2022ರ ಪ್ರತಿಭಟನೆ ಪ್ರಕರಣ | ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ ಸಮನ್ಸ್ ಜಾರಿ
ಪ್ರತಿಭಟನೆ ನಡೆಸಿ ಸಾರ್ವಜನಿಕ ಶಾಂತಿ ಕದಡಿದೆ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.;
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ವಿಚಾರಣೆ ಖಂಡಿಸಿ 2022 ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 29 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ನ್ಯಾಯಾಲಯ ಗುರುವಾರ ಸಮನ್ಸ್ ಜಾರಿ ಮಾಡಿದೆ.
ಜೂನ್ 2022 ರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರತಿಭಟನೆಯಿಂದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗಿದೆ ಮತ್ತು ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.
ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಇದೇ ಘಟನೆ ಸಂಬಂಧಿತ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನಂತರ ರದ್ದುಗೊಳಿಸಿತ್ತು. ಆದರೆ, ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಆಗಸ್ಟ್ 29ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿದೆ.
ಏನಿದು ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ವಿಚಾರಣೆ ನೆಪದಲ್ಲಿ ಇಡಿ, ರಾಹುಲ್ ಗಾಂಧಿಯವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು.ಕೆಪಿಸಿಸಿ ವತಿಯಿಂದ 2022 ರ ಜೂ.16ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಮತ್ತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಶಿವಾಜಿನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಖಾಸಗಿ ದೂರು ದಾಖಲಿಸಿದ್ದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಆದೇಶ ಉಲ್ಲಂಘಿಸಿ ಡಿ.ಕೆ.ಶಿವಕುಮಾರ್ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಪ್ರತಿಭಟನೆ ನಡೆಸಿದ್ದರು.