿದ್ದ ಯೆಚೂರಿ ಅವರನ್ನು ನಾಡು ಕಂಡ ಪರಿಯ ಅಕ್ಷರ ರೂಪ.;

Update: 2024-09-13 13:11 GMT
ಸೀತಾರಾಂ ಯೆಚೂರಿ
Click the Play button to listen to article

ತಲೆಯೊಳಗೆ ತುಂಬಿ-ತುಳುಕುತ್ತಿರುವ ವಿಚಾರಗಳು, ಚಿಂತನೆಗಳು, ಆಲೋಚನೆಗಳಂತೆ, ತಲೆಯ ಮೇಲೆ ತುಂಬಿಕೊಂಡಿರುವ ದಟ್ಟವಾದ ಬಿಳಿಗೂದಲು, ತುಟಿಯಂಚಿನಲ್ಲಿ ಅಳಿಸಲಾಗದ ಮುಗುಳ್ನಗೆ, ಬೆರಳಿನಲ್ಲಿ ತಮ್ಮ ಸಂಗಾತಿ-ನಿಗಿನಿಗಿ ಉರಿಯುತ್ತಿರುವ ಸಿಗರೇಟ್‌, ಆತ್ಮೀಯರೊಂದಿಗೆ ಮಾತನಾಡುತ್ತಾ, ಸುತ್ತಲಿನ ಜಗತ್ತಿನ ಹುಸಿತನವನ್ನು ಗೇಲಿ ಮಾಡುತ್ತಾ, ಜೊತೆಜೊತೆಗೆ ಮುಂದಿನ ಹೋರಾಟದ ಹಾದಿಯನ್ನು ಸ್ಪಷ್ಟ ಮಾಡುತ್ತಾ…ಎಲ್ಲರೊಳಗೊಂದಾಗುತ್ತಿದ್ದ, ದಾರ್ಶನಿಕ ಮಂಕುತಿಮ್ಮನಂಥ ಎಲ್ಲರ ಅಚ್ಚುಮೆಚ್ಚಿನ ಯೆಚೂರಿ, ಅದೇ ಮುಗುಳ್ನಗೆ, (ಆದರೆ ಅದರಲ್ಲಿ ವಿಷಾದದ ಛಾಯೆ) ಬೀರಿ, ಎಲ್ಲರಿಗೂ ಕೈ ಬೀಸಿ, ಬಿಡುಬೀಸಾಗಿ ನಡೆದು ಬಿಟ್ಟಿದ್ದಾರೆ

ನಿನ್ನೆ ಇದ್ದವರು, ಇಂದಿಲ್ಲ. “ಶರಣರ ಬದುಕನ್ನು ಮರಣದಲ್ಲಿ ನೋಡು” ಎಂಬ ಸ್ಥಿತಿ, ಅವರನ್ನು ಹತ್ತಿರದಿಂದ ಕಂಡು, ಒಡನಾಡಿದ ಕೆಲವರದು. ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಯೆಚೂರಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸಲಿಲ್ಲ. ಅವರ ದೇಹವನ್ನ ಅವರು ಸಂಶೋಧನೆಯ ಉದ್ದೇಶಕ್ಕಾಗಿ ದಾನ ಮಾಡಿ ಬಟ್ಟಿದ್ದಾರೆ. ಇಷ್ಟೇ ಹೇಳಬಹುದು ಅವರಿಗೆ 72ರ ಹರೆಯ ಅಷ್ಟೆ. ಸಂಗಾತಿಗಳೆಲ್ಲರನ್ನೂ ಬಿಟ್ಟು ಹೊರಟುಹೋಗುವ ವಯಸ್ಸಂತೂ ಅಲ್ಲವೇ ಅಲ್ಲ. ಅಲ್ಲವೇ?

