ಮುಸ್ಲಿಮರು ನಿರ್ಮಿಸಿರುವ ಕೆಂಪುಕೋಟೆ, ತಾಜ್ ಮಹಲ್ ಕೆಡವುತ್ತೀರಾ? ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ಬಿಜೆಪಿಯು ದೇಶದ ಮಸೀದಿಗಳ ಸಮೀಕ್ಷೆ ನಡೆಸುವ ಮೂಲಕ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯು ದೇಶದ ಮಸೀದಿಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಸ್ಲಿಮರು ನಿರ್ಮಿಸಿದ ಕೆಂಪು ಕೋಟೆ, ತಾಜ್ ಮಹಲ್ ಮತ್ತು ಚಾರ್ ಮಿನಾರ್‌ನಂತಹ ಐತಿಹಾಸಿಕ ಸ್ಥಳಗಳನ್ನು ಹಿಂದುತ್ವ ಸಂಘಟನೆಗಳು ಗುರಿಯಾಗಿಸಿಕೊಂಡು ಕೆಡವುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನದ ಕುರಿತು ದೆಹಲಿಯಲ್ಲಿ ಭಾನುವಾರ ಆಯೋಜಿಸಿದ್ದ 'ಸಂವಿಧಾನ ಉಳಿಸಿ' ರ್ಯಾಲಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿ ಮತ್ತು ಅಜ್ಮೇರ್ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರು ಕಟ್ಟಿದ ಕೆಂಪು ಕೋಟೆಯನ್ನು ಈಗ ಕೆಡವುತ್ತೀರಾ? ಕುತುಬ್ ಮಿನಾರ್ ಮತ್ತು ತಾಜ್‌ಮಹಲನ್ನು ಕೆಡವುತ್ತೀರಾ? ಹೈದರಾಬಾದ್ ಹೋಗಿ ಚಾರ್‌ಮಿನಾರನ್ನು ನೆಲಸಮಗೊಳಿಸುವಿರಾ? ಗೋಲ್ ಗುಂಬಜ್ ಅನ್ನು ಕೆಡವಲು ವಿಜಯಪುರಕ್ಕೆ ಹೋಗುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ನಿಲುವನ್ನು ಟೀಕಿಸಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತನ್ನೂ ಮೋದಿ- ಅಮಿತ್ ಶಾ ಕೇಳುವುದಿಲ್ಲ. ನಾಳೆ ಅವರು ಇದನ್ನೆಲ್ಲ ನಾಶಪಡಿಸಿ, ಅದರ ಅಡಿಯಲ್ಲಿ ಬೇರೇನಾದರೂ ಹುಡುಕುತ್ತಾರೆ ಎಂದು ಹೇಳಿದರು.
ಬಿಜೆಪಿಯವರು ಮಸೀದಿಯ ಕೆಳಗೆ ದೇವಸ್ಥಾನಗಳನ್ನು ಹುಡುಕುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ 2022 ರಲ್ಲಿ "ರಾಮ ಮಂದಿರ ನಿರ್ಮಾಣ ನಮ್ಮ ಗುರಿ. ಆದರೆ ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಸಮಾಜದಲ್ಲಿ ಒಡಕು ಹೆಚ್ಚಿಸುವ ಇಂತಹ ಸಮೀಕ್ಷೆಗಳನ್ನು ಪ್ರಧಾನಿ ಮೋದಿ ಪ್ರಚಾರ ಮಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
‘ಧಾರ್ಮಿಕ ಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳಲು 1991ರಲ್ಲಿ ಕಾನೂನು ಮಾಡಲಾಗಿತ್ತು. ಆದರೆ ಬಿಜೆಪಿಯವರು ಆ ಕಾನೂನನ್ನು ಸಹ ಪಾಲಿಸುತ್ತಿಲ್ಲ. ಬಿಜೆಪಿ ಇಂತಹ ಕ್ರಮಗಳನ್ನು ಮುಂದುವರಿಸಿದರೆ ದೇಶ ಒಡೆಯುವ ಅಪಾಯವಿದೆ. ನಾನು ಕೂಡ ಹಿಂದೂ, ಆದರೆ ನಾನು ಜಾತ್ಯತೀತ ಮತ್ತು ನಾವೆಲ್ಲರೂ ಒಟ್ಟಾಗಿ ಸಾಗಬೇಕೆಂದು ಎಂದು ಬಯಸುತ್ತೇವೆ. ನ್ಯಾಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ ಮತ್ತು ಈ ದೇಶವನ್ನು ಒಡೆಯಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.