KIADB Land Acquisition | ಸಾವಿರ ದಿನಗಳತ್ತ ದೇವನಹಳ್ಳಿ ರೈತರ ಹೋರಾಟ; ಮಣಿಯುವುದೇ ಸರ್ಕಾರ?
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿಯಿಂದ ಸುಮಾರು 1777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ನ.11ರಂದು 953 ದಿನಗಳು ಪೂರೈಸಿ ಸಾವಿರ ದಿನಗಳತ್ತ ಸಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನ ಹಳ್ಳಿಗಳ ರೈತರು ಈ ಐತಿಹಾಸಿಕ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು KIADB (ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ) ಭೂ ಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನ.11ಕ್ಕೆ (ಸೋಮವಾರ) 953 ದಿನಗಳು ಪೂರೈಸಿವೆ. ಇನ್ನು 47 ದಿನಗಳಲ್ಲಿ ಸಾವಿರ ದಿನದ ಹೋರಾಟ ಮಹತ್ವದ ಮೈಲಿಗಲ್ಲಾಗಲಿದೆ.
ಫೆಬ್ರವರಿ 16 ರಂದು ಜಿಲ್ಲಾಧಿಕಾರಿ ಕಚೇರಿಗೆ ರೈತರು ಟ್ರ್ಯಾಕ್ಟರ್ ಯಾತ್ರೆ ನಡೆಸಿದರು. ರೈತರ ಕೂಗಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಹೋರಾಟದ ಕಾವು ಹೆಚ್ಚಿಸಲು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮಾಡಿಕೊಂಡು 2022 ರ ಏಪ್ರಿಲ್ 4 ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಹಲವು ಏಳುಬೀಳುಗಳ ನಡುವೆ ರೈತರ ಹೋರಾಟ 1000 ದಿನದ ಗಡಿಯಲ್ಲಿದೆ.
ಕರಾಳ ದಿನಗಳು
ಅಂದು 2022 ಜನವರಿ 1. ಇಡೀ ದೇಶ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ಮಾತ್ರ ಕರಾಳ ದಿನವಾಗಿ ಮಾರ್ಪಟ್ಟಿತ್ತು.
ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿಯ ಎರಡನೇ ಹಂತದ ವಿಸ್ತರಣೆಗಾಗಿ ಕೆಐಎಡಿಬಿಯು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತು. ಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಚನ್ನರಾಯಪಟ್ಟಣ, ಪಾಳ್ಯ, ಮಟ್ಟು ಬಾರ್ಲು, ಪೋಲನಹಳ್ಳಿ ಹರಳೂರು, ಟಿ. ತೆಲ್ಲೋಹಳ್ಳಿ, ನಲ್ಲೂರು, ಮುದ್ದೇನಹಳ್ಳಿ, ಚೀಮಾಚನಹಳ್ಳಿ, ನಲಪ್ಪನಹಳ್ಳಿ, ಮಲಲ್ಲೆಪುರ, ಹ್ಯಾಡಾಳು ಮತ್ತು ಗೊಕರೆ ಬಚ್ಚಹಳ್ಳಿ ಗ್ರಾಮಗಳ 1777.28 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ ನೋಟೀಸ್ ನೀಡಿತು. ಇದರಿಂದ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ರೈತರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಭಾಸವಾಯಿತು.
ತಡಮಾಡದೇ ಹದಿಮೂರು ಹಳ್ಳಿಗಳ ರೈತರು, ಯುವಕರು, ಮಹಿಳೆಯರನ್ನು ಸಭೆ ನಡೆಸಿ, ಕೆಐಎಡಿಬಿ ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಸಜ್ಜಾದರು. 2022 ಜನವರಿ 28 ರಂದು ಕೆಐಎಡಿಬಿ ನೀಡಿದ್ದ ನೊಟೀಸ್‌ಗಳನ್ನು ಬಹಿರಂಗವಾಗಿ ಸುಟ್ಟು ಪ್ರತಿಭಟನೆಗೆ ಶ್ರೀಕಾರ ಬರೆದರು.