ಈ ಸಂದರ್ಭದಲ್ಲಿ ಅನಂತಮೂರ್ತಿ ಅವರ ಕವಿತೆ ತನ್ನ ಅರ್ಥಪೂರ್ಣತೆಯೊಂದಿಗೆ ಹೊಸ ಅರ್ಥ ಪಡೆದುಕೊಂಡಂತೆ ಕಾಣುತ್ತಿದೆ. “ಮತ್ತೆ ಮಳೆ ಹೊಯ್ಯುತ್ತಿದೆ, ಎಲ್ಲ ನೆನಪಾಗುತ್ತಿದೆ/ ಸುಖ, ದುಃಖ, ಬಯಕೆ, ಭಯ..ಒಂದೇ ಎರಡೇ…” ಎಲ್ಲ ಸವಿನೆನಪುಗಳ ಜೊತೆಗೆ ಕಹಿ ನೆನಪುಗಳೂ ಬಿಚ್ಚಿಕೊಳ್ಳುತ್ತಿವೆ.

ಬೆರಳು ಕತ್ತರಿಸದವರ ವಿರುದ್ಧ ಮುನಿದವರು

ಅದು ಹತ್ತು ವರ್ಷದ ಹಿಂದೆ ನಡೆದ ಘಟನೆ. ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಕಾಟಾಜೆಯ ಸುಂದರ ಮಲೆಕುಡಿಯ ಎಂಬುವವರ ಮೇಲೆ ಭೂಮಾಲೀಕ, ಪ್ರಭಾವಿ ಬಿಜೆಪಿ ರಾಜಕಾರಣಿಯ ಸಂಬಂಧಿಯೂ ಆಗಿದ್ದ ಗೋಪಾಲಕೃಷ್ಣ ಗೌಡ ಎಂಬಾತ ತನ್ನ ಗೌಡಿಕೆಯ ಕ್ರೌರ್ಯವನ್ನು ಮೆರೆದಿದ್ದ. ಕಳೆ ಕೊಚ್ಚುವ ಯಂತ್ರದಲ್ಲಿ ಸುಂದರ ಮಲೆಕುಡಿಯ ಅವರ ಹಸ್ತವನ್ನು ತೂರಿಸಿ, ನಾಲ್ಕು ಕೈಬೆರಳುಗಳನ್ನು ಕತ್ತರಿಸಿದ್ದ. ಹಠ ಬಿಡದೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆ ಸಂದರ್ಭದಲ್ಲಿ ಸುಂದರ ಮಲೆಕುಡಿಯರ ಪರವಾಗಿ ನಿಂತು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹೋರಾಟವನ್ನು ರೂಪಿಸಿತ್ತು. ಆಗ ಯೆಚೂರಿ, ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಂದರ ಮಲೆಕುಡಿಯ ಅವರನ್ನು ಭೇಟಿ ಮಾಡಿದ್ದರು. ತಮ್ಮ ಎಂದಿನ ಮುಗುಳ್ನಗೆಯಲ್ಲಿ ಆತ್ಮವಿಶ್ವಾಸ ತುಂಬಿ ಸಾಂತ್ವನ ಹೇಳಿದ್ದರು. ಒಳಗೊಳಗೇ ನಿಗಿನಿಗಿ ಕೆಂಡವಾಗಿದ್ದರು. ಆಗ ಕರ್ನಾಟಕದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯ ಸಭೆಯಲ್ಲಿ ಈ ಕ್ರೌರ್ಯವನ್ನು ಪ್ರಸ್ತಾಪ ಮಾಡಿ, ಬುಡಕಟ್ಟಿನ ಪರವೆಂದು ಹೇಳಿಕೊಳ್ಳುತ್ತಿದ್ದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮುಖಭಂಗ ಮಾಡಿದ್ದರು. ಇಡೀ ಪ್ರಕರಣವನ್ನು ಒಂದು ರಾಜಕೀಯ ವಸ್ತುವಾಗಿಸದೇ, ಮಾನವೀಯ ಅನುಕಂಪದ ಆಧಾರದ ಮೇಲೆ ನ್ಯಾಯಕ್ಕಾಗಿ ಒತ್ತಾಯಿಸಿದ್ದರು…

