
ದೇವನಹಳ್ಳಿ ರೈತರ ಬೇಡಿಕೆ ಈಡೇರಿಕೆ ಹಿಂದೆ ಸಿದ್ದರಾಮಯ್ಯ ಜಾಣ ನಡೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಭಟನೆ ನಡೆದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಕೈಗೊಂಡು ರೈತರ ಪರವಾಗಿದೆ ಎಂಬ ಸಂದೇಶ ರವಾನಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ದೇವನಹಳ್ಳಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಜಯಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಸರ್ಕಾರವು ಆ ಭಾಗದ ರೈತರ ಬೇಡಿಕೆ ಈಡೇರಿಕೆ ಮಾಡಿದೆ. ಆದರೆ, ಇದು ಸಿದ್ದರಾಮಯ್ಯ ಅವರ ಜಾಣ ನಡೆ ಎಂಬುದಾಗಿ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ರೈತ ಮುಖಂಡರು ಭಾಗವಹಿಸಿದ್ದರು. ಸಭೆಯು ನಿರೀಕ್ಷೆಯಂತೆ ರೈತರ ಪರವಾಗಿಯೇ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ನಿರ್ಣಯದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾಣ ನಡೆ ಅಡಗಿದೆ ಎಂದು ಹೇಳಲಾಗಿದೆ.
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಆದರೂ ಕೆಲವು ರೈತರು ಜಮೀನು ನೀಡಲು ಸಿದ್ಧರಿದ್ದಾರೆ. ಅವರು ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದೆ. ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು. ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಜಮೀನು ನೀಡುವವರು ಮುಕ್ತವಾಗಿ ನೀಡಬಹುದು ಎಂಬ ಮುಕ್ತ ಆಹ್ವಾನ ನೀಡಿದ್ದಾರೆ. ಇದರಿಂದ ಹೋರಾಟಗಾರರಿಗೂ ಮತ್ತು ಸರ್ಕಾರಕ್ಕೂ ಸಮಾನ ಜಯ ಸಿಕ್ಕಂತಾಗಿದೆ. ಯಾರಿಗೂ ಲಾಭ-ನಷ್ಟ ಇಲ್ಲ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.
ಕಾರಣ ಏನೇ ಇರಬಹುದು ಜಮೀನು ಸ್ವಾಧೀನ ಕೈಬಿಟ್ಟಿರುವುದರಿಂದ ಅಲ್ಲಿ ಬರುವ ಉದ್ಯಮಿಗಳು ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ರೈತರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಹಾಗಾದರೆ ಉದ್ಯಮಿಗಳಿಗೆ ಯಾವ ರೀತಿಯ ಅಶ್ವಾಸನೆ ನೀಡಲಾಗುತ್ತದೆ ಎಂಬುದು ಯಕ್ಷಪ್ರಶ್ನೆ ಮೂಡಿದೆ. ಉದ್ಯಮಿಗಳು ಬೇರೆ ರಾಜ್ಯಕ್ಕೆ ಹೋಗಲು ಬಯಸಿದರೆ ಅವರನ್ನು ಬಿಟ್ಟು ಬಿಡಲಾಗುತ್ತದೆಯೇ? ಅಥವಾ ರಾಜ್ಯದಲ್ಲಿಯೇ ಬೇರೊಂದು ಕಡೆ ಭೂಮಿ ನೀಡಿ ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಮುಂದಿನ ದಿನದಲ್ಲಿ ಉದ್ಯಮಿಗಳ ವಿಚಾರದಲ್ಲಿ ಸಿದ್ದರಾಮಯ್ಯ ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಪ್ರತಿಪಕ್ಷ ನಾಯಕರಾಗಿದ್ದ ನೀಡಿದ ಭರವಸೆ
ಬಿಜೆಪಿ ಸರ್ಕಾರದ ಆಡಳಿತವಧಿಯಿಂದಲೂ ದೇವನಹಳ್ಳಿ ರೈತರು ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಳೆದ ಮೂರು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿತ್ತು. ಈ ವೇಳೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಶ್ವಾಸನೆ ನೀಡಿದ್ದರು.
ಈ ಹಿಂದೆ ನೀಡಿದ ಭರವಸೆಯಂತೆಯೇ ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ತೀರ್ಮಾನ ಕೈಗೊಂಡರು. ಇದು ರೈತರ ಪರ ಇರುವ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಸಿದ್ದರಾಮಯ್ಯ ರಾಜಕೀಯವಾಗಿ ಕೈಗೊಳ್ಳುವ ತೀರ್ಮಾನಗಳು ಜಾಣೆಯ ನಡೆಯಾಗಿರುತ್ತವೆ. ಸದ್ಯಕ್ಕೆ ಹೋರಾಟ ನಿಲ್ಲಿಸಿದರೆ ಸರ್ಕಾರ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ತಡೆಯಬಹುದು. ಅಲ್ಲದೇ, ರೈತರ ಪರವಾಗಿ ನಿಂತಿದ್ದೇವೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.
ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ತಂತ್ರಗಾರಿಕೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ರೈತ ವಿರೋಧಿಯಾಗಿದೆ. ಕಾಂಗ್ರೆಸ್ ಸರ್ಕಾರ ನಿರ್ಧಾರ ಕೈಗೊಳ್ಳುವ ಮೂಲಕ ರೈತರ ಪರವಾಗಿ ನಿಂತಿದೆ ಎಂಬುದನ್ನು ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡುವ ತಂತ್ರಗಾರಿಕೆಯೂ ಸಿದ್ದರಾಮಯ್ಯ ನಿರ್ಣಯದಲ್ಲಿ ಅಡಗಿದೆ ಎಂದು ಹೇಳಲಾಗಿದೆ.
ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯಗೆ ಸಮಾಜವಾದಿ ಇಲ್ಲವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸುತ್ತಿದೆ. ಸಿದ್ದರಾಮಯ್ಯ ಮಜಾವಾದಿ ಎಂದೆಲ್ಲಾ ಟೀಕೆಗಳನ್ನು ಮಾಡಿತ್ತು. ಇದಕ್ಕೆಲ್ಲಾ ಈ ಮೂಲಕ ಉತ್ತರ ನೀಡುವ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಪರ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಬಿಜೆಪಿ ರೈತ ವಿರೋಧಿಯಾಗಿದೆ. ಕೇವಲ ಭಾಷಣದಲ್ಲಿ ರೈತರ ಪರವಾಗಿ ಮಾತನಾಡಲಾಗುತ್ತದೆ. ಆದರೆ, ರೈತರ ಪರ ನಿರ್ಣಯ ಕೈಗೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸುವುದು ಸಹ ಇದರ ಹಿಂದೆ ಅಡಗಿದೆ ಎನ್ನಲಾಗಿದೆ.