ರೈತರ ವಿರೋಧ ಏಕೆ ?
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನಕ್ಕೆ ಒಳಪಡುವ 1777.28 ಎಕರೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು. ಅಧಿಸೂಚನೆ ಪ್ರಕಾರ ಖಾತೆದಾರರ ಒಟ್ಟು ಸಂಖ್ಯೆ 1867 ಅಂದರೆ ಬಹುತೇಕ ತುಂಡು ಭೂಮಿ ಹೊಂದಿರುವ ರೈತರು ಎಂಬುದು ಇಲ್ಲಿ ಸ್ಫಷ್ಟವಾಗುತ್ತದೆ.
ಸ್ವಾಧೀನಕ್ಕೊಳಪಟ್ಟ ಶೇ 42 ರಷ್ಟು ಭೂಮಿಯನ್ನು ಸರ್ಕಾರವೇ ಭೂರಹಿತ ರೈತರಿಗೆ ಮಂಜೂರು ಮಾಡಿತ್ತು. ಇಲ್ಲಿ ಶೇ 58 ರಷ್ಟು ಪಿತ್ರಾರ್ಜಿತವಾಗಿ ಬಂದ ಮತ್ತು ಖರೀದಿ ಮಾಡಿದ ಜಮೀನುಗಳಾಗಿವೆ. ಈ ಭೂಮಿಯಲ್ಲಿ ಸಮುದಾಯವಾರು ಕೃಷಿ ನೋಡುವುದಾದರೆ ಶೇ 69ರಷ್ಟು ಒಕ್ಕಲಿಗರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದವರ ಭೂಮಿ ಇದೆ. ಶೇ 29ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಭೂಮಿಯಾಗಿದೆ. ಉಳಿದ ಶೇ 2 ಮೇಲ್ಜಾತಿಗಳಿಗೆ ಸೇರಿದ ಭೂಮಿ ಇದೆ. ಸ್ವಾಧೀನಕ್ಕೆ ಉದ್ದೇಶಿಸಿರುವ ಭೂಮಿಯಲ್ಲಿ ಶೇ 33 ನೀರಾವರಿ, ಶೇ50 ಖುಷ್ಕಿ ಭೂಮಿಯಾಗಿದೆ. ಉಳಿದ ಶೇ 17 ಬೀಳು, ಮತ್ತಿತರೆ ಭೂಮಿಯಾಗಿದೆ.
ಇನ್ನು ಸ್ವಾಧೀನಕ್ಕೆ ಉದ್ದೇಶಿಸಿರುವ ಭೂಮಿಯಲ್ಲಿಆಹಾರ ಧಾನ್ಯಗಳಾದ ರಾಗಿ, ಅವರೆ, ತೊಗರಿ ಹೆಚ್ಚು ಬೆಳೆಯಲಾಗುತ್ತದೆ. ನೀರಾವರಿ ಹೊರತುಪಡಿಸಿದ ಖುಷ್ಕಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಪ್ರಮಾಣ ಶೇ 49 ರಷ್ಟಿದ್ದರೆ, ಇನ್ನು ವಾಣಿಜ್ಯ, ತೋಟಗಾರಿಕಾ ಬೆಳೆಗಳು ಮತ್ತು ಹೂವು ಶೇ 12 ರಷ್ಟಿದೆ. ಮಾವು, ಗೋಡಂಬಿ ಸೇರಿ ಮಳೆಯಾಧಾರಿತ ಬೆಳೆಗಳು ಶೇ 23. ರೇಷ್ಮೆ ಕೃಷಿ ಶೇ 9 ರಷ್ಟಿದೆ. ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆ ಶೇ 7 ರಷ್ಟಿದೆ. ಹಾಗಾಗಿ ರೈತರಿಗೆ ಹೋರಾಟ ಅನಿವಾರ್ಯವಾಗಿದೆ ಎಂದು ರೈತ ಮುಖಂಡರು ಅಭಿಪ್ರಾಯಪಡುತ್ತಾರೆ.