ಸಿಗರನಹಳ್ಳಿಗೆ ಇಳಿದ ಯೆಚೂರಿ

ಸುಮಾರು ಒಂಭತ್ತು ವರ್ಷದ ಹಿಂದೆ. ಅಂದರೆ 2015ರ ಆಗಸ್ಟ್‌ 31ರಂದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯ ದಲಿತ ಮಹಿಳೆಯರು ಅಲ್ಲಿಯ ಬಸವೇಶ್ವರ ದೇವಾಲಯಕ್ಕೆ ಪ್ರವೇಶ ಪಡೆದ ಕಾರಣಕ್ಕಾಗಿ ಅಲ್ಲಿನ ಮೇಲ್ಜಾತಿಯ ಮಂದಿ ದಲಿತರಿಗೆ ದಂಡ ವಿಧಿಸಿದ್ದೇ ಅಲ್ಲದೆ, ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಸಿಗರನಹಳ್ಳಿಯ ಈ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ದಾರಿ ತಪ್ಪಿಸಲು “ಜಾತ್ಯಾತೀತ” ಜನತಾದಳದ ಎಲ್ಲ ಹಂತದ ಮುಖಂಡರೂ ನೇರ ಕಾರ್ಯಾಚರಣೆಗೆ ಇಳಿದರು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಮೂರು ಭಾರಿ ಪತ್ರಿಕಾಗೋಷ್ಠಿ ನಡೆಸಿ, ತಾವು ಒಕ್ಕಲಿಗರ ಪರವಾಗಿರುವವರು ಎಂಬುದನ್ನು ಸಾಬೀತು ಮಾಡಲು ಪ್ರಯತ್ನಿಸಿದರು. ದಲಿತರು ಎತ್ತಿರುವ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರಾಕರಿಸುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ, ಸಿಗರನಹಳ್ಳಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರ , ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಿಪಿಐಎಂ, ದಲಿತ ಮತ್ತು ಜನಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು. “ಈ ಸಂದರ್ಭದಲ್ಲಿ ಸ್ವತಃ ಸಿಗರನಹಳ್ಳಿಗೆ ಭೇಟಿ ನೀಡಿ ಯೆಚೂರಿ ತಾವು ಅವರೆಲ್ಲರ ಜೊತೆಯಾಗಿರುವುದಾಗಿ ಭರವಸೆ ನೀಡಿದ್ದೇ ಅಲ್ಲದೆ, ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿದರು. ತಮ್ಮ ಗೆಳೆಯರಾದ ಯೆಚೂರಿಯವರೇ ಹೋರಾಟದ ಕಣಕ್ಕೆ ಇಳಿದಿದ್ದು, ಮಾಜಿ ಪ್ರಧಾನಿ ದೇವೇಗೌಡರಿಗೆ ನುಂಗಲಾರದ ತುತ್ತಾಗಿತ್ತು. ಅವರು ಯೆಚೂರಿ ಅವರನ್ನು ಹೋರಾಟದಿಂದ ಹಿಂದಕ್ಕೆ ಸರಿಯುವಂತೆ ಕೋರಿದರು. ಆದರೆ, ದಲಿತರ, ಅಲ್ಪಸಂಖ್ಯಾತರ, ತುಳಿತಕ್ಕೊಳಗಾದವರ ಪರವಾಗಿ ನಿಂತಿದ್ದ ಯೆಚೂರಿ, ಒಂದಿಂಚೂ ಹಿಂದೆ ಸರಿಯಲಿಲ್ಲ. ದೇವೇಗೌಡರ ಯಾವ ಮುಲಾಜಿಗೂ ಒಳಗಾಗಲಿಲ್ಲ. ಸಿಗರನಹಳ್ಳಿಯ ದಲಿತರಿಗೆ ನ್ಯಾಯ ಸಿಗುವವರೆಗೂ ಅವರೊಂದಿಗಿದ್ದರು.

