ಉತ್ತರಾಖಂಡ ದುರಂತ | ಬದುಕುಳಿದವರು ಏನು ಹೇಳುತ್ತಾರೆ?...

ಉತ್ತರಾಖಂಡದ ಸಹಸ್ರತಾಲ್‌ ಟ್ರಕ್ಕಿಂಗ್‌ ದುರಂತವು ಹಲವು ಕರಾಳತೆಯನ್ನು ಬಿಚ್ಚಿಟ್ಟಿದೆ. ಈ ದುರಂತದಲ್ಲಿ ಬದುಕುಳಿದವರು ಅವರ ಆತ್ಮೀಯರ ಶವಗಳೊಂದಿಗೆ ರಾತ್ರಿ ಕಳೆದಿದ್ದು, ಆ ನೋವಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಜೀವನ ಸಾಗಬೇಕು ನಿಜ ಆದರೆ, ಇದೆಲ್ಲವನ್ನು ಮರೆಯುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ದುರಂತದಲ್ಲಿ ಸಾವು ಗೆದ್ದರೂ, ಆತ್ಮೀಯರ ಸಾವಿನ ನೋವಿನಿಂದ ಹೊರಬರಲಾರದೆ ದುಃಖಿಸುತ್ತಿದ್ದಾರೆ...

By :  Hitesh Y
Update: 2024-06-08 11:47 GMT
ಉತ್ತರಾಖಂಡ ದುರಂತ

ʻಸಂತೋಷದಿಂದ ಚಾರಣಕ್ಕೆ ಹೋದ ನಾವು, ನಮ್ಮ ಆತ್ಮೀಯರ ಮೃತದೇಹಗಳೊಂದಿಗೆ ಹಿಂತಿರುಗಿದ್ದೇವೆʼ ಇದು ಉತ್ತರಾಖಂಡದ ಸಹಸ್ರತಾಲ್ ಚಾರಣ ದುರಂತದಲ್ಲಿ ಬದುಕುಳಿದ 13 ಜನರಲ್ಲಿ ಒಬ್ಬರಾಗಿರುವ ಕರ್ನಾಟಕದ ಸುಧಾಕರ್ ಅವರ ನೋವಿನ ಮಾತು.

ಚಾರಣ ದುರಂತದ ಕರಾಳ ಅನುಭವಗಳನ್ನು ದ ಫೆಡರಲ್ ಕರ್ನಾಟಕದೊಂದಿಗೆ ಅವರು ಹಂಚಿಕೊಂಡಿದ್ದು ಹೀಗೆ..  ʻನಾವೆಲ್ಲ ಖುಷಿಯಿಂದಲೇ ಚಾರಣಕ್ಕೆ ತೆರಳಿದ್ದೆವು. ಆದರೆ, ಹಿಂತಿರುಗಿ ಬರುವ ವೇಳೆಗೆ ಆ ಸಂತೋಷ ಉಳಿಯಲಿಲ್ಲ. ಜೂನ್ 3ರಂದು ಉತ್ತರಾಖಂಡದ ನಮ್ಮ ಮುಖ್ಯ ಕ್ಯಾಂಪಸ್‌ಗೆ ಮರಳಿ ಬರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿತು. ಚಾರಣದಿಂದ ಇಡೀ ತಂಡ ಹಿಂತಿರುಗುತ್ತಿರುವಾಗ ಏಕಾಏಕಿ ಹವಾಮಾನ ಬದಲಾಯಿತು. ಆಲಿಕಲ್ಲುಗಳು ಬೀಳಲು ಶುರುವಾಯಿತು. ಕೆಲವೇ ನಿಮಿಷಗಳಲ್ಲಿ ಅತ್ಯಂತ ತಣ್ಣನೆಯು ವಾತಾವರಣ ನಿರ್ಮಾಣವಾಯಿತು. ಕೆಲವರು ಕುಸಿಯಲು ಪ್ರಾರಂಭಿಸಿದರು. ಆ ದುರಂತ ಮತ್ತು ಆಘಾತದಿಂದ ನಾನು ಇನ್ನೂ ಹೊರಗೆ ಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಅವಘಡದ ಬಗ್ಗೆ ನನ್ನಿಂದ ಹೆಚ್ಚು ಮಾತನಾಡಲು ಸಾಧ್ಯವಿಲ್ಲʼ ಎಂದರು.