ಭೂರಹಿತವಾಗಲಿವೆ 387 ಕುಟುಂಬಗಳು
ಸ್ವಾಧೀನ ಪ್ರಕ್ರಿಯೆಯಲ್ಲಿ 387 ಕುಟುಂಬಗಳು ಸಂಪೂರ್ಣ ಭೂಮಿ ಕಳೆದುಕೊಳ್ಳಲಿವೆ. ಸುಮಾರು 2989 ಜನರು ಭೂ ರಹಿತರಾಗಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ 162 ಕುಟುಂಬಗಳ 859 ಜನರು, ಒಕ್ಕಲಿಗ ಮತ್ತಿತರೆ ಓಬಿಸಿಯ 224 ಕುಟುಂಬಗಳಿಗೆ ಸೇರಿದ 2130 ಜನರು ಭೂರಹಿತರಾಗಲಿದ್ದಾರೆ.
ಕೆಐಎಡಿಬಿ ಉದ್ದೇಶಿತ ಭೂಸ್ವಾಧೀನ ವ್ಯಾಪ್ತಿಯಲ್ಲಿ 224 ಕೊಳವೆಬಾವಿಗಳು ಮತ್ತು 162 ಕೃಷಿ ಹೊಂಡಗಳು ಇವೆ. 26 ವಾಸದ ಮನೆಗಳು, 5 ಕೋಳಿಫಾರಂ, 9 ವಾಣಿಜ್ಯ ಕಟ್ಟಡಗಳು ಮತ್ತು ಪಾಲಿಹೌಸ್‌ಗಳು, 72 ದನದ ಕೊಟ್ಟಿಗೆಗಳು ಸ್ವಾಧೀನವಾಗಲಿವೆ.
ಹೈನುಗಾರಿಕೆ ಮುಖ್ಯ ಕಸುಬು
ಹದಿಮೂರು ಹಳ್ಳಿಗಳಲ್ಲಿ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಈ ಗ್ರಾಮಗಳಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಎಮ್ಮೆ ಹಾಗೂ ಹಸುಗಳಿದ್ದು, ಪ್ರತಿದಿನ ಸುಮಾರು 5000 ಲೀಟರ್ ಹಾಲು ಸಂಗ್ರಹಣೆಯಾಗುತ್ತದೆ. ಇನ್ನೂ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕುರಿ, ಮೇಕೆಗಳಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.
ರೈತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪೊಲೀಸರು!
ಏಪ್ರಿಲ್ 4 ರಂದು ಆರಂಭವಾದ ರೈತರ ಹೋರಾಟ ರಸ್ತೆ ತಡೆ, ಮಂತ್ರಿಗಳ ಮನೆಗಳಿಗೆ ಭೇಟಿ ನೀಡಿ ಮನವಿ ಸಲ್ಲಿಕೆ, ದೇವನಹಳ್ಳಿ ಬಂದ್ ಸೇರಿದಂತೆ ವಿವಿಧ ಹಂತಗಳಲ್ಲಿ ಹೋರಾಟ ನಡೆದಿದೆ. ಆದರೆ, ಆಳುವ ವರ್ಗಗಳು ರೈತರ ಹೋರಾಟಕ್ಕೆ ಜಗ್ಗಲಿಲ್ಲ. 2022 ಆಗಸ್ಟ್ 15 ರಂದು ರೈತರು ದೇವನಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದರು. ಆದರೆ, ಆಗಸ್ಟ್ 14 ರ ರಾತ್ರಿಯೇ ಹೋರಾಟ ನಿರತ ರೈತರ ಮನೆಗಳಿಗೆ ನುಗ್ಗಿದ ಪೊಲೀಸರು ಕೈಗೆ ಸಿಕ್ಕವರನ್ನು ಎಳೆದೊಯ್ದರು, ವಿರೋಧಿಸಿದವರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಪೋಲನಹಳ್ಳಿ ಯುವ ರೈತ ಪ್ರಮೋದ್ ಅವರ ಕಣ್ಣಿಗೆ ಬಲವಾದ ಪೆಟ್ಟುಬಿದ್ದು ಗಾಯವಾಗಿತ್ತು.