ಜಾತಿ ನಿರ್ಮೂಲನೆ ಸಾಮಾಜಿಕ ತರ್ತು

ಹಾಸನದ ಅಂಬೇಡ್ಕರ್‌ ಭವನದಲ್ಲಿ ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ರ 125ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಅಸ್ಪಶ್ಯತೆ, ಜಾತಿ ತಾರತಮ್ಯ ಹಾಗೂ ದಲಿತರ ಹಕ್ಕುಗಳು ಕುರಿತ ಮೂರು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಯೆಚೂರಿ, “ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಲೇ ಇದೆ. ನರೇಂದ್ರಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ವರ್ಷದಲ್ಲಿ 39 ಸಾವಿರ ಪ್ರಕರಣ ದಾಖಲಾದರೆ, ಮೋದಿ ಆಳ್ವಿಕೆಯಲ್ಲಿ 47 ಸಾವಿರಕ್ಕೆ ಏರಿಕೆ ಕಂಡಿದೆ. ಶೇ.5 ರಷ್ಟು ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ. ದಿನೇದಿನೆ ಸಂಘ ಪರಿವಾರ ಹಾಗೂ ಬಿಜೆಪಿ ಹಿಂದುತ್ವ, ಗೋಸಂರಕ್ಷಣೆ ಹೆಸರಿನಲ್ಲಿ ದೌರ್ಜನ್ಯ ನಡೆಸುತ್ತಿದೆ. ದಲಿತ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ವಿರುದ್ಧ ತೀವ್ರತರವಾದ ಹೋರಾಟ ಅಗತ್ಯವಾಗಿದೆ. ಜಾತಿವಾದ ನಿರ್ಮೂಲನೆ ತುರ್ತಾಗಿ ಆಗಬೇಕಾದ ಸಾಮಾಜಿಕ ತುರ್ತು..ಎಂದದ್ದು ಇಂದಿಗೂ ನೆನಪಿದೆ” ” ಎಂದು ಕರ್ನಾಟಕದ ಸಿಪಿಎಂ ಸಮಿತಿಯ ನಾಯಕರಾದ ಪ್ರಕಾಶ್‌ ʼದ ಫೆಡರಲ್‌, ಕರ್ನಾಟಕʼದೊಂದಿಗೆ ಮಾತನಾಡುತ್ತಾ ನೆನಪಿಸಿಕೊಂಡು, ʼಯೆಚೂರಿ ಅವರು ದೇಶದ ನಾಯಕರೆಂದು ನಮಗೆ ಅನ್ನಿಸಿರಲೇ ಇಲ್ಲ. ಅವರು ಎಲ್ಲಿ ದೌರ್ಜನ್ಯ ನಡೆದರು, ತಾವೇ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಇನ್ನು ಅವರಿಲ್ಲ. ಅವರ ಸ್ಥಾನವನ್ನು ಯಾರೂ ತುಂಬಲಾರರು…” ಎಂದು ಮೌನಕ್ಕೆ ಶರಣಾದರು.

