ಪಾನಕ್ಕಲ್ಲ, ಸ್ನಾನಕ್ಕೂ ಯೋಗ್ಯವಿಲ್ಲ ತುಂಗಾ.. ! ಚರಂಡಿಗಿಂತ ಕಲುಷಿತಗೊಂಡ ತುಂಗಾ ಶುದ್ಧೀಕರಣ ಎಂದು?

ವಿವಿಧ ಅಧ್ಯಯನಗಳಲ್ಲಿ ತುಂಗಾ ನದಿಯ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಅಲ್ಯುಮಿನಿಯಂ ಮತ್ತು ಇತರ ಲೋಹ ಮತ್ತು ರಾಸಾಯನಿಕಗಳು ಪತ್ತೆಯಾಗಿದ್ದು, ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ನದಿ ನೀರು ಯೋಗ್ಯವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

Update: 2024-06-29 02:00 GMT

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿರುವ ತಡೆಗೋಡೆಯ ಅಡಿಯಲ್ಲೇ ನದಿ ಸೇರುತ್ತಿರುವ ಶಿವಮೊಗ್ಗ ನಗರದ ಕೊಳಚೆ ನೀರು

ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಹಳೆಯದಾಯ್ತು; ಮಾತ್ರ ಸದ್ಯ ಅದು ಹಳಸಿದ ಮಾತು ಕೂಡ. ಏಕೆಂದರೆ ಈಗ ನೀವು ನಿರಾತಂಕವಾಗಿ ಗಂಗೆಯಲ್ಲಿ ಮುಳುಗೇಳಲೂ ಆಗದು, ತುಂಗೆಯನ್ನು ಗುಟುಕರಿಸಲೂ ಆಗದು!