ʻಕಳೆದ ಹತ್ತು ವರ್ಷಗಳಿಂದಲೂ ನಾವೆಲ್ಲ ಚಾರಣಕ್ಕೆ ಹೋಗುತ್ತಿದ್ದೇವೆ. ನಮ್ಮ ತಂಡದಲ್ಲಿ ಇದ್ದವರಲ್ಲಿ ಬಹುತೇಕರು ಚಾರಣ ಹಾಗೂ ಪ್ರವಾಸದಲ್ಲಿ 10ರಿಂದ 15 ವರ್ಷಗಳ ಸುದೀರ್ಘ ಅವಧಿಯ ಅನುಭವ ಹೊಂದಿದ್ದಾರೆ. ಆದರೆ, ಈ ರೀತಿ ದುರಂತ ಸಂಭವಿಸುತ್ತದೆ ಎಂದು ನಾವು ಎಂದೂ ಅಂದಾಜಿಸಿರಲಿಲ್ಲ. ಸಂತೋಷದಿಂದ ಹೋಗಿ; ಸಾವಿನ ಸುದ್ದಿಯೊಂದಿಗೆ ಹಿಂತಿರುಗಿದ್ದೇವೆʼ… ಉತ್ತರಾಖಂಡದ ಸಹಸ್ರತಾಲ್‌  ಚಾರಣ ದುರಂತದಲ್ಲಿ ಬದುಕುಳಿದ ಕರ್ನಾಟಕದ ಮಧು ಭೂಮಿಕಾ ಅವರ ಮಾತಿದು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಎಲ್ಲವೂ ಸರಿಯಾಗಿದಿದ್ದರೆ 24 ಗಂಟೆಯಲ್ಲಿ ನಾವೆಲ್ಲ ಸುರಕ್ಷಿತವಾಗಿ ನಮ್ಮ ಊರುಗಳನ್ನು ತಲುಪುತ್ತಿದ್ದೆವು. ಯಾವುದೂ ನಮ್ಮ ಕೈಯಲ್ಲಿ ಇರಲಿಲ್ಲ. ಹವಾಮಾನ ಬದಲಾವಣೆಯಿಂದ ಈ ದುರಂತ ಸಂಭವಿಸಿದೆ. ಇದರಲ್ಲಿ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ. ದುರಂತ ಸಂಭವಿಸಬಾರದಿತ್ತು. ಈಗ ನಮ್ಮ ಕೈಯಲ್ಲಿ ಏನೂ ಇಲ್ಲ. ವಾಸ್ತವವನ್ನು ಸ್ವೀಕರಿಸಿ, ಮುಂದಕ್ಕೆ ಸಾಗಬೇಕಿದೆ. Life as to move on ಎನ್ನುವಂತೆ ನಾವು ಮುಂದಕ್ಕೆ ಸಾಗಬೇಕಿದೆ. ಆದರೆ, ಅದು ಹೇಳಿದಷ್ಟು ಸುಲಭವಿಲ್ಲʼ ಎಂದು ಹೇಳುತ್ತಲ್ಲೇ ಗದ್ಗದಿತರಾದರು.


ಈಚೆಗೆ ಉತ್ತರಾಖಂಡ ಶಿವಗುಂಟಕ್ಕೆ ಹೋಗಿದ್ದೆವು..

`ಕಳೆದ ತಿಂಗಳಷ್ಟೇ ನಾವು ಉತ್ತರಾಖಂಡದ ಶಿವಗುಂಟಕ್ಕೆ ಹೋಗಿ ಬಂದಿದ್ದೆವು. ನಮ್ಮ ತಂಡದಲ್ಲಿರುವ ಹಲವರು, ಹಲವು ವರ್ಷಗಳಿಂದ ಉತ್ತರಾಖಂಡದಲ್ಲಿ ಚಾರಣಕ್ಕೆ ಹೋಗುತ್ತಿದ್ದೇವೆ. ಈ ರೀತಿಯ ದುರಂತ ಎಂದೂ ಸಂಭವಿಸಿರಲಿಲ್ಲ. ಕಳೆದ ತಿಂಗಳು ಸಹ ಶಿವಗುಂಟ ಪ್ರವಾಸ ಸುಸೂತ್ರವಾಗಿತ್ತು. ಚಾರಣಕ್ಕೆ ಹೋಗುವ ಮುನ್ನವೇ ಎಲ್ಲರೂ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುತ್ತೇವೆ. ಆದರೆ, ಈ ರೀತಿ ದುರಂತ ಸಂಭವಿಸುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲʼ ಎಂದು ಭೂಮಿಕಾ ತಿಳಿಸಿದರು.