ಹೀಗೊಂದು ಲಘು ಪ್ರಸಂಗ

ಇಂಥ ತೀವ್ರತೆಯ ಹೋರಾಟದ ನಡುವೆ ಮತ್ತೊಂದು ಸಂಗತಿ ನೆನಪಾಗುತ್ತಿದೆ. ಹದಿನಾಲ್ಕು ವರ್ಷಗಳ ಹಿಂದೆ ಮೈಸೂರಿನಲ್ಲಿ ಸ್ಟುಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (SFI)ನ ನಾಲ್ಕು ದಿನಗಳ ಕಾಲ ನಡೆದ ದಕ್ಷಿಣ ಭಾರತದ ಅಧ್ಯಯನ ಶಿಬಿರಕ್ಕೆ ಯೆಚೂರಿ ತಮ್ಮ ಸಂಗಾತಿ ನೀಲೋತ್ಪಲ್‌ ಬಸು ಅವರೊಂದಿಗೆ ಬಂದಿದ್ದರು. “ವೇದಿಕೆಯ ಮೇಲೆ ಭಾಷಣ ನಡೆಯುತ್ತಿರವಾಗಲೇ ಎದ್ದು, ಕೆಳಕ್ಕಿಳಿದು ಬಂದು, ಪತ್ರಕರ್ತರ ಮಧ್ಯದಲ್ಲಿದ್ದ ಅವರ ಗೆಳೆಯ ಪತ್ರಕರ್ತರೊಬ್ಬರನ್ನು ಕೈ ಹಿಡಿದು ಎಳೆದುಕೊಂಡು ವೇದಿಕೆಯಿಂದ ದೂರ ಕರೆದೊಯ್ದರು. ಅವರ ಗೆಳೆಯ ಪತ್ರಕರ್ತರಿಗೆ ಯೆಚೂರಿಯ ಕಷ್ಟ ಅರ್ಥವಾಗಿತ್ತು…ಇಬ್ಬರೂ ಸಿಗರೇಟ್‌ ಅಂಟಿಸಿಕೊಂಡು, ವೇದಿಕೆ ಸಮಾರಂಭವನ್ನು ಮರೆತು, ರಾಷ್ಟ್ರದ ರಾಜಕಾರಣವನ್ನು ಕುರಿತು ಚರ್ಚಿಸಿದರು…ಕೈಯಲ್ಲಿ ಬೆಂಕಿ ಅಂಟಿಸಿದ ಸಿಗರೇಟ್‌ ಇದ್ದರೆ, ಯೆಚೂರಿ ಮಾತಿನ ಓಘವೇ ಬೇರೆ….” ಎಂಬ ಲಘು ಕ್ಷಣಗಳನ್ನು ಆ ಪತ್ರಕರ್ತರು ನೆನಪು ಮಾಡಿಕೊಳ್ಳುತ್ತಾರೆ.