ಇಷ್ಟಾದರೂ ಪೊಲೀಸರ ಚಕ್ರವ್ಯೂಹ ಬೇಧಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಭಟನೆ ನಡೆಸಿದ ರೈತರು ಅಂದಿನ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಆಗ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ಮಾಡಿದ್ದರು. ಜೊತೆಗೆ 71 ಮಂದಿ ರೈತರ ಮೇಲೆ ಎಫ್ಐಆರ್ ದಾಖಲಿಸಿದ್ದರು. ಇದುವರೆಗೂ ಹೋರಾಟನಿರತ ರೈತರ ಮೇಲೆ ಮೂರು ಬಾರಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಮ್ಮ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ನೀಡಿರುವ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರತಿಭಟನೆ ತಾರ್ಕಿಕ ಅಂತ್ಯ ಕಾಣದ ಕಾರಣ ನಮ್ಮ ದೈನಂದಿನ ಕೆಲಸಗಳೂ ನಡೆಯುತ್ತಿಲ್ಲ. ನಮ್ಮ ಮನವಿಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ರಾಜಕಾರಣಿಗಳು ಸಹ ನುಡಿದಂತೆ ನಡೆಯುತ್ತಿಲ್ಲ ಎಂದು ರೈತ ಹೋರಾಟಗಾರ ನಂಜಪ್ಪ ದ ಫೆಡರಲ್ ಕರ್ನಾಟಕದೊಂದಿಗೆ ಅಳಲು ತೋಡಿಕೊಂಡರು.
ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ನಮ್ಮ ಒಕ್ಕಲುತನವನ್ನೇ ಒಕ್ಕಲೆಬ್ಬಿಸುತ್ತಿದ್ದಾರೆ. ನಮ್ಮ ಮೇಲೆ ಮೂರು ಬಾರಿ ಎಫ್ಐಆರ್ ದಾಖಲಿಸಿದ್ದಾರೆ. ಅವರು ಏನೇ ಮಾಡಿದರೂ ನಾವು ಹೆದರುವುದಿಲ್ಲ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರ ಪರಿಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣ ಮುಂದಿದೆ. ಇನ್ನೂ ಸಾವಿರ ದಿನವಾದರೂ ಸರಿ ಈ ಹೋರಾಟ ನಡೆಸಿಯೇ ತೀರುತ್ತೇವೆ. ಇದು ನಮ್ಮ ಅಸ್ತಿತ್ವ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಹೋರಾಟ ನಡೆದಷ್ಟೂ ದಿನ ನಾವು ಗಟ್ಟಿಯಾಗುತ್ತಲೇ ಹೋಗುತ್ತೇವೆ ಎಂದು ಆರಂಭದಿಂದಲೂ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರ ನಂಜಪ್ಪ ತಿಳಿಸಿದರು.