ದೇಶದ ಅತ್ಯಂತ ಮಲಿನ ನದಿ ಎಂಬ ಕುಖ್ಯಾತಿಗೆ ಒಳಗಾಗಿರುವ ಗಂಗಾ ನದಿಯಲ್ಲಿ ಮುಳುಗೇಳುವುದೆಂದರೆ ಚರ್ಮರೋಗಗಳಿಗೆ ಮೈಯೊಡ್ಡಿದಂತೆ ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗಾಗಿಯೇ ಗಂಗಾ ಶುದ್ಧೀಕರಣಕ್ಕಾಗಿ ಕಳೆದ ಒಂದು ದಶಕದಿಂದ ಸಾವಿರಾರು ಕೋಟಿ ರೂಪಾಯಿ ಸುರಿಯಲಾಗುತ್ತಿದೆ. ಇನ್ನು ತೀರಾ ಇತ್ತೀಚಿನವರೆಗೆ ಆತಂಕವಿಲ್ಲದೆ ಕುಡಿಯಬಹುದಾಗಿದ್ದ ತುಂಗೆಯ ನೀರು ಕೂಡ ಈಗ ಪಾನ ಯೋಗ್ಯವಲ್ಲ ಎಂದು ಹಲವು ವರದಿಗಳು ಘೋಷಿಸಿವೆ. ಅದೂ ಕೂಡ ಅಪಾಯಕಾರಿ ಅಲ್ಯುಮಿನಿಯಂ ಅಂಶ ಎಂಟು ಪಟ್ಟು ಹೆಚ್ಚಿರುವುದರಿಂದ ತುಂಗೆಯ ನೀರು ಸುರಕ್ಷಿತವಲ್ಲ ಎಂಬ ಸಂಗತಿ ಶೃಂಗೇರಿಯಿಂದ ರಾಯಚೂರಿನವರೆಗೆ ಬಹುತೇಕ ಅರ್ಧ ಕರ್ನಾಟಕಕ್ಕೇ ಆತಂಕ ತಂದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ), ಶಿವಮೊಗ್ಗದ ನಿರ್ಮಲ ತುಂಗಾ ಅಭಿಯಾನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಎಸ್ ಪಿ ಸಿಬಿ) ಮತ್ತು ಕೆಲವು ಖಾಸಗಿ ಸಂಶೋಧಕರು ನಡೆಸಿದ ವಿವಿಧ ಅಧ್ಯಯನಗಳಲ್ಲಿ ತುಂಗಾ ನದಿಯ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಅಲ್ಯುಮಿನಿಯಂ ಮತ್ತು ಇತರ ಲೋಹ ಮತ್ತು ರಾಸಾಯನಿಕಗಳು ಪತ್ತೆಯಾಗಿದ್ದು, ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ನದಿ ನೀರು ಯೋಗ್ಯವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ವರ್ಷ ಬಿಡುಗಡೆ ಮಾಡಿದ ದೇಶದ ನದಿಗಳ ಮಾಲಿನ್ಯ ಕುರಿತ ವರದಿಯಲ್ಲಿ ತುಂಗಾ ನದಿಯ ಮಾಲಿನ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಮುನ್ನವೇ ನದಿಯಲ್ಲಿ ರಾಸಾಯನಿಕ ಮತ್ತು ಲೋಹಗಳು ಅಪಾಯಕಾರಿ ಪ್ರಮಾಣದಲ್ಲಿ ಸೇರುತ್ತಿವೆ ಎಂಬುದನ್ನೂ ವರದಿಯಲ್ಲಿ ಹೇಳಲಾಗಿದೆ. ಸಿಪಿಸಿಬಿಯ ಈ ವರದಿಯನ್ನು ಕೇಂದ್ರ ಜಲಶಕ್ತಿ ಸಚಿವರು ಕೂಡ ಸಂಸತ್ತಿನಲ್ಲಿ ಉಲ್ಲೇಖಿಸಿದ್ದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತುಂಗಾ ನದಿ ನೀರು ಚರಂಡಿ ನೀರಿಗಿಂತ ಕಲುಷಿತಗೊಂಡಿದ್ದು, ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಷರಾ ಬರೆದಿದೆ. ಕಳೆದ ಎರಡು ಮೂರು ವರ್ಷಗಳಿಂದ ಮಂಡಳಿ, ನದಿ ಮಾಲಿನ್ಯದಲ್ಲಿ ದೊಡ್ಡ ಪಾಲು ಹೊಂದಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ಹತ್ತಾರು ನೊಟೀಸ್ ನೀಡಿದೆ. ಆದಾಗ್ಯೂ ಶಿವಮೊಗ್ಗ ಮಹಾನಗರ ಪಾಲಿಕೆ ನದಿ ನೀರು ಮಾಲಿನ್ಯ ತಡೆಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಂಡಿಲ್ಲ.

ನಗರದ ವ್ಯಾಪ್ತಿಯ ಸಂಪೂರ್ಣ ಕೊಳಚೆ ನೀರು, ಚರಂಡಿ ನೀರು, ತ್ಯಾಜ್ಯ ಘಟಕಗಳ ನೀರು, ಸಾಕಷ್ಟು ತ್ಯಾಜ್ಯ, ಮಾಂಸ-ಕೋಳಿ-ಮೀನು ಅಂಗಡಿಗಳ ತ್ಯಾಜ್ಯ, ಆಸ್ಪತ್ರೆಗಳ ತ್ಯಾಜ್ಯ ಸೇರಿದಂತೆ ಅಪಾಯಕಾರಿ ಕಸ ಮತ್ತು ಕೊಳಚೆ ನೀರು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ನದಿ ಒಡಲು ಸೇರುತ್ತಿದೆ. ನಾಲ್ಕೂವರೆ ಲಕ್ಷ ಜನಸಂಖ್ಯೆ ಇರುವ ನಗರದ ಸುಮಾರು 15 ಕ್ಯೂಸೆಕ್ನಷ್ಟು ಕೊಳಚೆ ನೀರು ನಿತ್ಯ ಹದಿನೈದಕ್ಕೂ ಹೆಚ್ಚು ಕಡೆ ನದಿಗೆ ಸೇರುತ್ತಿದೆ.

