ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ವಂಚನೆ: ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಇ.ಡಿ ದಾಳಿ
ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ, ನೆಲಮಂಗಲ, ವಿಜಯನಗರ, ಬಸವೇಶ್ವರ ನಗರ, ಆನೇಕಲ್ ಸೇರಿದಂತೆ ಬ್ಯಾಂಕಿನ ಒಟ್ಟು 14 ಶಾಖೆಗಳಲ್ಲಿ ಮೋಸ ನಡೆದಿತ್ತು.;
ಠೇವಣಿದಾರರ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಇಂದು ಬೆಂಗಳೂರಿನ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ, ನಗರದ ಸಿಸಿಬಿ (ಕ್ರೈಂ ಬ್ರಾಂಚ್) ಪೊಲೀಸರು 2022ರಲ್ಲಿ ದಾಳಿ ನಡೆಸಿ ಬ್ಯಾಂಕ್ ಮುಖ್ಯಸ್ಥ ಶ್ರೀನಿವಾಸಮೂರ್ತಿ ಅವರನ್ನು ಬಂಧಿಸಿದ್ದರು. ಇದೀಗ ಇ.ಡಿ ಈ ಪ್ರಕರಣದ ಹಣಕಾಸು ವಹಿವಾಟುಗಳ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಹೆಚ್ಚಿನ ಬಡ್ಡಿಯೊಂದಿಗೆ ಠೇವಣಿ ಇಡಲು ಆಮಿಷ ಒಡ್ಡಿ 15,000ಕ್ಕೂ ಹೆಚ್ಚು ಠೇವಣಿದಾರರಿಂದ 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿರುವ ಆರೋಪದ ಸಂಬಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಶೋಧ ಕಾರ್ಯದ ವೇಳೆ ವಂಚನೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ಮತ್ರು ದಾಖಲೆಗಳು ಲಭ್ಯವಾಗಿವೆ ಎಂದು ಮೂಲಗಳು ಹೇಳಿವೆ.
ಇ.ಡಿ ಅಧಿಕಾರಿಗಳು ಶ್ರೀನಿವಾಸಮೂರ್ತಿ ಅವರ ಮನೆ, ಕಚೇರಿ ಮತ್ತು ಅವರ ಆಪ್ತರ ಕಚೇರಿಗಳ ಮೇಲೆ ಗುರುವಾರ ಬೆಳಗ್ಗೆಯಿಂದಲೇ ದಾಳಿ ನಡೆಸಿ, ಸಂಬಂಧಪಟ್ಟ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ದಾಳಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ನಡೆಯುತ್ತಿರುವ ತನಿಖೆಯ ಭಾಗವಾಗಿದೆ.
ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ವಿರುದ್ಧ ಠೇವಣಿದಾರರಿಗೆ ಹಣ ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, 2022ರಲ್ಲಿ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬ್ಯಾಂಕ್ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ, 20 ಲಕ್ಷ ರೂ. ನಗದು ಮತ್ತು 30 ಲಕ್ಷ ಮೌಲ್ಯದ ಸ್ಥಿರ ಠೇವಣಿ (FD) ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ, ಆರೋಪಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳೂ ಸಹ ಬೆಳಕಿಗೆ ಬಂದಿದ್ದವು.
14 ಶಾಖೆಗಳ ಮೇಲೆ ದಾಳಿ ನಡೆದಿತ್ತು
ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ, ನೆಲಮಂಗಲ, ವಿಜಯನಗರ, ಬಸವೇಶ್ವರ ನಗರ, ಆನೇಕಲ್ ಸೇರಿದಂತೆ ಬ್ಯಾಂಕಿನ ಒಟ್ಟು 14 ಶಾಖೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು.
1998ರಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್, ವರ್ಷಕ್ಕೆ ಶೇ. 8 ರಿಂದ 10ರವರೆಗೆ ಆಕರ್ಷಕ ಬಡ್ಡಿ ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿತ್ತು. ಆದರೆ, ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೂ, ಬ್ಯಾಂಕ್ ಠೇವಣಿದಾರರಿಗೆ ಅವರ ಹಣವನ್ನು ಹಿಂದಿರುಗಿಸಿರಲಿಲ್ಲ.
ಸಿಸಿಬಿ ತನಿಖೆಯಿಂದ ತಿಳಿದುಬಂದಂತೆ, ಕೋಟ್ಯಂತರ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಅನಿಯಮಿತವಾಗಿ ವಿತರಿಸಲಾಗಿದೆ. ಈ ಸಾಲ ವಿತರಣೆಯ ವೇಳೆ, ಖಾತ್ರಿ (collateral) ಮತ್ತು ಇತರ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಈ ಅಕ್ರಮಗಳಿಂದಾಗಿ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಠೇವಣಿದಾರರಿಗೆ ಹಣ ಹಿಂದಿರುಗಿಸಲು ವಿಫಲವಾಗಿತ್ತು.
ಐವರ ಬಂಧನ
ಸಹಕಾರ ಬ್ಯಾಂಕ್ ವಿರುದ್ಧ ಠೇವಣಿದಾರರಿಗೆ ಹಣ ಹಿಂದಿರುಗಿಸದ ಬಗ್ಗೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳನ್ನು ನಂತರದ ದಿನಗಳಲ್ಲಿ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಅವರನ್ನು 2022ರ ಸಿಸಿಬಿ ದಾಳಿಯ ಸಂದರ್ಭದಲ್ಲಿಯೇ ಬಂಧಿಸಲಾಗಿತ್ತು. ಸಿಸಿಬಿ ದಾಳಿ ವೇಳೆ ಒಟ್ಟು 39 ಲಕ್ಷ ರೂಪಾಯಿ ನಗದು, 50ಕ್ಕೂ ಹೆಚ್ಚು ದಾಖಲೆ ಪತ್ರಗಳು, 5 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮತ್ತು 30 ಲಕ್ಷ ರೂಪಾಯಿ ಠೇವಣಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಒಟ್ಟು ಐವರನ್ನು ಬಂಧಿಸಲಾಗಿದೆ.
ಆರ್‌ಬಿಐನಿಂದ ಬ್ಯಾಂಕ್ ಪರವಾನಗಿ ರದ್ದು
ಜುಲೈ 7, 2023: ಈ ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ, ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರದ್ದುಗೊಳಿಸಿತ್ತು. ಬ್ಯಾಂಕ್ನಲ್ಲಿ ಸಾಕಷ್ಟು ಬಂಡವಾಳ ಇಲ್ಲದಿರುವುದು ಆದಾಯದ ಸಾಮರ್ಥ್ಯ ಇಲ್ಲದಿರುವುದು ಪರವಾನಗಿ ರದ್ದುಪಡಿಸಲು ಪ್ರಮುಖ ಕಾರಣಗಳಾಗಿವೆ ಎಂದು ಆರ್‌ಬಿಐ ತಿಳಿಸಿತ್ತು. ಆರ್‌ಬಿಐನ ಈ ನಿರ್ಧಾರದ ನಂತರ, ಜುಲೈ 6, 2023ರಿಂದ ಈ ಬ್ಯಾಂಕ್‌ಗಳು ಗ್ರಾಹಕರಿಗೆ ಯಾವುದೇ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.