ಮೃತದೇಹದೊಂದಿಗೆ ರಾತ್ರಿ ಕಳೆದರು…

ʻಉತ್ತರಾಖಂಡದ ಸಹಸ್ರತಾಲ್ ಚಾರಣ ದುರಂತವು ಅತ್ಯಂತ ಘೋರವಾಗಿತ್ತುʼ ಎನ್ನುತ್ತಾರೆ ಈ ದುರಂತದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಉತ್ತರಾಖಂಡದ ವಿಪತ್ತು ನಿರ್ವಹಣಾ ಅಧಿಕಾರಿ ಡಿ.ಎಸ್ ಪಟ್ವಾಲ್.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಈ ಕಾರ್ಯಾಚರಣೆಯ ವಿವರವನ್ನು ಹಂಚಿಕೊಂಡಿದ್ದಾರೆ. ʻಹಲವು ಚಾರಣಿಗರು ಮೃತದೇಹಗಳೊಂದಿಗೆ ರಾತ್ರಿ ಕಳೆದಿದ್ದಾರೆ. ಚಾರಣದಲ್ಲಿದ್ದ ಕೆಲವರು ಚಳಿ ತಾಳಲಾರದೆ ಸಾವನ್ನಪ್ಪಿದ್ದು, ಶವಗಳಿರುವ ಜಾಗದಲ್ಲೇ ಚಾರಣ ತಂಡದ ಕೆಲವು ಸದಸ್ಯರು ರಾತ್ರಿ ಕಳೆದಿದ್ದಾರೆʼ ಎಂದರು. 


ʻಉತ್ತರಾಖಂಡದ ಸಹಸ್ರತಾಲ್ ಚಾರಣವು ಅತ್ಯಂತ ಕಠಿಣ ಚಾರಣಗಳಲ್ಲಿ ಒಂದಾಗಿದ್ದು, ಎಲ್ಲವನ್ನು ಪರಿಶೀಲನೆ ಮಾಡಿದ ನಂತರವಷ್ಟೇ ಈ ಚಾರಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಜೂನ್ 3ರಂದು ಈ ದುರಂತ ಸಂಭವಿಸಿದ್ದು, ಜೂನ್ 4ರ ಸಂಜೆ 4ರ ವೇಳೆಗೆ ನಮಗೆ ಈ ಸುದ್ದಿ ತಲುಪಿತು. ರಾತ್ರಿಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದೆವು. ಜೂನ್ 5ರ ಬೆಳಿಗ್ಗೆ ಅಂದಾಜು 8 ಗಂಟೆಗೆ ಕಾರ್ಯಾಚರಣೆ ಮುಕ್ತಾಯವಾಯಿತುʼ ಎಂದರು.