ಶಿವಮೊಗ್ಗ ನಗರಕ್ಕೆ ಹನ್ನೆರಡು ಕಿಮೀ ಮೇಲ್ಭಾಗದ ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ಕುಡಿಯುವ ನೀರು ಸರಬರಾಜಾಗುವುದರಿಂದ ನಗರದ ನಾಗರಿಕರು ನದಿ ಮಾಲೀನ್ಯದ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಶಿವಮೊಗ್ಗದಿಂದ ನಂತರ ನದಿ ದಂಡೆಯ ಪ್ರಮುಖ ಪಟ್ಟಣಗಳಾದ ಹೊನ್ನಾಳಿ, ಹರಿಹರ, ದಾವಣಗೆರೆ, ಹಾವೇರಿ, ರಾಣೇಬೆನ್ನೂರು, ಹೊಸಪೇಟೆ ಸೇರಿದಂತೆ ಐವತ್ತಕ್ಕೂ ಹೆಚ್ಚು ಪಟ್ಟಣ ಮತ್ತು ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲ ಈ ತುಂಗಾ ನದಿಯನ್ನೊಳಗೊಂಡ ತುಂಗಾಭದ್ರಾ ನದಿಯೇ.

ನಿರ್ಮಲ ತುಂಗಾ ಅಭಿಯಾನದ ವರದಿ

ತುಂಗಾ ನದಿಯ ಮಾಲಿನ್ಯದ ವಿರುದ್ಧ ಜನಜಾಗೃತಿ ಮತ್ತು ಕಾನೂನು ಹೋರಾಟದ ಉದ್ದೇಶದಿಂದ ಒಂದು ವರ್ಷದಿಂದ ಹೋರಾಟ ಕೈಗೆತ್ತಿಕೊಂಡಿರುವ ಶಿವಮೊಗ್ಗದ ವಿವಿಧ ಪರಿಸರ ಪರ ಸಂಘಟನೆಗಳು ಮತ್ತು ಪರಿಸರಾಸಕ್ತರನ್ನು ಒಳಗೊಂಡಿರುವ ನಿರ್ಮಲ ತುಂಗಾ ಅಭಿಯಾನದ ಪ್ರಮುಖರು ನದಿ ನೀರಿನ ಪರೀಕ್ಷೆ ನಡೆಸಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರಮಾಣೀಕೃತ ಖಾಸಗಿ ಲ್ಯಾಬ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ನದಿ ನೀರಿನಲ್ಲಿ ಅಲ್ಯುಮಿನಿಯಂ ಅಂಶ ನಿಗದಿತ ಪ್ರಮಾಣಕ್ಕಿಂತ ಎಂಟು ಪಟ್ಟು ಹೆಚ್ಚಿರುವುದು ಸಾಬೀತಾಗಿದೆ. ಸಾಮಾನ್ಯವಾಗಿ ಪ್ರತಿ ಲೀಟರ್ ನೀರಿನಲ್ಲಿ 0.003 ಮಿಲಿ ಗ್ರಾಂನಷ್ಟು ಅಲ್ಯೂಮಿನಿಯಂ ಅಂಶ ಒಪ್ಪಿತ. ಆದರೆ, ತುಂಗಾ ನೀರಿನಲ್ಲಿ ಆ ಪ್ರಮಾಣ 0.2ರಷ್ಟಿದೆ. ಹಾಗಾಗಿ ತುಂಗಾ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಆತಂಕದ ಸಂಗತಿ ಎಂದರೆ ಶಿವಮೊಗ್ಗ ನಗರಕ್ಕೆ ಸರಬರಾಜಾಗುವ ನಲ್ಲಿ ನೀರಿನಲ್ಲೂ ಅಲ್ಯುಮಿನಿಯಂ ಅಂಶ ಅಷ್ಟೇ ಇದ್ದು, ನಗರಕ್ಕೆ ಪ್ರವೇಶಿಸುವ ಮುನ್ನವೇ ನದಿ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ!

