ಕೆಐಎಎಲ್ ಟರ್ಮಿನಲ್ 2ನಲ್ಲಿ ದಕ್ಷಿಣ ಏಷ್ಯಾ ಕಲಾ ಪರಂಪರೆ, ಸಂಸ್ಕೃತಿ ಅನಾವರಣ
ಇದೀಗ ಪ್ರಾರಂಭವಾಗಿರುವ ಮ್ಯೂಸಿಯಂ ಆಫ್ ಆರ್ಟ್ ಹಾಗೂ ಫೋಟೋಗ್ರಫಿಯ ಸಂವಾದಾತ್ಮಕ ಕಲಾ ಸಂಗ್ರಹವು ಟರ್ಮಿನಲ್ 2ರ ಸೌಂದರ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತವೆ ಹಾಗೂ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುತ್ತದೆ ಎಂದು ಕೆಐಎಎಲ್ ತಿಳಿಸಿದೆ.;
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿರುವ ಮ್ಯೂಸಿಯಂ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ವು ಮ್ಯೂಸಿಯಂ ಆಫ್ ಆರ್ಟ್ ಹಾಗೂ ಫೋಟೋಗ್ರಫಿ (ಎಂಎಪಿ) ಸಹಭಾಗಿತ್ವದಲ್ಲಿ ಟರ್ಮಿನಲ್ 2 ಅನ್ನು ಪ್ರಯಾಣಿಕರಿಗೆ ವಿಶಿಷ್ಟವಾದ ಸಾಂಸ್ಕೃತಿಕ ಅನುಭವ ನೀಡುವ ಕೇಂದ್ರವನ್ನಾಗಿ ರೂಪಿಸಲು ಮುಂದಾಗಿದೆ. ಈ ಸಹಭಾಗಿತ್ವವು ವಿಮಾನ ನಿಲ್ದಾಣವನ್ನು ಕೇವಲ ಪ್ರಯಾಣದ ಕೇಂದ್ರವಾಗಿಸದೆ, ದಕ್ಷಿಣ ಏಷ್ಯಾದ ಕಲಾ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆರೆಯುವ ಅವಕಾಶವನ್ನು ಕಲ್ಪಿಸುವ ಗುರಿ ಹೊಂದಿದೆ.
ಟರ್ಮಿನಲ್ 2 ಈಗಾಗಲೇ 60ಕ್ಕೂ ಹೆಚ್ಚು ಕಲಾವಿದರ 210ಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹವನ್ನು ಹೊಂದಿದ್ದು, ಇದು ಕಲೆಯ ಪ್ರಮುಖ ಆಕರ್ಷಣೆಯಾಗಿದೆ. ಇದೀಗ ಎಂಎಪಿಯ ಸಂವಾದಾತ್ಮಕ ಕಲಾ ಸಂಗ್ರಹದ ಸೇರ್ಪಡೆಯು ಟರ್ಮಿನಲ್ 2ರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಹೊಸ ಕಲಾಕೃತಿಗಳ ಸ್ಥಾಪನೆಯು ಪ್ರಯಾಣಿಕರ ಬಿಡುವಿನ ಸಮಯದ ಅನುಭವವನ್ನು ವೃದ್ಧಿಸಲಿದೆ.
ಡಿಜಿಟಲ್ ಗ್ಯಾಲರಿ
ಪ್ರಯಾಣಿಕರು ಇಲ್ಲಿ ಪ್ರಮುಖ ಖ್ಯಾತ ಕಲಾವಿದರಾದ ಜಾಮಿನಿ ರಾಯ್, ಜಂಗರ್ ಸಿಂಗ್ ಶ್ಯಾಮ್, ಜ್ಯೋತಿ ಭಟ್, ಸುರೇಶ್ ಪಂಜಾಬಿ, ಎಲ್.ಎನ್. ತಲ್ಲೂರ್ ಮುಂತಾದವರು ರಚಿಸಿದ ಹಲವು ಕಲಾಕೃತಿಗಳನ್ನು ಒಳಗೊಂಡ ಡಿಜಿಟಲ್ ಲೈಬ್ರರಿ ಯನ್ನು ವೀಕ್ಷಿಸಬಹುದು ಇದರೊಂದಿಗೆ, ಬಾಲಿವುಡ್ ಪೋಸ್ಟರ್ಗಳು ಮತ್ತು ಲಾಬಿ ಕಾರ್ಡ್ಗಳ ಸಂಗ್ರಹವೂ ನೋಡಲು ಲಭ್ಯವಿದೆ. ಈ ಕಿರುಚಿತ್ರಗಳ ಸರಣಿಯು ಆಯ್ದ ಕಲಾವಿದರ ಜೀವನ ಮತ್ತು ಕಲಾಭ್ಯಾಸಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ.
