ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಪತ್ನಿ, ಸಹೋದರನಿಗೆ ಹೈಕೋರ್ಟ್‌ನಿಂದ ನೋಟಿಸ್
ಲೋಪಗಳನ್ನು ಗಮನಿಸಿದ ನ್ಯಾಯಾಲಯವು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಮತ್ತು ಹ್ಯಾಂಡ್ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶಿಸಿತು.;
ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ಸಹೋದರ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಲಾಗಿದೆ. ಈ ನೋಟಿಸ್‌ಗಳೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಮೈಸೂರಿನ ವಿಜಯನಗರ ಠಾಣಾಧಿಕಾರಿಗೂ ನ್ಯಾಯಾಲಯ ನೋಟಿಸ್ ನೀಡಿದೆ.
ಪ್ರಕರಣದ ಹಿನ್ನೆಲೆ ಮತ್ತು ನ್ಯಾಯಾಲಯದ ನಿರ್ದೇಶನ
ಮೂಲ ದೂರುದಾರ ಸ್ನೇಹಮಯಿ ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿವಾದಿತ ಭೂಮಿಯ ಮಾಲೀಕ ಜೆ. ದೇವರಾಜು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.
ಹಿರಿಯ ವಕೀಲ ಕೆ.ಜಿ. ರಾಘವನ್ ಅವರು ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಾಜರಾಗಿ, ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಬಿ.ಎಂ. ಪಾರ್ವತಿ ಅವರಿಗೆ ಈ ಹಿಂದೆ ನೋಟಿಸ್ ಜಾರಿಯಾಗಿರಲಿಲ್ಲ ಎಂದು ಪೀಠಕ್ಕೆ ಮಾಹಿತಿ ನೀಡಿದರು. ಹಾಗೆಯೇ, ರಾಜ್ಯಪಾಲರ ತನಿಖೆಗೆ ಅನುಮತಿ ನೀಡಿದ್ದ ಆದೇಶವನ್ನು ಎತ್ತಿಹಿಡಿದ ಏಕಸದಸ್ಯ ಪೀಠವು, ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸುವಂತೆ ಮಾಡಿದ್ದ ಆದಾರವನ್ನು ರದ್ದುಪಡಿಸಲು ಕೋರಿ ಜೆ. ದೇವರಾಜು ಸಲ್ಲಿಸಿರುವ ಮೇಲ್ಮನವಿಯಲ್ಲೂ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ನೋಟಿಸ್ ಜಾರಿಯಾಗಿರಲಿಲ್ಲ ಎಂಬುದನ್ನು ಗಮನಕ್ಕೆ ತಂದರು.
ಲೋಪಗಳನ್ನು ಗಮನಿಸಿದ ನ್ಯಾಯಾಲಯವು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಮತ್ತು ಹ್ಯಾಂಡ್ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶಿಸಿತು. ಇದರಿಂದಾಗಿ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 4ಕ್ಕೆ ಮುಂದೂಡಲಾಗಿದೆ. .
ಸಿದ್ದರಾಮಯ್ಯ ಅವರ ಮೇಲ್ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿಸಿದ್ದ ಆದೇಶವನ್ನು ಏಕಸದಸ್ಯ ಪೀಠವು 2024ರ ಸೆಪ್ಟೆಂಬರ್ 24ರಂದು ಎತ್ತಿ ಹಿಡಿದಿತ್ತು. ಈ ಆದೇಶದ ಒಂದು ತಿಂಗಳ ನಂತರ, ಸಿದ್ದರಾಮಯ್ಯ ಅವರು ಏಕಸದಸ್ಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶ ಹೊರಬಿದ್ದು ಹತ್ತು ತಿಂಗಳಾಗಿದ್ದರೂ, ಮೇಲ್ಮನವಿಗಳ ಸಮಗ್ರ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಪ್ರಸ್ತುತ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ನಾಲ್ಕು ಮೇಲ್ಮನವಿಗಳು ಸಲ್ಲಿಕೆಯಾಗಿವೆ.