ಸಾವಿನ ಪ್ರಮಾಣ ಹೆಚ್ಚಳಕ್ಕೆ ಆತಂಕವೂ ಕಾರಣ 

ʻಉತ್ತರಾಖಂಡದ ಸಹಸ್ರತಾಲ್ ಚಾರಣ ದುರಂತದಕ್ಕೆ ಮುಖ್ಯವಾಗಿ ಹವಾಮಾನ ವೈಪರೀತ್ಯ ಕಾರಣವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಚಾರಣದಲ್ಲಿ ತೊಡಗಿದ್ದ ಕೆಲವರು ಕುಸಿದು ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದವರು ಗಾಬರಿಗೊಳಗಾಗಿದ್ದಾರೆ. ಅಲ್ಲದೇ ಚಾರಣದಲ್ಲಿ ಹವಾಮಾನ ವೈಪರೀತ್ಯದಿಂದ ಸಾವು ಸಂಭವಿಸುತ್ತಿರುವುದನ್ನು ನೋಡಿದ ಉಳಿದ ಚಾರಣಿಗರು ಸಹ ಆತಂಕಕ್ಕೆ ಒಳಗಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆʼ ಎಂದು ಉತ್ತರಾಖಂಡದ ಸ್ಥಳೀಯ ಪತ್ರಿಕೆಯೊಂದರ ವರದಿಗಾರ ಸೂರ್ಯ ಎನ್ನುವವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ʻಉತ್ತರಾಖಂಡದ ಸಹಸ್ರತಾಲ್ ದುರಂತದಿಂದ ಬದುಕುಳಿದವರು ಕೆಲವರು ಅವರಿಗೆ "ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿತ್ತು. ನಾವೇ ಕೇಳಿದ ನಂತರ ವೈದ್ಯಕೀಯ ಪರಿಶೀಲನೆ ನಡೆಸಿದರು. ಅಲ್ಲದೇ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಮುಂಜಾಗ್ರತಾ ಕ್ರಮ ಅನುಸರಿಸದೆ ಎಲ್ಲವನ್ನೂ ಏಜೆನ್ಸಿಯ ಮೇಲೆ ಬಿಟ್ಟಿದೆ" ಎಂದು ಆರೋಪಿಸಿದ್ದಾರೆ ಎಂದೂ ಸಹ ಮಾಹಿತಿ ಹಂಚಿಕೊಂಡರು. ಆದರೆ, ಈ ಆರೋಪಗಳನ್ನು ಉತ್ತರಾಖಂಡದ ವಿಪತ್ತು ನಿರ್ವಹಣಾ ಅಧಿಕಾರಿ ಡಿ.ಎಸ್ ಪಟ್ವಾಲ್ ನಿರಾಕರಿಸಿದರು.

ʻಚಾರಣಕ್ಕೆ ತೆರಳುವ ಸಂದರ್ಭದಲ್ಲಿ ಎಲ್ಲ ಸದಸ್ಯರ ಜವಾಬ್ದಾರಿ ಏಜೆನ್ಸಿಯದ್ದೇ ಆಗಿರುತ್ತದೆ. ಇದರಲ್ಲಿ ಸ್ಥಳೀಯ ಆಡಳಿತದ ಪಾತ್ರ ಇರುವುದಿಲ್ಲ. ಏಜೆನ್ಸಿಯು ಚಾರಣಕ್ಕೆ ಜನರನ್ನು ಕರೆದುಕೊಂಡು ಹೋಗುವಾಗ ಏನೇ ದುರಂತ ಸಂಭವಿಸಿದರೂ ನಮ್ಮದೇ ಜವಾಬ್ದಾರಿ, ಎಲ್ಲವನ್ನೂ ನಾವೇ ನಿರ್ವಹಿಸುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ. ಈ ರೀತಿ ದುರಂತ ಸಂಭವಿಸಿದರೆ, ಕಾರ್ಯಾಚರಣೆಯ ವೆಚ್ಚವನ್ನು ಸಹ ಆಯಾ ಏಜೆನ್ಸಿಯೇ ತುಂಬಬೇಕು. ಆದರೆ, ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನಿಂದ "ಈ ಕಾರ್ಯಾಚರಣೆಯ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದ್ದು, ನೀವು ಸಹಕಾರ ನೀಡಿ" ಎನ್ನುವ ಸಂದೇಶ ನಮಗೆ ಬಂದಿತ್ತುʼ ಎಂದು ಮಾಹಿತಿ ನೀಡಿದರು.

ʻಇನ್ನು ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಸೇನೆ, ಎಸ್‌ಡಿಆರ್‌ಎಫ್ , ಕಂದಾಯ ಇಲಾಖೆ ಹಾಗೂ ಉತ್ತರಾಖಂಡದ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈ ಜೋಡಿಸಿದವು‌ʼ ಎಂದು ಮಾಹಿತಿ ನೀಡಿದರು.

