Fire Accident | ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ: ಇಬ್ಬರು ಕಾರ್ಮಿಕರು ಸಜೀವ ದಹನ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.;

Update: 2025-02-06 10:01 GMT
ಬೆಂಕಿ ಅವಘಡ

ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿ ನಡೆದಿದೆ.

ಉತ್ತರಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಮೃತ ಕಾರ್ಮಿಕರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗುತ್ತಿಗೆದಾರ ಮತ್ತು ಇಂಜಿನಿಯರ್ ಸತೀಶ್​ಗೆ ಸೇರಿದ ಶಿವಾನಿ ಗ್ರೀನ್ ಲೇಔಟ್​ನಲ್ಲಿರುವ 3 ಅಂತಸ್ತಿನ ಕಟ್ಟಡದಲ್ಲಿ ಘಟನೆ ನಡೆದಿದ್ದು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ವುಡ್​ ವರ್ಕ್ಸ್ ಕೆಲಸ ಮಾಡಲಾಗುತ್ತಿತ್ತು. ಮರ ಫಾಲೀಷ್ ಮಾಡಲು ಥಿನ್ನರ್ ಬಳಕೆ ಮಾಡಲಾಗಿದೆ. ಕೆಮಿಕಲ್ ಕೂಡ ಸಮೀಪದಲ್ಲೇ ಸಂಗ್ರಹಿಸಿಡಲಾಗಿತ್ತು. ಈ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ.

ನೀರಿನ ಟ್ಯಾಂಕರ್ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕನೊಬ್ಬನ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಹತ್ತಲು ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಘಟನೆ ಬಳಿಕ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ  ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

Tags:    

Similar News