ಎಸ್.ಎಚ್. ಜಾ ಅವರ "ಯುನಿವರ್ಸ್", ಜಾಮಿನಿ ರಾಯ್ ಅವರ "ಲಾಸ್ಟ್ ಸಪ್ಪರ್", ಎನ್.ಎಸ್. ಬೇಂದ್ರೆ ಅವರ "ದ ಲೋಟಸ್ ಸೆಲ್ಲರ್ಸ್" ಮುಂತಾದ ಪ್ರಸಿದ್ಧ ಕಲಾಕೃತಿಗಳನ್ನು ಪ್ರಯಾಣಿಕರು ನೋಡಬಹುದು.
ನವೀನ ವೈಶಿಷ್ಟ್ಯಗಳು: ಡಿಜಿಟಲ್ ದೀಪ, ವರ್ಚುವಲ್ ಶುಭಾಶಯ**
ಭಾರತೀಯ ಸಂಪ್ರದಾಯದ ಪ್ರಕಾರ ಶುಭಾರಂಭವನ್ನು ಸೂಚಿಸುವ ದೀಪ ಬೆಳಗಿಸುವ ಪ್ರಕ್ರಿಯೆ ಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಪ್ರಯಾಣಿಕರೇ ಡಿಜಿಟಲ್ ರೂಪದಲ್ಲಿ ಬೆಳಗಿ ಅನುಭವಿಸಬಹುದಾಗಿದೆ. ಎಂಎಪಿಯ ಕ್ಯುಮುಲಸ್ ಅಪ್ಲಿಕೇಶನ್ ಬಳಸಿ ಸಂಗ್ರಹದಲ್ಲಿರುವ ಹಳೆಯ ಕಲಾಕೃತಿಗಳನ್ನು ಹುಡುಕಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಕೂಡಾ ಅನುಕೂಲ ಕಲ್ಪಿಸಲಾಗಿದೆ.
ಪ್ರಯಾಣಿಕರು ಎಂಎಪಿಯ ಸಂಗ್ರಹದಲ್ಲಿನ ಕಲಾಕೃತಿಗಳಿಂದ ಪ್ರೇರಿತವಾದ ಶುಭಾಶಯಗಳನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಲು ಅವಕಾಶ ಒದಗಿಸಲಾಗಿದೆ. ಜೊತೆಗೆ, ಎಂಎಪಿಯ ಸಂಗ್ರಹದ ಗೃಹೋಪಯೋಗಿ ಮತ್ತು ಜೀವನಶೈಲಿಯ ಉತ್ಪನ್ನಗಳ ವಿಶೇಷ ಚಿಲ್ಲರೆ ವಲಯಕ್ಕೆ ಭೇಟಿ ನೀಡಿ ಖರೀದಿಸಬಹುದಾಗಿದೆ.
ಭೂರಿ ಬಾಯಿ: ಮೈ ಲೈಫ್ ಅಸ್ ಆನ್ ಆರ್ಟಿಸ್ಟ್' ಪ್ರದರ್ಶನ
ಇದೇ ವೇಳೆ, ಪದ್ಮಶ್ರೀ ಪುರಸ್ಕೃತ ಭೂರಿ ಬಾಯಿ ಅವರ ಜೀವನ ಮತ್ತು ಕಲಾ ಪ್ರಯಾಣವನ್ನು ಪ್ರದರ್ಶಿಸುವ ಭೂರಿ ಬಾಯಿ: ಮೈ ಲೈಫ್ ಅಸ್ ಆನ್ ಆರ್ಟಿಸ್ಟ್" ಎಂಬ ಪ್ರದರ್ಶನವನ್ನು ಟರ್ಮಿನಲ್ 2ರಲ್ಲಿ ಆಯೋಜಿಸಲಾಗಿದೆ. ಕಲಾವಿದ ಭೂರಿ ಬಾಯಿ ಅವರ 1980ರ ದಶಕದ ಆರಂಭಿಕ ಕೃತಿಗಳಿಂದ ಹಿಡಿದು ಇತ್ತೀಚಿನ ಭವ್ಯ ಕಲಾಕೃತಿಗಳವರೆಗೆ ಈ ಪ್ರದರ್ಶನವು ಅವರ ಕಲಾತ್ಮಕ ಬೆಳವಣಿಗೆಯ ಚಿತ್ರಣ ನೀಡುತ್ತದೆ.