The Federal Explainer | ವಾಲ್ಮೀಕಿ ನಿಗಮ ಹಗರಣ: ಈವರೆಗೆ ಏನೇನಾಗಿದೆ?

ಬಹುಕೋಟಿ ವಾಲ್ಮೀಕಿ ನಿಗಮ ಹಗರಣದ ವಿಷಯದಲ್ಲಿ ಸಿಬಿಐ ತನಿಖೆ ಹಾಗೂ ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಬೀದಿಗಿಳಿದಿವೆ. ಸರ್ಕಾರ ಒತ್ತಡಕ್ಕೆ ಸಿಲುಕಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಈವರೆಗಿನ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

Update: 2024-06-29 09:19 GMT

Valmiki Corporation Scam | ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ, ಧರಣಿ ಮುಂತಾದ ಹೋರಾಟಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಪ್ರತಿಪಕ್ಷ ಬಿಜೆಪಿ ಮಾಡುತ್ತಿದೆ. ಪಕ್ಷದ ಹಿರಿಯ ನಾಯಕ, ಮಾಜಿ ಸಚಿವರಾಗಿರುವ ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯಕ್ಕೆ ಸೇರಿರುವ ಬಿ ಶ್ರೀರಾಮುಲು ಅವರಂತೂ ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೇ ಮಲಗಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ.

ಬರೋಬ್ಬರಿ 190 ಕೋಟಿ ರೂಪಾಯಿ ಸರ್ಕಾರದ ಹಣವನ್ನು ಯಾವುದೇ ಯೋಜನೆ, ಅನುದಾನ, ಪಾವತಿಯ ನೆಪ ಕೂಡ ಇಲ್ಲದೆ ನೇರವಾಗಿ ನಿಗಮದ ಖಾತೆಯಿಂದ ಖಾಸಗಿ ವ್ಯಕ್ತಿಗಳ ಖಾತೆಗೆ ಏಕಾಏಕಿ ವರ್ಗಾವಣೆ ಮಾಡಿದ ಹಗಲು ದರೋಡೆ ಪ್ರಕರಣ ಇದು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಣಕಾಸು ಖಾತೆಯ ಹೊಣೆಗಾರರಾಗಿರುವಾಗಲೇ ಈ ಬೆಚ್ಚಿಬೀಳಿಸುವ ಜನರ ಹಣದ ಲೂಟಿ ನಡೆದಿದೆ. ಆ ಹಿನ್ನೆಲೆಯಲ್ಲೇ ಪ್ರತಿಪಕ್ಷಗಳು ಸಿಎಂ ರಾಜೀನಾಮೆ ನೀಡುವಂತೆ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸುತ್ತಿದೆ.

ಪ್ರಕರಣದಲ್ಲಿ ಈವರೆಗೆ ಏನೇನಾಗಿದೆ?

ಕಳೆದ ಮೇ ತಿಂಗಳಿನಲ್ಲಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಭಾರೀ ಮೊತ್ತದ ಹಣವನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ತಮ್ಮ ಪಾತ್ರವೇನೂ ಇಲ್ಲ. ಆದರೆ, ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೇ ಅದಕ್ಕೆ ಹೊಣೆ ಎಂದು ಡೆತ್ನೋಟ್ ಬರೆದಿಟ್ಟು ನಿಗಮದ ಅಧಿಕಾರಿ ಚಂದ್ರಶೇಖರನ್ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಆತ್ಮಹತ್ಯೆಯ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಆ ಬಳಿಕ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಎಸ್ಐಟಿ ರಚಿಸಿತ್ತು. ಅದರ ಬೆನ್ನಲ್ಲೇ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಬರೆದ ಪತ್ರದ ಹಿನ್ನೆಲೆಯಲ್ಲಿ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಂಡಿತ್ತು. ಸಿಬಿಐಗೆ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ಸಚಿವ ಬಿ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಜಾರಿ ನಿರ್ದೇಶನಾಲಯ(ಇಡಿ) ಕೂಡ ಮತ್ತೊಂದು ಕಡೆಯಿಂದ ತನಿಖೆ ನಡೆಸುತ್ತಿದೆ.

ಈವರೆಗೆ ಎಷ್ಟು ಜನರನ್ನು ಬಂಧಿಸಲಾಗಿದೆ?

ಆತ್ಮಹತ್ಯೆಗೆ ಶರಣಾಗಿರುವ ಅಧಿಕಾರಿ ಚಂದ್ರಶೇಖರನ್ ಅವರು ತಮ್ಮ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದ ನಿಗಮದ ಎಂಡಿ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿರುವ ಸಾಯಿತೇಜ ಅವರನ್ನು ಎಸ್ಐಟಿ ಬಂಧಿಸಿದೆ.

ಜೊತೆಗೆ ಹಣ ವರ್ಗಾವಣೆಯ ಸೂತ್ರಧಾರ ಎನ್ನಲಾಗಿರುವ ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಬಿ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ನಾಗೇಶ್ವರ ರಾವ್ ಸೇರಿದಂತೆ ಈವರೆಗೆ 11 ಮಂದಿಯನ್ನು ಎಸ್ಐಟಿ ಬಂಧಿಸಿದೆ.