ಉಳಿದವರು ಕಂಡಂತೆ ಯೆಚೂರಿ

ಸಮಿಶ್ರ ರಾಜಕಾರಣದ ಅಂತರಾಳದ ಅಗತ್ಯವನ್ನು ಮನಗಂಡಿದ್ದವರು ಅವರು. ಮಾರ್ಕ್ಸ್ ವಾದದ ತತ್ವಗಳೊಂದಿಗೆ ಒಂದಿಷ್ಟೂ ರಾಜಿಮಾಡಿಕೊಳ್ಳದೆ, ತಮ್ಮದೇ ಕಾರ್ಯತಂತ್ರದ ವಿಧಾನಗಳನ್ನು ಬಳಸುವುದರಲ್ಲಿ ಯೆಚೂರಿಯನ್ನು ಮೀರಿಸುವವರಿಲ್ಲ. ಮಾರ್ಕ್ಸ್ವಾದಿ ಸೈದ್ಧಾಂತಿಕ, ಯೆಚೂರಿ ಅವರು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಕೊನೆ ಕ್ಷಣದವರೆಗೂ ಬದ್ಧರಾಗಿದ್ದರು. ಆದರೆ ಪ್ರಜಾಪ್ರಭುತ್ವ ಮತ್ತು ಪ್ರಾಯೋಗಿಕ - ರಾಜಕೀಯದ ಅಗತ್ಯತೆಗಳಿಗಾಗಿ ಅದರ ಕಠಿಣ ಗಡಿಗಳ ಮಿತಿಗಳನ್ನು ಪರೀಕ್ಷಿಸುವ ಅಪರೂಪದ ಆಯ್ಕೆಯನ್ನು ತೋರಿಸಿಕೊಟ್ಟು ಹೊಸ ಕಠಿಣ ಹಾದಿಯನ್ನು ತುಳಿದು ದಿಕ್ಸೂಚಿಯಾದವರು. ತಮ್ಮ ವ್ಯಕ್ತಿ ಸಹಜವಾದ ಉತ್ತಮ ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವದೊಂದಿಗೆ ಸ್ಪಷ್ಟವಾದ ನಿಲುವುಗಳಿಂದ ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಸ್ನೇಹ ಹೊಂದಿದ್ದರು. ತಮ್ಮ ರಾಜಕೀಯ ಸಿದ್ಧಾಂತದ ನಂಬಿಕೆಗಳನ್ನು ಮೀರಿಯೂ ಸ್ನೇಹಿತರನ್ನು ಸಂಪಾದಿಸುವ ಯೆಚೂರಿಯಂಥವರು ರಾಜಕೀಯದಲ್ಲಿ ಅತಿ ಅಪರೂಪ. 2022ರಲ್ಲಿ ಪ್ರಧಾನಿ ಮೋದಿ ಮತ್ತು ಯೆಚೂರಿ ಸರ್ವ ಪಕ್ಷದ ಸಭೆಯಲ್ಲಿ ಒಟ್ಟಾಗಿ ಕೂತು ಮಾತನಾಡಿ, ಮನಸಾರೆ ನಗುತ್ತಿರುವ ಚಿತ್ರವೊಂದು ಅಂದು ವೈರಲ್‌ ಆಗಿ ʼಉಳಿದವರʼ ಹೊಟ್ಟೆಯುರಿಗೆ ಕೂಡ ಕಾರಣವಾಗಿತ್ತು. ಕಾಂಗ್ರೆಸ್ ನ ನಾಯಕ ರಾಹುಲ್‌ ಗಾಂಧಿ ಅವರಿಗಂತೂ, ಯೆಚೂರಿಯೆಂದರೆ ಪಕ್ಷವರಿಗಿಂತ ಹೆಚ್ಚಿನ ನಂಬಿಕೆ. 2022 ರಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು “ಯೆಚೂರಿ ಟು ಇನ್ ಒನ್ ಪ್ರಧಾನ ಕಾರ್ಯದರ್ಶಿ ಎಂದು ವ್ಯಂಗ್ಯವಾಡಿದ್ದರು. ಅವರು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿಯೂ ಹೌದು. ಮತ್ತು ಕೆಲವೊಮ್ಮೆ... ಸಿಪಿಐ(ಎಂ) ಗಿಂತ ಕಾಂಗ್ರೆಸ್‌ನಲ್ಲಿ ಅವರ ಪ್ರಭಾವ ಹೆಚ್ಚಾಗುತ್ತದೆ” ಎಂದು ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರು ನೆನಪು ಮಾಡಿಕೊಳ್ಳುತ್ತಾರೆ.

ಸರಸ-ವಿರಸದ ರಾಜಕಾರಣ

ಕಾಂಗ್ರೆಸ್‌ ನಾಯಕರ ಮೆಚ್ಚಿಗೆಯ ಈ ಮಾತುಗಳಲ್ಲಿ ಆಳವಾದ ಅರ್ಥವಿದೆ. ಕರ್ನಾಟಕದ ಎಲ್ಲ ಪಕ್ಷಗಳ ನಾಯಕರೊಂದಿಗೆ ತಮ್ಮ ಎಂದಿನ ಸ್ನೇಹಶೈಲಿಯ ರಾಜಕಾರಣದ ಆಳವಾದ ಮಾತುಗಳಿಂದ ಯೆಚೂರಿ ಸ್ನೇಹ ಸಂಪಾದಿಸಿದ್ದರು. ದೇವೇಗೌಡರಿರಲಿ, ಜೆ.ಎಚ್.‌ ಪಟೇಲರಿರಲಿ, ಸಿದ್ದರಾಮಯ್ಯ ಇರಲಿ ಎಲ್ಲರೊಂದಿಗೂ ಒಂದು ರೀತಿಯ ಸರಸ-ವಿರಸದ ಸಂಬಂಧ ಯೆಚೂರಿಯವರದು. ಯಾರೊಂದಿಗೇ ವ್ಯವಹರಿಸಿದರೂ, ತಮ್ಮ ಮಾರ್ಕ್ಸ್‌ ವಾದಿ ಕಟ್ಟುಕಟ್ಟಳೆಗಳು ಚೂರೂ ಮುಕ್ಕಾಗದಂತೆ ನಡೆದುಕೊಳ್ಳುವ ಅವರ ಜಾಣ್ಮೆ, ತಿಳುವಳಿಕೆ ಇನ್ನುಳಿದವರಿಗೆ ದಕ್ಕುವುದು ಕಷ್ಟ. ದುರ್ಲಭ. ಎಷ್ಟೋ ಸಂಗತಿಗಳ ಬಗ್ಗೆ ಸಿದ್ದರಾಮಯ್ಯ ತಮ್ಮ ತಿಳುವಳಿಕೆಯ ತಾಳೆ ನೋಡಲು ಯೆಚೂರಿಯನ್ನು ಆಶ್ರಯಿಸುತ್ತಿದ್ದರೆಂದು, ಅವರ ಸಮೀಪವರ್ತಿಗಳೇ ಹೇಳುತ್ತಾರೆ.

