ಮೀಸಲಾತಿಗಿಂತ ಘನತೆ, ಮನ್ನಣೆಗಾಗಿ ಹೋರಾಟ: ಸಿಎಂ ಸಿದ್ದರಾಮಯ್ಯ

ಹಿಂದುಳಿದ ವರ್ಗದ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಐಸಿಸಿ ಹಿಂದುಳಿದ ವರ್ಗದ ಸಲಹಾ ಮಂಡಳಿಯ ಮೊದಲ ಸಭೆ ಆರಂಭಗೊಂಡಿದೆ.;

Update: 2025-07-15 15:35 GMT

ಹಿಂದುಳಿದ ವರ್ಗದ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚಿಸಲಾಗಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಮಟ್ಟದ ಹಿಂದುಳಿದ ವರ್ಗದ ಸಲಹಾ ಮಂಡಳಿಯ ಮೊದಲ ಸಭೆ ಆರಂಭಗೊಂಡಿದ್ದು, ದೇಶದ ವಿವಿಧೆಡೆಯಿಂದ ಆಗಮಿಸಿದ ಕಾಂಗ್ರೆಸ್‌ ಮುಖಂಡರನ್ನು ರಾಜ್ಯದ ವತಿಯಿಂದ ಸನ್ಮಾನಿಸಲಾಯಿತು. 

ಕೆಪಿಸಿಸಿಯ ಭಾರತ್‌ ಜೋಡೋ ಭವನದಲ್ಲಿ ಸಭೆ ನಡೆಯಿತು. ಈ ವೇಳೆ ಔಪಚಾರಿಕ ಮಾತುಕತೆಗಳು ನಡೆದವು. ಎಐಸಿಸಿ ಹಿಂದುಳಿದ ವರ್ಗದ ಸಲಹಾ ಮಂಡಳಿ ರಚನೆಯಾದ ಬಳಿಕ ಮೊದಲ ಸಭೆಯು ರಾಜ್ಯದಲ್ಲಿಯೇ ನಡೆಯುತ್ತಿರುವುದರಿಂದ ರಾಜ್ಯ ಕಾಂಗ್ರೆಸ್‌ ವ್ಯವಸ್ಥಿತವಾಗಿ ಆಯೋಜಿಸಿದೆ. ಮೊದಲ ದಿನದಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಪಕ್ಷದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಂಡಳಿಯ 24 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್‌ ಮುಖಂಡರಾದ ಬಿ.ಕೆ. ಹರಿಪ್ರಸಾದ್‌,  ಅಶೋಕ್‌ ಗೆಹಲೋಟ್‌, ಭೂಪೇಶ್‌ ಬಘೇಲ್‌, ವಿ. ನಾರಾಯಣಸ್ವಾಮಿ, ಸಚಿನ್‌ ಪೈಲಟ್‌, ಗುರುದೀಪ್‌ ಸಿಂಗ್‌ ಸಪ್ಪಲ್‌, ಅರುಣ್‌ ಯಾದವ್‌, ವಿ. ಹನುಮಂತರಾವ್‌, ಅಮಿತ್‌ ಚಾವ್ಡಾ ಸೇರಿದಂತೆ ಇತರರು ಭಾಗಿಯಾಗಿದ್ದು, ವಿಶೇಷ ಆಹ್ವಾನಿತರಾಗಿ ಸಚಿವರಾದ ಮಧು ಬಂಗಾರಪ್ಪ, ಭೋಸ್ ರಾಜ್, ಸಂತೋಷ್ ಲಾಡ್, ಮಂಕಾಳ್ ವೈದ್ಯ, ಭೈರತಿ ಸುರೇಶ್ ಭಾಗಿಯಾಗಿದ್ದರು.

ಮೀಸಲಾತಿಗಿಂತ ಘನತೆ, ಮನ್ನಣೆಗಾಗಿ ಹೋರಾಟ: ಸಿಎಂ 

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದಲ್ಲಿ ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇಂತಹ ಸಮಯದಲ್ಲಿ ದೇಶದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಬೇಕಾಗಿದೆ. ಇದು ನಮ್ಮ ಕರ್ತವ್ಯವಾಗಿದೆ.  ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿಗಾಗಿ ಹೋರಾಟವಲ್ಲ, ಬದಲಿಗೆ ಈ ವರ್ಗಗಳ ಮನ್ನಣೆ, ಘನತೆಗಾಗಿ ಹೋರಾಟ ನಡೆಸಲಾಗುತ್ತಿದೆ. ಆದ್ದರಿಂದ, ಇದನ್ನು ಸಂಕಲ್ಪದ ಮನೋಭಾವದಿಂದ ಪ್ರಾರಂಭಿಸಬೇಕಾಗಿದೆ. ರಾಜಕೀಯವನ್ನು ಮೀರಿ ತುಳಿತಕ್ಕೊಳಗಾದವರಲ್ಲಿ ಒಗ್ಗಟ್ಟನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು. 

 ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿದ್ದರೆ ಭಾರತ ಎಂದಿಗೂ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ತಮ್ಮ ಶ್ರಮದ ಮೂಲಕ ರಾಷ್ಟ್ರವನ್ನು ನಿರ್ಮಿಸಿದ ಹಿಂದುಳಿದ ವರ್ಗಗಳಿಗೆ ಹುಟ್ಟಿನಿಂದಲೇ ಜಾತಿಯಿಂದ ಸೀಮಿತಗೊಳಿಸಲ್ಪಟ್ಟು ಕಲಿಕೆ, ಭೂಮಿ ಮತ್ತು ನಾಯಕತ್ವವನ್ನು ನಿರಾಕರಿಸಲಾಯಿತು. ಶತಮಾನಗಳಿಂದ ಕೆಳ ಸಮುದಾಯಕ್ಕೆ ನೀಡಿರುವ ಕಿರುಕುಳವನ್ನು ಊಹಿಸಲು ಸಾಧ್ಯವಿಲ್ಲ.  ಪರಿಣಾಮವಾಗಿ, ಅಸಂಖ್ಯಾತ ಮಕ್ಕಳು ಎಂದಿಗೂ ತರಗತಿಯನ್ನು ನೋಡಲಾಗಲಿಲ್ಲ. ಮೇಲ್ಜಾತಿಯ ಪ್ರಾಬಲ್ಯ, ಅಧಿಕಾರ ಮತ್ತು ಸಂಪನ್ಮೂಲಗಳ ಮೇಲಿನ ನಿಯಂತ್ರಣದಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ. 

ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಬದ್ಧ 

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸ್ ಅವರ ನಾಡಿನಲ್ಲಿ ಸಾಮಾಜಿಕ ನ್ಯಾಯ ಕೇವಲ ಘೋಷಣೆಯಲ್ಲ, ಅದು ಒಂದು ಜೀವಂತ ರಾಜಕೀಯ ಚೈತನ್ಯ. ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನೊಳಗೊಂಡ ಅಹಿಂದ ವರ್ಗಗಳ ಸಹಾಯವಿಲ್ಲದೆ ಭಾರತವು ನಿಜವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯವಿಲ್ಲ. ಜಾತಿ ತಾರತಮ್ಯದಿಂದಾಗಿ ಉಂಟಾದ ಬಡತನ ಮತ್ತು ಉನ್ನತ ಜಾತಿಗಳ ಆಧಿಪತ್ಯದಿಂದ ಒಬಿಸಿಗಳು ಶಿಕ್ಷಣ, ಭೂಮಿ ಮತ್ತು ನಾಯಕತ್ವದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಐತಿಹಾಸಿಕ ಸಾಮಾಜಿಕ ಸುಧಾರಣೆಗಳ ಸ್ಮರಣೆ:

12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ, 1918ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಸಮಿತಿ ವರದಿ ಮತ್ತು 1975ರಲ್ಲಿ ದೇವರಾಜ ಅರಸ್ ಅವರ ಅವಧಿಯಲ್ಲಿ ರಚನೆಯಾದ ಹಾವನೂರ್​ ಆಯೋಗದಂತಹ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. 1979ರ ಮಂಡಲ್ ಆಯೋಗದ ಶಿಫಾರಸುಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದು ಶೇ. 27ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.  ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವಿರೋಧದ ನಡುವೆಯೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ ಎಂದು ಹೇಳಿದ್ದಾರೆ. 

ಕರ್ನಾಟಕದಲ್ಲಿ 1995ರಲ್ಲಿ ಜಾರಿಯಾದ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ  ಮತ್ತು 2015ರ ಕಂಠರಾಜ ಆಯೋಗದ ಸಮೀಕ್ಷೆಯ ಮೂಲಕ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರವು 2019ರಿಂದ 2023ರ ಅವಧಿಯವರೆಗೆ ಈ ಪ್ರಮುಖ ವರದಿಗಳನ್ನು ಮರೆಮಾಚಿದೆ. ಒಬಿಸಿ ಸಲಹಾ ಮಂಡಳಿಯ ಈ ಮೊದಲ ಸಭೆಯು ಸಾಮಾಜಿಕ ನ್ಯಾಯ ಚಳವಳಿಯ ಮೂಲವಾಗಿದ್ದು, ಅಹಿಂದ ಸಮುದಾಯಗಳ ಸಹಭಾಗಿತ್ವದ ಮೂಲಕ ಇದು ಮತ್ತಷ್ಟು ಶಕ್ತಿ ಪಡೆಯಬೇಕು. ಜಾತಿ ಗಣತಿ, ಶಿಕ್ಷಣ ಸಬಲೀಕರಣ, ಖಾಸಗಿ ವಲಯದಲ್ಲಿ ಮೀಸಲಾತಿ, ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುವ ಮೂಲಕ ಒಬಿಸಿಗಳ ಸಬಲೀಕರಣವನ್ನು ಖಚಿತಪಡಿಸುವುದು ಸರ್ಕಾರದ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ. 

ಪರಿಚಯ ಮಾಡಿಕೊಟ್ಟು ತೆರಳಿದ ಡಿಕೆಶಿ

ಎಐಸಿಸಿ ಒಬಿಸಿ ಸಲಹಾ ಮಂಡಳಿ ಸದಸ್ಯರ ಮೊದಲ ಸಭೆಯಲ್ಲಿ ಸದಸ್ಯರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರಿಚಯ ಮಾಡಿಕೊಟ್ಟು ತೆರಳಿದರು. ಎಲ್ಲಾ ಸದಸ್ಯರಿಗೆ 25 ಸಾವಿರ ರೂಪಾಯಿ ಮೌಲ್ಯದ ಕಂಚಿನ ಗಾಂಧಿ ಪ್ರತಿಮೆ ನೀಡಿ ಸನ್ಮಾನಿಸಿದರು. ಬಳಿಕ ಸಭೆಯಿಂದ ಡಿ.ಕೆ.ಶಿವಕುಮಾರ್‌ ತೆರಳಿದರು. ಒಬಿಸಿ ಸಲಹಾ ಮಂಡಳಿ ಸದಸ್ಯರ ಸಭೆಯಾಗಿರುವ ಕಾರಣ ನಿರ್ಗಮಿಸಿದರು.

Tags:    

Similar News