The Federal Special Series -3 |ರಾಜ್ ಅಪಹರಣದ 25ನೇ ವರ್ಷ: ಸಂಧಾನ ರಹಸ್ಯ ಬಿಚ್ಚಿಟ್ಟ ಎ.ಎಂ.ಆರ್. ರಮೇಶ್
ರಾಜ್ಕುಮಾರ್ ಅವರ ಬಿಡುಗಡೆಗೆ ಹಣ ಸಂದಾಯವಾಗಿತ್ತು ಎಂಬ ಚರ್ಚೆಗಳು ಮೊದಲಿನಿಂದಲೂ ಇದ್ದವು. ಈ ಬಗ್ಗೆ ಎ.ಎಂ.ಆರ್. ರಮೇಶ್ ಮಾತನಾಡಿದ್ದಾರೆ.;
ವರನಟ ಡಾ. ರಾಜ್ಕುಮಾರ್ ಅವರ ಅಪಹರಣಕ್ಕೆ 25 ವರ್ಷಗಳು ಸಂದಿರುವ ಬೆನ್ನಲ್ಲೇ, ಆ ಸಂದರ್ಭದಲ್ಲಿ ನಡೆದಿದ್ದ ಸಂಧಾನ ಪ್ರಕ್ರಿಯೆಯ ಬಗ್ಗೆ ಚಲನಚಿತ್ರ ನಿರ್ದೇಶಕ ಎ.ಎಂ.ಆರ್. ರಮೇಶ್ ಹೊಸ ಬೆಳಕು ಚೆಲ್ಲಿದ್ದಾರೆ. 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಅವರು, ಅಣ್ಣಾವ್ರ ಬಿಡುಗಡೆಯಲ್ಲಿ ತಮಿಳು ನಾಯಕ ಪಳ ನೆಡುಮಾರನ್ ಅವರ ಪಾತ್ರ ಮತ್ತು ಹಣಕಾಸಿನ ನೆರವಿನ ಕುರಿತು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಡಾ. ರಾಜ್ಕುಮಾರ್ ಅವರ ಅಪಹರಣವಾದ ತಕ್ಷಣ ತಾವು ಸಂಧಾನಕ್ಕಾಗಿ ನೆಡುಮಾರನ್ ಅವರನ್ನು ಸಂಪರ್ಕಿಸಿದ್ದಾಗಿ ರಮೇಶ್ ವಿವರಿಸಿದ್ದಾರೆ. "ಆ ಸಮಯದಲ್ಲಿ ಮಧುರೈನಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ನೆಡುಮಾರನ್ ಮತ್ತು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಭಾಗವಹಿಸಿದ್ದರು. ನಾನು ನೆಡುಮಾರನ್ ಅವರನ್ನು ಭೇಟಿಯಾಗಿ, ವೀರಪ್ಪನ್ ಜೊತೆ ಮಾತನಾಡಿ ಡಾ. ರಾಜ್ಕುಮಾರ್ ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದೆ," ಎಂದು ರಮೇಶ್ ಹೇಳಿದ್ದಾರೆ.
ಆಗ, "ಮುಖ್ಯಮಂತ್ರಿಗಳಿಂದ ಅಧಿಕೃತವಾಗಿ ಹೇಳಿಸಿ," ಎಂದು ನೆಡುಮಾರನ್ ಸೂಚಿಸಿದ್ದರು. ಅದರಂತೆ, ತಾವು ನೇರವಾಗಿ ಬೆಂಗಳೂರಿಗೆ ಬಂದು ಐಪಿಎಸ್ ಅಧಿಕಾರಿ ಕೆಂಪಯ್ಯ ಅವರೊಂದಿಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ, ಅಲ್ಲಿಂದಲೇ ನೆಡುಮಾರನ್ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಲಾಯಿತು ಎಂದು ರಮೇಶ್ ವಿವರಿಸಿದ್ದಾರೆ. ತದನಂತರ, ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರು ನೆಡುಮಾರನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವೀರಪ್ಪನ್ ಮನವೊಲಿಸುವಲ್ಲಿ ನೆಡುಮಾರನ್ ದೊಡ್ಡ ಪಾತ್ರ ವಹಿಸಿದರು ಎಂದು ರಮೇಶ್ ತಿಳಿಸಿದ್ದಾರೆ.
ಬಿಡುಗಡೆಗೆ ಹಣ ನೀಡಿದ್ದವರಾರು?
ರಾಜ್ಕುಮಾರ್ ಅವರ ಬಿಡುಗಡೆಗೆ ಹಣ ಸಂದಾಯವಾಗಿತ್ತು ಎಂಬ ಚರ್ಚೆಗಳು ಮೊದಲಿನಿಂದಲೂ ಇದ್ದವು. ಈ ಬಗ್ಗೆ ಮಾತನಾಡಿದ ಎ.ಎಂ.ಆರ್. ರಮೇಶ್, ಬಿಡುಗಡೆಗೆ ಸುಮಾರು 50 ಕೋಟಿ ರೂಪಾಯಿ ಹಣವನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. "ಕಾಫಿ ಡೇ ಸಿದ್ಧಾರ್ಥ್, ಡಿ.ಕೆ. ಶಿವಕುಮಾರ್, ಆರ್.ವಿ. ದೇವರಾಜ್ ಮತ್ತು ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ತಮ್ಮ ಕೈಲಾದಷ್ಟು ಹಣವನ್ನು ಸಂಗ್ರಹಿಸಿ ನೀಡಿದ್ದರು. ಸರ್ಕಾರ ಇಂತಹ ಸಂದರ್ಭಗಳಲ್ಲಿ ಹಣ ಕೊಡಲು ಸಾಧ್ಯವಿಲ್ಲ, ಹಾಗಾಗಿ ಹಲವರು ಸೇರಿ ಹಣ ಹೊಂದಿಸಿ ಅಣ್ಣಾವ್ರನ್ನು ಬಿಡಿಸಿಕೊಂಡು ಬರಲಾಯಿತು," ಎಂದು ರಮೇಶ್ ವಿವರಿಸಿದ್ದಾರೆ.
ವೀರಪ್ಪನ್ ಕುರಿತು 'ಅಟ್ಟಹಾಸ' ಚಿತ್ರ ಮತ್ತು ವೆಬ್ ಸರಣಿಯನ್ನು ನಿರ್ದೇಶಿಸಲು ಆಳವಾದ ಸಂಶೋಧನೆ ನಡೆಸಿರುವ ರಮೇಶ್ ಅವರ ಈ ಹೇಳಿಕೆಗಳು, ಕಾಲು ಶತಮಾನದ ಹಿಂದಿನ ಆ ಕರಾಳ ದಿನಗಳ ಸಂಕೀರ್ಣ ಘಟನಾವಳಿಗಳ ಮೇಲೆ ಹೊಸ ಹೊಳಹನ್ನು ನೀಡಿವೆ.
ವೀರಪ್ಪನ್ ಅಟ್ಟಹಾಸದ ಬಗ್ಗೆ ಮತ್ತು ಕನ್ನಡದ ವರನಟನನ್ನು ಬಿಡುಗಡೆಗೊಳಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ʼಅಟ್ಟಹಾಸʼ ಸಿನಿಮಾ ನಿರ್ದೇಶಕ ಎ.ಎಂ.ಆರ್. ರಮೇಶ್ ಹೇಳಿದ್ದೇನು? ಇಲ್ಲಿ ಕ್ಲಿಕ್ ಮಾಡಿ..