ಆಶ್ವಾಸನೆ ನೀಡಿ ಹಿಂದೇಟು ಹಾಕಿದ್ದ ಎಚ್‌ಡಿಕೆ
2023 ರ ವಿಧಾನಸಭಾ ಚುನಾವಣೆಗೂ ಮುನ್ನ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಇಂದಿನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, "ನಾನು ನಿಮ್ಮೊಡನೆ ಸದಾ ಇರುತ್ತೇನೆ. ರೈತರ ಒಂದಿಂಚೂ ಭೂಮಿ ಕಬಳಿಸಲು ಬಿಡುವುದಿಲ್ಲ. ಸದನದಲ್ಲಿ ನಿಮ್ಮ ಪರ ದನಿಯೆತ್ತಿ ಹೋರಾಟ ಮಾಡುತ್ತೇನೆ" ಎಂದು ಭರವಸೆ ನೀಡಿ ಹೋಗಿದ್ದರು. ಇದರಿಂದ ರೈತರು ಹೋರಾಟಕ್ಕೆ ಬಲ ಬಂದಂತಾಗಿತ್ತು. ಮರುದಿನ ರೈತರು ತಾವು ಸಂಗ್ರಹಿಸಿದ್ದ ದಾಖಲೆಗಳನ್ನು ಕೊಡಲು ಹೋದಾಗ ಕುಮಾರಸ್ವಾಮಿ ಅವರೇ, " ನಾನು ಎಲ್ಲವನ್ನೂ ವಿಚಾರಿಸಿದ್ದೇನೆ. ಶೇ75 ರಷ್ಟು ರೈತರು ಭೂಮಿ ಬಿಟ್ಟುಕೊಡಲು ಸಿದ್ದರಿದ್ದಾರೆ. ಹಾಗಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ" ಎಂದು ವಾಪಸ್ ಕಳುಹಿಸಿದ್ದರು. ಮಾಜಿ ಮುಖ್ಯಮಂತ್ರಿಗಳನ್ನು ಅಧಿಕಾರಿಗಳು ದಾರಿ ತಪ್ಪಿಸಿದ್ದರು ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ವಾಸ್ತವದಲ್ಲಿ ಹೋರಾಟ ನಿರತ ರೈತರು ಪ್ರತಿ ಮನೆಗೆ ತೆರಳಿ, ರೈತರ ಅಭಿಪ್ರಾಯಗಳ ಜೊತೆಗೆ ಖಾತೆದಾರರ ಆಧಾರ್ ಕಾರ್ಡ್, ಪಹಣಿ ಸಂಗ್ರಹ ಮಾಡಿದ್ದರು.
ಈ ಪ್ರಕಾರ ಭೂಸ್ವಾಧೀನದ ಬಗ್ಗೆ ತಟಸ್ಥ ನಿಲುವು ಹೊಂದಿರುವವರು ಶೇ 13 ಇದ್ದರೆ, ಭೂಮಿ ಬಿಟ್ಟುಕೊಡಲು ತಯಾರಾಗಿರುವವರು ಶೇ 13 ರಷ್ಟು ಇದ್ದಾರೆ. ಯಾವುದೇ ಕಾರಣಕ್ಕೂ ಕೆಐಎಡಿಬಿಗೆ ಭೂಮಿ ಬಿಟ್ಟುಕೊಡಲು ಸಿದ್ದರಿಲ್ಲದ ರೈತರು ಶೇ74 ರಷ್ಟಿದ್ದಾರೆ.
ಇನ್ನು ರೈತ ಹೋರಾಟಕ್ಕೆ ಯುವಜನರನ್ನು ಸಂಘಟಿಸುತ್ತಿರುವ ಯುವ ಮುಖಂಡ ನಂದನ್ ದ ಫೆಡರಲ್ ಕರ್ನಾಟಕದ ಜೊತೆ ಮಾತನಾಡಿ, ಯುವಜನರು ಸದಾ ಓದು, ಉದ್ಯೋಗದಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದಲ್ಲಿ ಕೆಲವರು ಅಸಡ್ಡೆ ತೋರಿಸಿದ್ದುಂಟು. ಈಗ ತಮ್ಮ ಬಿಡುವಿನ ಸಮಯ ಹೋರಾಟಕ್ಕೆ ಮೀಸಲಿಡುತ್ತಿದ್ದೇವೆ. ನಮ್ಮ ಭೂಮಿ ನಮ್ಮ ಹಕ್ಕು ಎಂಬ ನಿಲುವಿಗೆ ಬಂದಿದ್ದೇವೆ. ಈ ಹೋರಾಟ ಇನ್ನೂ ನಿರಂತರವಾಗಿಸಿ, ನಮ್ಮ ಭೂಮಿಯನ್ನು ಉಳಿಸಿಕೊಂಡೇ ತೀರುತ್ತೇವೆ ಎಂದು ಹೇಳಿದರು.