ನದಿ ಮಾಲೀನ್ಯದ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಪ್ರತಿಕ್ರಿಯಿಸಿದ ಪರಿಸರ ತಜ್ಞ ಡಾ ಶ್ರೀಪತಿ, “ತುಂಗಾ ನದಿ ಮಾಲಿನ್ಯದ ಕುರಿತು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಅಭಿಯಾನದ ವತಿಯಿಂದ ವರದಿ ಸಲ್ಲಿಸಿ ವರ್ಷಗಳೇ ಕಳೆದವು. ಆದರೆ, ಮಾಲಿನ್ಯ ತಡೆಯ ನಿಟ್ಟಿನಲ್ಲಿ ಮಹತ್ವದ ಕ್ರಮಗಳು ಏನೂ ಆಗಿಲ್ಲ. ನಗರದ ಬಹುತೇಕ ಎಸ್ಟಿಪಿಗಳು ಸರಿಯಾಗಿಲ್ಲ. ಕೊಳಚೆ ನೀರು, ಘನತ್ಯಾಜ್ಯ, ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನದಿಗೆ ಸೇರುತ್ತಲೇ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ, ನ್ಯಾಯಾಲಯಗಳ ಎಚ್ಚರಿಕೆಗಳಿಗೂ ಪಾಲಿಕೆಯ ಸೊಪ್ಪು ಹಾಕಿಲ್ಲ. ಹಾಗಾಗಿ ಜನ ಹೋರಾಟದ ಮೂಲಕವೇ ನದಿಯನ್ನು, ನದಿ ನೀರನ್ನೂ ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ” ಎಂದು ಅಭಿಪ್ರಾಯಪಟ್ಟರು.

ಸಿಟಿ ಸ್ಮಾರ್ಟ್‌, ಜೀವನದಿ ಕಸದ ತೊಟ್ಟಿ!

ತುಂಗಾ ನದಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಹಸಿರು ಪೀಠೆ(ಎನ್ಜಿಟಿ) ಕರ್ನಾಟಕ ಸರ್ಕಾರಕ್ಕೆ ನೊಟೀಸ್ ಜಾರಿಮಾಡಿತ್ತು.

ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಶಿವಮೊಗ್ಗ ನಗರದಲ್ಲಿ ಕಳೆದ ಐದಾರು ವರ್ಷಗಳಿಂದ ನೂರಾರು ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳು ಜಾರಿಯಲ್ಲಿವೆ. ಆದರೆ, ಆ ಯೋಜನೆಯಡಿ ನಗರದ ನಟ್ಟನಡುವೆ ಹಾದುಹೋಗುವ, ನಗರದ ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲವಾದ ತುಂಗಾ ನದಿಯ ನೈಮರ್ಲ್ಯ ಕಾಪಾಡಲು ನಯಾ ಪೈಸೆ ನೀಡಲಾಗಿಲ್ಲ!

ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಡಾ ಬಿ ಎಂ ಕುಮಾರಸ್ವಾಮಿ ಅವರು, “ನಗರವೂ ಸೇರಿದಂತೆ ನದಿಯುದ್ದಕ್ಕೂ ಹತ್ತಾರು ನಗರ, ಪಟ್ಟಣಗಳು, ನೂರಾರು ಹಳ್ಳಿಗಳ ಜನರ ಕುಡಿಯುವ ನೀರಿನ ಮೂಲವಾಗಿರುವ ತುಂಗಾ ನದಿಯ ನೈರ್ಮಲ್ಯ ಬಗ್ಗೆ ನಮಗೆ ಎಷ್ಟು ಉದಾಸೀನ ಧೋರಣೆ ಇದೆ ಎಂಬುದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಆ ಬಗ್ಗೆ ಯಾವುದೇ ಅನುದಾನ ಇಡದೇ ಇರುವುದೇ ಸಾಕ್ಷಿ. ನದಿ ನೀರಿನಲ್ಲಿ ಅಲ್ಯೂಮಿನಿಯಂ ನಂತಹ ಅಪಾಯಕಾರಿ ವಸ್ತು ಎಂಟ್ಹತ್ತು ಪಟ್ಟು ಹೆಚ್ಚಿದೆ. ಅಲ್ಲದೆ, ನಗರದ ಅಪಾಯಕಾರಿ ತ್ಯಾಜ್ಯ, ಕೊಳಚೆ ನೀರು ನದಿಗೆ ಸೇರುತ್ತಿದೆ. ಇದೆಲ್ಲಾ ಜನರ ಆರೋಗ್ಯದ ಮೇಲೆ ಉಂಟುಮಾಡುತ್ತಿರುವ ಪರಿಣಾಮಕ್ಕೆ ತುಂಬಿತುಳುಕುವ ಆಸ್ಪತ್ರೆಗಳೇ ಕಣ್ಣೆದುರಿನ ನಿದರ್ಶನಗಳು. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು” ಎಂದು ಹೇಳಿದರು.

ನದಿಗಾಗಿ ಮುಖ್ಯಮಂತ್ರಿ ಭೇಟಿ ಮಾಡಿದ ನಟ

ತುಂಗಾ ನದಿಯ ನೈರ್ಮಲ್ಯ ಇದೀಗ ಮತ್ತೆ ಸುದ್ದಿಯಾಗತೊಡಗಿದೆ. ಅದಕ್ಕೆ ಕಾರಣ ನಟ ಅನಿರುದ್ಧ್ ಅವರು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತುಂಗಾ ನದಿಯ ಮಾಲಿನ್ಯದ ವಿವರಗಳನ್ನು ನೀಡಿ ನೈರ್ಮಲ್ಯ ಕಾಯಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿರುವುದು. ತಮ್ಮ ಇತ್ತೀಚಿನ ಶಿವಮೊಗ್ಗ ಭೇಟಿ ವೇಳೆ ನಟ, ನದಿಯ ಒಡಲು ಸೇರುತ್ತಿರುವ ಕೊಳಚೆ ನೀರು ಮತ್ತು ರಾಶಿ-ರಾಶಿ ತಾಜ್ಯವನ್ನು ಕಣ್ಣಾರೆಕಂಡು ಅವಕ್ಕಾಗಿದ್ದರು. ಆ ಬಗ್ಗೆ ಮಾಹಿತಿ ಪಡೆದು ನದಿಯ ಪರ ಕಾಳಜಿ ವ್ಯಕ್ತಪಡಿಸಿದ್ದ ಅನಿರುದ್ಧ್ ಇದೀಗ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದಿದ್ದಾರೆ. ಆ ಹಿನ್ನೆಲೆಯಲ್ಲಿ ತುಂಗಾ ಮಾಲಿನ್ಯ ಮತ್ತೊಮ್ಮೆ ಸದ್ದುಮಾಡತೊಡಗಿದೆ.

ಆದರೆ, ಹಸಿರು ಪೀಠ, ಹೈಕೋರ್ಟು, ಪರಿಸರ ಮಂಡಳಿಗಳಂತಹ ಸಂವಿಧಾನಿಕ ಸಂಸ್ಥೆಗಳ ತಪರಾಕಿಗಳಿಗೇ ಜಗ್ಗದ ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳಾದರೂ ಕೊನೆಗೆ ಬಿಸಿಮುಟ್ಟಿಸುವರೇ? ಎಂಬುದನ್ನು ಕಾದುನೋಡಬೇಕಿದೆ.

Tags:    

Similar News