ಸಹಸ್ರತಾಲ್; ಕಠಿಣ ಚಾರಣಗಳಲ್ಲಿ ಒಂದು

ಉತ್ತರಾಖಂಡದ ಉತ್ತರಕಾಶಿಯಲ್ಲಿನ ಚಾರಣ ಪ್ರದೇಶಗಳನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಮೂರು ವರ್ಗಗಳಾಗಿ ವಿಂಗಡಣೆ ಮಾಡಿದೆ. ಸುಲಭ ಚಾರಣ, ಮಧ್ಯಮ ಚಾರಣ ಹಾಗೂ ಕಠಿಣ ಚಾರಣ ಎಂದು ವರ್ಗೀಕರಿಸಲಾಗಿದೆ. ಈ ದುರಂತ ಸಂಭವಿಸಿದ ಸಹಸ್ತ್ರತಾಲ್ ಚಾರಣವು ಕಠಿಣ ಚಾರಣದ ಅಡಿಯಲ್ಲಿ ಬರುತ್ತದೆ.


ಕಠಿಣ ಚಾರಣ ಮಾಡುವುದಕ್ಕೆ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಕೆಲವು ನಿರ್ದಿಷ್ಟ ನಿಯಮಗಳನ್ನು ರೂಪಿಸಿದೆ. 

* 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಚಾರಣಿಗರು ಆನ್‌ಲೈನ್‌ ನೋಂದಣಿ ಮಾಡುವಾಗ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಟ್ರೆಕ್‌ನ ಚೆಕ್‌ಪಾಯಿಂಟ್‌ನಲ್ಲಿಯೂ ಇದನ್ನು ಪರಿಶೀಲಿಸಲಾಗುತ್ತದೆ.

* ಪ್ರದೇಶದ ಹವಾಮಾನ ಮತ್ತು ರಸ್ತೆ ಸ್ಥಿತಿಯನ್ನು ಅವಲಂಬಿಸಿ ಚಾರಣ ಅನುಮತಿಯನ್ನು ಯಾವಾಗ ಬೇಕಾದರೂ ರದ್ದುಗೊಳಿಸಬಹುದು.

* ಮಧ್ಯಮ ಅಥವಾ ಕಠಿಣ ಚಾರಣಗಳಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸುವ ಮೊದಲು ಏಜೆನ್ಸಿಯನ್ನು ನೇಮಿಸಿಕೊಳ್ಳುವುದು ಕಡ್ಡಾಯವಾಗಿದೆ ಎನ್ನುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ.  

ಘಟನೆಯ ಹಿನ್ನೆಲೆ ಏನು ?

ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್ ಗೈಡ್‌ಗಳು ಸೇರಿದಂತೆ 22 ಜನರ ತಂಡವೊಂದು ಉತ್ತರಕಾಶಿಯ ಎತ್ತರದ ಸಹಸ್ರತಾಲ್ ಪ್ರದೇಶಕ್ಕೆ ಚಾರಣಕ್ಕೆ ಹೋಗಿದ್ದರು. ಪ್ರತಿಕೂಲ ಹವಾಮಾನದಿಂದ ಚಾರಣಕ್ಕೆ ತೆರಳಿದ್ದ ತಂಡದ ಸದಸ್ಯರು ಅಪಾಯಕ್ಕೆ ಸಿಲುಕಿದ್ದರು. ಚಾರಣದಿಂದ ಹಿಂತಿರುವಾಗ ಅಪಾಯಕ್ಕೆ ಸಿಲುಕಿದ್ದ 22 ಜನರಲ್ಲಿ 9 ಜನ ದಾರುಣ ಸಾವನ್ನಪ್ಪಿದ್ದಾರೆ. ಹಿಮಬಿರುಗಾಳಿಗೆ ಸಿಲುಕಿ ಬದುಕುಳಿದ 13 ಜನರು ಶುಕ್ರವಾರ (ಜೂ.7) ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.

ಮೃತದೇಹಗಳನ್ನು ಉತ್ತರಕಾಶಿಯಿಂದ ನೇರವಾಗಿ ಬೆಂಗಳೂರಿಗೆ ತರಲು ಸಾಧ್ಯವಾಗದೆ ಇರುವುದರಿಂದ ಆಂಬುಲೆನ್ಸ್‌ಗಳಲ್ಲಿ ರಸ್ತೆ ಮಾರ್ಗವಾಗಿ ದೆಹಲಿಗೆ ತೆಗೆದುಕೊಂಡು ಬರಲಾಗಿದ್ದು, ಅಲ್ಲಿಂದ ಮೂರು ಪ್ರತ್ಯೇಕ ವಿಮಾನಗಳಲ್ಲಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು.   

Tags:    

Similar News