ದೇವನಹಳ್ಳಿ ರೈತ ಹೋರಾಟ | ಭೂ ಸ್ವಾಧೀನ ವಿರೋಧಿ ಅಹೋರಾತ್ರಿ ಧರಣಿಗೆ 1000 ದಿನ
x

ದೇವನಹಳ್ಳಿ ರೈತ ಹೋರಾಟ | ಭೂ ಸ್ವಾಧೀನ ವಿರೋಧಿ ಅಹೋರಾತ್ರಿ ಧರಣಿಗೆ 1000 ದಿನ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 1000 ದಿನ ಪೂರೈಸಿದೆ. ರೈತರ ಹೋರಾಟ ಬೆಂಬಲಿಸಿ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು, ಚಿತ್ರನಟ, ರೈತ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.


ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಡಿ.28ಕ್ಕೆ 1000 ದಿನ ಪೂರೈಸಿದೆ. ಪ್ರತಿಭಟನೆಯು ಸಾವಿರ ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಡಿ. 30ರಂದು ಸೋಮವಾರ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಚಿತ್ರ ನಟ ಪ್ರಕಾಶ್‌ ಸೇರಿದಂತೆ ಹಲವು ರೈತ ಹೋರಾಟಗಾರರ ನೇತೃತ್ವದಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಸಲು ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ವೇದಿಕೆ ನಿರ್ಧರಿಸಿದೆ.

ಹೋಬಳಿಯಲ್ಲಿ 1771 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಇದರ ಪೈಕಿ 435 ಎಕರೆಗೆ ಅಂತಿಮ ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ, ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟುಕೊಡಲು ಒಪ್ಪದ 13 ಗ್ರಾಮಗಳ ರೈತರು ಸಾವಿರ ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈಚೆಗೆ ಚನ್ನರಾಯಪಟ್ಟಣ ರೈತರ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ರಾಜ್ಯ ಸರ್ಕಾರ ರೈತರ ಪರವಾಗಿದೆ. ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ 435 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಆಗುವುದಿಲ್ಲ. ಆದರೂ ರೈತ ಹಿತ ಗಮನದಲ್ಲಿ ಇರಿಸಿಕೊಂಡು ಕಾನೂನು ಸಾಧ್ಯತೆಗಳ ಕುರಿತು ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸುತ್ತೇನೆ. ಜನವರಿ ಮೊದಲ ವಾರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಸಿಎಂ ಅವರ ಮಾತಿಗೆ ರೈತ ಮುಖಂಡರು ಒಪ್ಪಿರಲಿಲ್ಲ. ಅಧಿಸೂಚನೆ ಕೈ ಬಿಡುವ ಅಧಿಕಾರ ಸರ್ಕಾರಕ್ಕಿದೆ. ರೈತರು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದ್ದರು.


ಸಾವಿರ ದಿನದ ಅಂಗವಾಗಿ ಹಕ್ಕೊತ್ತಾಯ ನಾಳೆ

ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸಾವಿರ ದಿನ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಸಾರ್ಥಕಗೊಳಿಸಲು ಹಾಗೂ ಹಕ್ಕೊತ್ತಾಯ ಮಾಡುವ ಸಲುವಾಗಿ ಗಣ್ಯರು, ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. 1002 ನೇ ದಿನದ(ಡಿ.30) ಹೋರಾಟದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಚಿತ್ರ ನಟ ಪ್ರಕಾಶ್ ರೈ, ದಲಿತ ನಾಯಕ ಮಾವಳ್ಳಿ ಶಂಕರ್ ಅವರು ಭಾಗವಹಿಸಿ ರೈತರ ಪ್ರತಿಭಟನೆ ಬೆಂಬಲಿಸಲಿದ್ದಾರೆ. ಈಗಾಗಲೇ ರೈತರ ನಿಯೋಗದೊಂದಿಗೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು ಜನವರಿ ಮೊದಲ ವಾರದಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಪ್ರಬಲ ಹಕ್ಕೊತ್ತಾಯವನ್ನು ಸರ್ಕಾರದ ಮುಂದಿಡಲಾಗುವುದು. ರೈತರ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅವರಿಗೂ ವಿವರಿಸಲಾಗುವುದು ಎಂದು ಭೂಸ್ವಾಧೀನ ವಿರೋಧಿ ಹೋರಾಟ ವೇದಿಕೆ ಮುಖಂಡ ಪೋಲೇನಹಳ್ಳಿ ಪ್ರಮೋದ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.


ಚನ್ನರಾಯಪಟ್ಟಣ ಹೋಬಳಿಯಲ್ಲಿ ಈಗಾಗಲೇ ಮೂರು ಬಾರಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಮತ್ತೊಂದು ಭೂಸ್ವಾಧೀನದಿಂದ ಫಲವತ್ತಾದ ಕೃಷಿ ಭೂಮಿ ಕಣ್ಮರೆಯಾಗಲಿದೆ ಎಂಬುದು ರೈತಲು ಅಳಲು. ರೈತರ ಹೋರಾಟದ ಕುರಿತು ʼದ ಫೆಡರಲ್‌ ಕರ್ನಾಟಕʼ ಚನ್ನರಾಯಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಿಗೆ ತೆರಳಿ ಗ್ರೌಂಡ್‌ ರಿಪೋರ್ಟ್‌ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ರೈತರ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿತ್ತು.

Read More
Next Story