ಕಬ್ಬಿಣದ ಕಡಲೆ, ಯೆಚೂರಿ ಕೈಯಲ್ಲಿ ಹುರಿಗಡಲೆ

“ಕರ್ನಾಟದ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಳವಳಿಗಳಿಗೆ ಬೇಕಾಗಿದ್ದ “Wanting Personality” . ಅವರ ಉದಾರವಾದಿ ರಾಜಕಾರಣ, ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿತ್ತು” ಎನ್ನುತ್ತಾರೆ, ಸಿಪಿಎಂನ ನಾಯಕ ಪ್ರಕಾಶ್.‌ ನಿಜ. ಕಳೆದ ಎರಡು ದಶಕದಲ್ಲಿ ಕರ್ನಾಟಕದ ರಾಜಕಾರಣದಲ್ಲಿ ತನ್ನ ಹಿಂದುತ್ವ ತತ್ವದ ಆಧಾರದ ಮೇಲೆ, ಕೋಮುವಾದಿ, ರಾಷ್ಟ್ರವಾದಿ ರಾಜಕಾರಣ ಆರಂಭವಾದಂದಿನಿಂದ, ಧರ್ಮ ನಿರಪೇಕ್ಷ ರಾಜಕಾರಣದ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಯಾರೇ ಯಾವುದೇ ರೀತಿಯ ಚಳವಳಿ ನಡೆಸಿದರು, ಅದರ ಒಂದು ಭಾಗವಾಗಿ ಮಾತನಾಡಲು ಕರ್ನಾಟಕಕ್ಕೆ ಯೆಚೂರಿಯವರ ಅಗತ್ಯವಿತ್ತು ಎನ್ನುವುದು ಇತ್ತೀಚಿನ ದಿನಗಳ ನಿತ್ಯ ಸತ್ಯ. “ಇದಕ್ಕೆ ಕಾರಣ; ಅವರ ತಿಳುವಳಿಕೆಯ ವಿಸ್ತಾರ. ತಮ್ಮ ತಿಳುವಳಿಕೆಯನ್ನು ಅವರು ಘನವಾದ ಭಾಷೆ ಬಳಸದೆ, ಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುತ್ತಿದ್ದ ರೀತಿ, ಅವರ ವಿರೋಧಿಗಳಿಗೂ ಅಪ್ಯಾಯಮಾನವಾಗಿತ್ತು. ಎಂಥ ಕಬ್ಬಿಣದ ಕಡಲೆಯಂಥ ತಾತ್ವಿಕ ವಿಚಾರಗಳನ್ನೂ ಅವರು ಅತ್ಯಂತ ಸರಳವಾಗಿ ಪ್ರತಿಪಾದಿಸುತ್ತಿದ್ದ ರೀತಿಗೆ ಎಲ್ಲರೂ ತಲೆದೂಗುತ್ತಿದ್ದರು” ಎನ್ನುತ್ತಾರೆ ಪ್ರಕಾಶ್.‌

