BJP Infighting| ಶೋಕಾಸ್ ನೋಟಿಸ್ ಕೊಟ್ಟರೂ ಮತ್ತೆ ಸಭೆ ಮಾಡಿದ ಬಿಜೆಪಿ ಭಿನ್ನರು! ವಿಜಯೇಂದ್ರ ಪಾಳಯಕ್ಕೆ ಆತಂಕ
ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮತ್ತೊಂದು ಸಭೆ ಬೆಂಗಳೂರಿನಲ್ಲಿ ನಡೆದಿದೆ. ಹೈಕಮಾಂಡ್ ಎಚ್ಚರಿಕೆಯ ಹೊರತಾಗಿಯೂ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆದಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಸಭೆಯಲ್ಲಿ ಭಾಗಿಯಾಗಿದ್ದರು.;
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆ ಮಾಡಲೇ ಬೇಕು ಎಂಬ ಪಟ್ಟನ್ನು ಸಡಲಿಸದ ಭಿನ್ನರ ಗುಂಪಿನ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಗುರುವಾರ ಮತ್ತೆ ಸಭೆ ಮಾಡಿದ್ದಾರೆ. ಹೈಕಮಾಂಡ್ ಎಚ್ಚರಿಕೆಯ ಹೊರತಾಗಿಯೂ ಯತ್ನಾಳ್ ಬಣ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶೋಕಾಸ್ ನೊಟೀಸ್ ಕೊಟ್ಟಿದ್ದರೂ, ಹೈಕಮಾಂಡ್ ಎಚ್ಚರಿಕೆ ಇದ್ದರೂ ಸಹ ಯಾವುದೇ ಆತಂಕವಿಲ್ಲದೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಪ್ರಮುಖವಾಗಿ ವಿಜಯೇಂದ್ರ ವಿರೋಧಿ ಪಾಳೆಯದ ನಾಯಕರಾದ ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಜಿ.ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು.
ರಾಜ್ಯಾದ್ಯಕ್ಷರ ಬದಲಾವಣೆ ವಿಚಾರ, ಬಂಡಾಯ ಎದ್ದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕೊಟ್ಟಿರುವ ವಿಚಾರಗಳ ಕುರಿತು ಚರ್ಚೆ ಮಾಡಲಾಗಿದೆ ಎಂಬ ಮಾಹಿತಿಯಿದೆ. ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಣ್ ರಾಜ್ಯಕ್ಕೆ ಆಗಮಿಸಿ ಚುನಾವಣೆ ಪ್ರಕ್ರಿಯೆ ನಡೆಸಿದ್ದಲ್ಲಿ ನಾಮಪತ್ರ ಸಲ್ಲಿಸುವ ಕುರಿತೂ ಭಿನ್ನರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿಯಿದೆ.
ಬಸನಗೌಡ ಪಾಟೀಲ್ ಗರಂ
ಶೋಕಾಸ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ವರದಿಗಾರರು ಪ್ರಶ್ನೆ ಮಾಡಿದಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗರಂ ಆಗಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಶೋಕಸ್ ನೋಟಿಸ್ ನಿಂದ ಹಿನ್ನಡೆ ಆಗಿದೆಯಾ? ಎಂಬ ಪ್ರಶ್ನೆಗೆ ಸ್ಪಷ್ಟಿಕರಣ ನೀಡಲು ಮುಂದಾಗಿದ್ದರು.
ಈ ವೇಳೆ ಪಕ್ಕಕ್ಕಿದ್ದ ಯತ್ನಾಳ್, ಮುಜುಗರಕ್ಕೆ ಒಳಗಾಗಿ ಸಿಟ್ಟಾಗಿ ಸ್ಥಳದಿಂದ ಹೊರಡಲು ಮುಂದಾದರು. ನೊಟೀಸ್ ವಿಚಾರ ಕೇಳಿದ ತಕ್ಷಣ ಯತ್ನಾಳ್ ಅವರು ತಾಳ್ಮೆ ಕಳೆದುಕೊಂಡಿದ್ದು ಕಂಡು ಬಂತು. ಆಗ ಪ್ರತಾಪ್ ಸಿಂಹ, ಅಣ್ಣ ಬನ್ನಿ ಬನ್ನಿ ಅಂತ ಕರೆದರು. ಪ್ರತಾಪ್ ಸಿಂಹ ಕರೆದರೂ ಕೋಪದಲ್ಲಿಯೇ, 'ಇದನ್ನು ಹೋಗಿ ವಿಜಯೇಂದ್ರನಿಗೆ ಕೇಳಿ. ನೊಟೀಸ್ ಕುರಿತು ಅವರು ಹೇಳುತ್ತಾರೆ. ನನ್ನನ್ಯಾಕೆ ಕೇಳುತ್ತಿರಿ' ಎಂದು ಗರಂ ಆಗಿದ್ದು ಕಂಡು ಬಂತು.
ಒಟ್ಟಾರೆ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲೇಬೇಕು. ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯತ್ನಾಳ್ ಬಣದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಗುರುವಾರ ನಡೆದ ಸಭೆಯಲ್ಲಿ ಬರಲಾಗಿದೆ ಎಂಬ ಮಾಹಿತಿಯಿದೆ. ಭಿನ್ನರು ಮತ್ತೆ ಸಭೆ ನಡೆಸಿರುವುದನ್ನು ಬಿಜೆಪಿ ಹೈಕಮಾಂಡ್ ಯಾವ ರೀತಿ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ
ಫೆ. 20ರೊಳಗೆ ಬಿಜೆಪಿಯಲ್ಲಿನ ಎಲ್ಲ ಅಸಮಾಧಾನಗಳು ತಣಿಯಲಿವೆ. ಹೈಕಮಾಂಡ್ ಎಲ್ಲವನ್ನೂ ಸರಿ ಮಾಡಲಿದೆ ಎಂದು ಭರವಸೆಯ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಗುರುವಾರ ನಡೆದಿರುವ ಭಿನ್ನರ ಸಭೆ ಆತಂಕ ಸೃಷ್ಟಿಸಿದೆ ಎನ್ನಲಾಗುತ್ತಿದೆ.
ಅದರೆ ಅವರು ಹೇಳಿದ್ದ ಗಡುವು ಫೆ. 20 (ಗುರುವಾರ)ಕ್ಕೆ ಮುಗಿದಿದೆ. ಆದರೆ ಗುರುವಾರದಂದು ಭಿನ್ನರು ಮತ್ತೊಂದು ಸಭೆ ಮಾಡಿದ್ದಾರೆ. ಜೊತೆಗೆ ಹೈಕಮಾಂಡ್ನ ಯಾವುದೇ ನಾಯಕರು ರಾಜ್ಯಕ್ಕೆ ಆಗಮಿಸಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವ ಕುರಿತು ಸ್ಪಷ್ಟವಾದ ನಿರ್ಧಾರವನ್ನೂ ಪ್ರಕಟಿಸಿಲ್ಲ. ಭಿನ್ನಮತವನ್ನೂ ಶಮನ ಮಾಡಿಲ್ಲ. ಹೀಗಾಗಿ ಮುಂದೇನಾಗಲಿದೆ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.