ನಕ್ಸಲ್ ಕೊನೆಯ ಕೊಂಡಿ ಶರಣಾಗತಿ: ಕೋಟೆಹೊಂಡ ರವೀಂದ್ರ ಪೊಲೀಸ್ ವಶಕ್ಕೆ
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.;
ರಾಜ್ಯದ ನಕ್ಸಲ್ ಚಟುವಟಿಕೆಯ ಕೊನೆಯ ಕೊಂಡಿ ಎನ್ನಲಾದ ಕೋಟೆಹೊಂಡ ರವೀಂದ್ರ ಶನಿವಾರ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತನಾಗಿದ್ದ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾನೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾನೆ.
ನಕ್ಸಲ್ ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ನಕ್ಸಲ್ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಆರು ಮಂದಿ ನಕ್ಸಲ್ರು ಶರಣಾಗಿದ್ದರು. ಇದೀಗ ರವೀಂದ್ರ ಶರಣಾಗಿದ್ದು, ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿ ಆಪರೇಷನ್ ಮುಕ್ತಾಯಗೊಂಡಿದೆ. ಇನ್ನೊಬ್ಬ ನಕ್ಸಲ್ ಮಹಿಳೆ ತೊಂಬಟ್ಟು ಲಕ್ಷ್ಮಿ ಸದ್ಯದಲ್ಲೇ ಶರಣಾಗತಳಾಗಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.