ಯೆಚೂರಿ ಅವರನ್ನೇ ಕೇಳಿಬಿಡೋಣ

ಎಲ್ಲರಿಗೂ ತಿಳಿದಿರುವಂತೆ, ಕಾಂಗ್ರೆಸ್‌ ನಾಯಕರಾಗಿದ್ದ ಜಾಫರ್‌ ಷರೀಫ್‌ ಅವರಿಗೆ ಯೆಚೂರಿಯೆಂದರೆ ವಿಶೇಷ ಗೌರವ. ಏನೇ ಅನುಮಾನವಿದ್ದರೂ, ಅವರು “ಒಮ್ಮೆ ಯೆಚೂರಿಯವರನ್ನು ಕೇಳಿಬಿಡೋಣ” ಎನ್ನುತ್ತಿದ್ದರು. ಹಾಗೆಯೇ ರಮೇಶ್‌ ಕುಮಾರ್‌ಗೆ ಯೆಚೂರಿ ಅವರು ಮಾನಸ ಗುರುಗಳು. “ಮಾನವತಾವಾದ, ಧರ್ಮ ನಿರಪೇಕ್ಷ ನಿಲುವುಗಳನ್ನು ಅವರು ಬಿಜೆಪಿಯವರ ಅಸ್ತ್ರವಾದ ವೇದ ಪುರಾಣ, ಶಾಸ್ತ್ರಗಳನ್ನು ಅವುಗಳ ನಿಜವಾದ ನೆಲೆಯಿಂದಲೇ ಎದುರಿಸಿ ಛಿದ್ರ ಮಾಡುತ್ತಿದ್ದರು. ಅವರು ಮಾರ್ಕ್ಸ್‌ ವಾದದಷ್ಟೇ ಆಳವಾದ ಜ್ಞಾನವನ್ನು ಈ ಜ್ಞಾನ ಶಾಖೆಗಳಲ್ಲಿಯೂ ಪಡೆದುಕೊಂಡಿದ್ದು ಧರ್ಮ ನಿರಪೇಕ್ಷ ಸಮಾಜದ ದೊಡ್ಡ ಶಕ್ತಿಯಾಗಿತ್ತು.

ಇಂಥ ಎಲ್ಲರಂಥವರಲ್ಲದೆ ಯೆಚೂರಿ, ಇನ್ನಿಲ್ಲ ಎಂದರೆ….ಆವರಿಸುವ ಶೂನ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಇಂದಿನ ಕ್ಷುದ್ರ , ಕೋಮುವಾದಿ, ರಾಷ್ಟ್ರೀಯವಾದಿ, ಪ್ರಜಾಪ್ರಭುತ್ವ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ ರಾಜಕಾರಣದ ಸಂದರ್ಭದಲ್ಲಿ ಯೆಚೂರಿ ಅಗಲಿರುವುದು, ಸಮಾಜಕ್ಕಾಗಿರುವ ನಷ್ಟವೆನ್ನುವುದು ತೀರಾ ತೀರಾ ಸವೆಕಲು ಸಂಗತಿ. ಆದರೆ ಬರೆಯುವ ಅಕ್ಷರಗಳಿಗೂ ಮಿತಿ ಇದೆ. ಅದಕ್ಕೆ ಭಾವನೆಗಳನ್ನು ಸಂಗೀತದಂತೆ, ದೃಶ್ಯದಂತೆ ಸೆರೆ ಹಿಡಿದಿಡುವ ಶಕ್ತಿ ಇದ್ದಿದ್ದರೆ, ಈ ರೀತಿಯ ಸವಕಲು ಮಾತುಗಳನ್ನು ಹೇಳುವ ಅಗತ್ಯ ಬರುತ್ತಿರಲಿಲ್ಲವೇನೋ! ಆದರೆ, ವಾಸ್ತವವನ್ನು ಅರಗಿಸಿಕೊಳ್ಳುವುದು ಅನಿವಾರ್ಯ. ಹಾಗಾಗಿ ಈ ಸ್ವರೂಪದ ಚಿರಸ್ಮರಣೆ.

ಮನ್ನಿಸಿ, ಹೋಗಿ ಬನ್ನಿ ಯೆಚೂರಿ…

Tags:    

Similar News