ರೈತರಿಗೆ ಬೆಂಬಲ ನೀಡಿದ್ದ ಸಿದ್ದರಾಮಯ್ಯ
ಇನ್ನೂ 2022 ರ ಚಳಿಗಾಲದ ಅಧಿವೇಶನದ ವೇಳೆ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ರೈತರ ಹೋರಾಟ ಬೆಂಬಲಿಸಿದ್ದರು. ಇಂದು ಅವರೇ ಮುಖ್ಯಮಂತ್ರಿಯಾಗಿದ್ದರೂ ರೈತರ ಹೋರಾಟಕ್ಕೆ ಸ್ಪಂದಿಸಿಲ್ಲ ಎಂಬ ಅಸಮಾಧಾನ ಈ ಭಾಗದ ರೈತರಲ್ಲಿದೆ. ಈ ಹಿಂದೆ ಬೇಡಿಕೆ ಈಡೇರಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಹದಿನೈದು ದಿನಗಳ ಕಾಲ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹೋರಾಟನಿರತ ರೈತರನ್ನು ಡಿಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರೊಂದಿಗೆ ಭೇಟಿಯಾಗಿದ್ದ ಸಿದ್ದರಾಮಯ್ಯ ಅವರು, ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ನಾವು ಅಧಿಕಾರಕ್ಕೆ ಬಂದರೆ ತಕ್ಷಣ ನಿಮ್ಮ ಭೂಮಿ ಉಳಿಸಿಕೊಡುತ್ತೇವೆ ಎಂಬ ಭರವಸೆ ನೀಡಿದ್ದರು.
ಆದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಫಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಅಂದು ನೀಡಿದ್ದ ಭರವಸೆ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ಮಾಡಿದಾಗ ದಸರಾ ನಂತರ ಮತ್ತೊಮ್ಮೆ ಮಾತುಕತೆ ನಡೆಸುವ ಭರವಸೆ ನೀಡಿದ್ದರು. ಅಕ್ಟೋಬರ್ ಅಂತ್ಯದ ವೇಳೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿ ಈಗ ಮಾತುತಪ್ಪಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ನಡುವೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಈ ಕುರಿತು ರೈತ ಮಹಿಳೆ ಲಕ್ಷ್ಮಮ್ಮ ಪ್ರತಿಕ್ರಿಯಿಸಿ, ಸಾವಿರ ದಿನಗಳು ಹೋರಾಟದಲ್ಲಿ ಕಳೆದಿದ್ದು ಬೇಸರವಾಗಿಲ್ಲ. ಇನ್ನೂ ಸಾವಿರ ದಿನವಾದರೂ ಹೋರಾಡುತ್ತೇವೆ. ಮೊದಲು ಮಹಿಳೆಯರು ಹೋರಾಟದಲ್ಲಿ ತೊಡಗಿಸಿಕೊಳ್ಳುವುದು ಕಷ್ಟವಾಗಿತ್ತು. ಈಗ ಮನೆ ಕೆಲಸ ಮುಗಿಸಿ, ಹಸು-ಕರುಗಳನ್ನು ನೋಡಿ ಮಕ್ಕಳ ಬೇಕು-ಬೇಡಗಳ ಕಡೆ ಗಮನ ಹರಿಸಿ ಹತ್ತು ಗಂಟೆಗೆ ಪ್ರತಿಭಟನೆಗೆ ಹಾಜರಾಗುತ್ತಿದ್ದೇವೆ. ಭೂಮಿ ನಮ್ಮ ತಾಯಿ ಇದ್ದಂತೆ, ನಮ್ಮ ತಾಯಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ರೈತರ ಹೋರಾಟ ದಿನೇ ದಿನೇ ವಿಸ್ತರಿಸುತ್ತಿದ್ದು, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ರೈತ ನಾಯಕಿ ಬೆಳವಂಗಲ ಪ್ರಭಾ, ಗ್ರಾಮಾಂತರ ಜಿಲ್ಲಾ ರೈತ ಮುಖಂಡ ಆರ್.ಚಂದ್ರತೇಜಸ್ವಿ, ಕಾರಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದಲ್ಲದೇ ರಾಷ್ಟ್ರೀಯ ರೈತ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಅವರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಸಿಎಂ ಅವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು.