ದೇವನಹಳ್ಳಿ ಭೂಸ್ವಾಧೀನ ಕಗ್ಗಂಟು | 1200 ದಿನಗಳ ರೈತ ಹೋರಾಟಕ್ಕೆ ಮಣಿದ ಸರ್ಕಾರ
x

ದೇವನಹಳ್ಳಿ ಭೂಸ್ವಾಧೀನ ಕಗ್ಗಂಟು | 1200 ದಿನಗಳ ರೈತ ಹೋರಾಟಕ್ಕೆ ಮಣಿದ ಸರ್ಕಾರ

ಮಂಗಳವಾರ(ಜು.15) ಸಿಎಂ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ರೈತರ ಜತೆಗಿನ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.


ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಲು ನಿರ್ಧರಿಸಿದೆ.

ಮಂಗಳವಾರ(ಜು.15) ಸಿಎಂ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ರೈತರ ಜತೆಗಿನ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಆದರೆ, ರೈತರು ಸ್ವಯಂ ಪ್ರೇರಿತರಾಗಿ ಭೂಮಿ ಮಾರಾಟ ಮಾಡಲು ಮುಂದೆ ಬಂದರೆ ಒಪ್ಪಂದದ ಮೇಲೆ ಖರೀದಿಸಲಾಗುವುದು. ಅದನ್ನು ಯಾರು ತಡೆಯಲು ಆಗುವುದಿಲ್ಲ, ನಮಗೆ ಕೈಗಾರಿಕೆಗಳೂ ಅಭಿವೃದ್ಧಿಯಾಗಬೇಕು. ಜಮೀನು ಕೊಡುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.

ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ದೊಡ್ಡ ಪ್ರತಿಭಟನೆ ನಡೆದಿರಲಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೋರಾಟಗಾರರ ಅಭಿಮತ

ಮುಖ್ಯಮಂತ್ರಿ ಅವರ ಸಾಮಾಜಿಕ ನ್ಯಾಯ ಕೇವಲ ನುಡಿಯಲ್ಲಿ ಮಾತ್ರವಲ್ಲ, ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ರೈತ ನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ, ಭೂಮಿಯನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳುವುದಕ್ಕೆ ನಮ್ಮ ವಿರೋಧ ಇದೆ. ಜನ ಚಳವಳಿ ಪರಂಪರೆಯಾಗಿದೆ. ಸಾವಿರಾರು ಮನಸ್ಸುಗಳು ಒಟ್ಟಾಗಿವೆ. ಭೂಮಿ ಉಳಿಸಿಕೊಳ್ಳಲು ಮಹಿಳೆಯರು ಮಾಡಿದ ಹೋರಾಟದ ಫಲವಾಗಿ ಇಂದು ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈ ಬಿಟ್ಟಿದೆ ಎಂದು ಹೇಳಿದರು.

ಏರೋಸ್ಪೇಸ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ 1777 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಭೂಸ್ವಾಧೀನಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಇತ್ತೀಚೆಗೆ ರೈತರು ಹಾಗೂ ಹೋರಾಟಗಾರರ ಜತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 10 ದಿನಗಳ ಕಾಲಾವಕಾಶ ಕೋರಿದ್ದರು. ಕಾನೂನು ತಜ್ಞರ ಜತೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವುದರಿಂದ ಭೂಸ್ವಾಧೀನ ಕೈಬಿಟ್ಟರೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದಿದ್ದರು.

ಅದರಂತೆ ಇಂದು ರೈತರ ನಿಯೋಗದೊಂದಿಗೆ ಸಭೆ ನಡೆಸಿದ ಸಿಎಂ ಅವರು ರೈತರ ಒತ್ತಾಯಕ್ಕೆ ಮಣಿದು ನಿರ್ಧಾರ ಪ್ರಕಟಿಸಿದರು ಎಂದು ಹೇಳಲಾಗಿದೆ.

ಶನಿವಾರವಷ್ಟೇ ಕೆಲ ರೈತ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ 449 ಭೂಮಿ ಕೊಡುವುದಾಗಿ ತಿಳಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತ ಹೋರಾಟಗಾರರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವ ರೈತರ ಭೂಮಿ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯಲ್ಲಿಲ್ಲ. ಸರ್ಕಾರ ರೈತರ ನಡುವೆ ಬಿರುಕು ಸೃಷ್ಠಿಸುವ ಕೆಲಸ ಮಾಡುತ್ತಿದೆ. 1200 ದಿನಗಳಿಂದ ಹೋರಾಟ ಮಾಡುತ್ತಿದ್ದ ನಮಗೆ ಮುಖ್ಯಮಂತ್ರಿ ಸಮಯ ನೀಡಿರಲಿಲ್ಲ. ಒಂದೇ ದಿನದಲ್ಲಿ ಹುಟ್ಟಿಕೊಂಡ ನಕಲಿ ರೈತರ ಭೇಟಿಗೆ ಅವಕಾಶ ನೀಡಿರುವುದರಲ್ಲೇ ಸರ್ಕಾರದ ಷಡ್ಯಂತ್ರ್ಯ ಕಾಣುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದರು.

ಭೂಸ್ವಾಧೀನಕ್ಕೆ ಚಿತ್ರರಂಗ, ಸಾಹಿತಿಗಳಿಂದ ವಿರೋಧ

ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಹಾಗೂ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಟರಾದ ಪ್ರಕಾಶ್‌ ರಾಜ್‌ ಹಾಗೂ ಕಿಶೋರ್‌ ರೈತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತ ಹೋರಾಟಗಾರರ ಸಭೆಯಲ್ಲಿಯೂ ನಟ ಪ್ರಕಾಶ್‌ ರಾಜ್‌ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕೂಡ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದು ಸರ್ಕಾರ ಭೂಸ್ವಾಧೀನ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ತಿಳಿಸಿದ್ದರು.


Live Updates

  • 15 July 2025 3:48 PM IST

    ಭೂಸ್ವಾಧೀನ ಬೆಂಬಲಿಸಿದ್ದ ಸಚಿವದ್ವಯರಿಗೆ ಮುಖಭಂಗ

    ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ರೈತರಲ್ಲಿ ಸಂಭ್ರಮ ಗರಿಗೆದರಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಿಂದ ದೂರ ಸರಿಯಲು ಇಷ್ಟಪಡದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ನಿರಾಶೆ ಎದುರಾಗಿದೆ. 

    ಸಿಎಂ ಪತ್ರಿಕಾಗೋಷ್ಠಿ ವೇಳೆ ಉಭಯ ಸಚಿವರ ಮುಖಭಾವ ಹಾಗೂ ಸಿಎಂ ಅವರ ನಗುಮೊಗದ ಪ್ರತಿಕ್ರಿಯೆ ತೀವ್ರ ವೈರಲ್‌ ಆಗುತ್ತಿದೆ. ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಸಮಿತಿಯ ಮುಖಂಡರು ಕೂಡ ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಈ ಕುರಿತು ವ್ಯಂಗ್ಯವಾಡಿದ್ದಾರೆ. 

     

  • 15 July 2025 1:46 PM IST

    ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರ ಸಂಭ್ರಮಾಚರಣೆ

    ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತು ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರೈತ ಮುಖಂಡರು, ಚಿಂತಕರು ಹಾಗೂ ಹೋರಾಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.  ಸಮಸ್ತ ರೈತಪರ ಸಂಘಟನೆಗಳ ಹಾಗೂ ಸಮಾನ ಮನಸ್ಕರ ಸಮಾವೇಶದ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. 

     

Read More
Next Story