ಎಷ್ಟು ಹಣ ಲೂಟಿ? ವಸೂಲಾದದ್ದು ಎಷ್ಟು?

ನಿಗಮದ ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ದಿಢೀರನೇ 187 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ. ಯಾವುದೇ ಅಧಿಕೃತ ಪ್ರಕ್ರಿಯೆ ಇಲ್ಲದೆ ಮೌಖಿಕ ಸೂಚನೆ ಮೇಲೆ ಈ ವರ್ಗಾವಣೆ ನಡೆದಿದೆ. ಬಳಿಕ ಆ ಮೊತ್ತವನ್ನು ಖಾಸಗಿ ಕಂಪನಿ ಮತ್ತು ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಅಧಿಕಾರಿ ತಮ್ಮ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದರು. ಆ ಬಳಿಕ ಎಸ್ಐಟಿ ತನಿಖೆಯಲ್ಲಿ ಸುಮಾರು 95 ಕೋಟಿ ಹಣ ವಿವಿಧ ಖಾಸಗಿ ಕಂಪನಿ ಮತ್ತು ವ್ಯಕ್ತಿಗಳ ಪಾಲಾಗಿರುವುದು ಪತ್ತೆಯಾಗಿತ್ತು.

ಆ ಪೈಕಿ ಈವರೆಗೆ ವಿವಿಧ ಖಾಸಗಿ ವ್ಯಕ್ತಿಗಳು, ಕಂಪನಿಗಳ ಖಾತೆಗಳಿಂದ 28 ಕೋಟಿ ರೂ.ಗಳಷ್ಟು ಹಣವನ್ನು ಎಸ್ಐಟಿ ಜಪ್ತಿ ಮಾಡಿದೆ. ಜೊತೆಗೆ ಆ ಹಣ ಬಳಸಿ ಖರೀದಿಸಿದ್ದ ಚಿನ್ನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಸುಮಾರು 193 ಬ್ಯಾಂಕುಗಳಿಗೆ ಸೇರಿದ ಸುಮಾರು 600 ಖಾತೆಗಳಿಂದ ಈ ಹಣ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಅಲ್ಲದೆ, ದನ ಮೇಯಿಸುವವರು, ಕುರಿಗಾಹಿಗಳು, ಬಾರ್ ಅಂಡ್ ರೆಸ್ಟೋರೆಂಟ್, ಚಿನ್ನದ ಅಂಗಡಿಗಳು, ಸೇರಿದಂತೆ ವಿವಿಧ ಖಾಸಗಿ ಖಾತೆಗಳಲ್ಲಿ ಈ ಹಣ ಜಮಾ ಮಾಡಲಾಗಿತ್ತು ಎಂದು ಎಸ್ಐಟಿ ಮಾಹಿತಿ ನೀಡಿದೆ!

ಬಹುಕೋಟಿ ಹಗರಣದ ಬೆಳಕಿಗೆ ಬಂದಿದ್ದು ಹೇಗೆ?

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿ) ಬೆಂಗಳೂರು ಕೇಂದ್ರ ಕಚೇರಿಯ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಎಂಬುವರು ಕೆಲವು ದಿನಗಳ ಹಿಂದೆ ಶಿವಮೊಗ್ಗದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಧಿಕಾರಿಯ ಪತ್ನಿ ನೀಡಿದ ದೂರಿನ ಮೇಲೆ ಪೋಲೀಸರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದಾಗ, ಅಧಿಕಾರಿ ಬರೆದಿಟ್ಟಿದ್ದ ಆರು ಪುಟಗಳ ಡೆತ್ ನೋಟ್ ದೊರೆತಿತ್ತು. ‘ಸಚಿವರ ಕಛೇರಿಯಿಂದ ಮೌಖಿಕ ಸೂಚನೆಗಳ’ ಪ್ರಕಾರ ನಿಗಮದ ಖಾತೆಗಳಿಂದ ಅನಧಿಕೃತವಾಗಿ ಹಣಕಾಸು ವರ್ಗಾವಣೆ ಆಗಿರುವುದಾಗಿಯೂ ಮತ್ತು ಅದರಲ್ಲಿ ತಮ್ಮ ಪಾತ್ರ ಇಲ್ಲವೆಂದೂ ಅದರಲ್ಲಿ ಹೇಳಲಾಗಿತ್ತು. ಜೊತೆಗೆ ನಿಗಮದ ಅಧಿಕಾರಿಗಳು, ಮಧ್ಯವರ್ತಿ ಮತ್ತು ಬ್ಯಾಂಕಿನ ಅಧಿಕಾರಿಗಳು ಸೇರಿ ಐವರು ತಮ್ಮ ಸಾವಿಗೆ ನೇರ ಹೊಣೆ ಎಂದೂ ಅಧಿಕಾರಿ ತಮ್ಮ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು. ಆ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮಾಧ್ಯಮ ಮತ್ತು ಪ್ರತಿಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿತ್ತು.

Tags:    

Similar News