Mysore MUDA Case | ಸಿದ್ದರಾಮಯ್ಯ ಪ್ರಕರಣ| ಸಿಬಿಐ ತನಿಖೆಗೆ ವಹಿಸಲು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸ್ನೇಹಮಯಿ ಕೃಷ್ಣ
ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಆರೋಪಿಗಳ ಪರವಾಗಿ ಯಾವ ರೀತಿ ತನಿಖೆ ನಡೆಸಿದೆ ಎಂಬುವುದನ್ನು ವಿಭಾಗೀಯ ಪೀಠಕ್ಕೆ ಗಮನಕ್ಕೆ ತಂದಿದ್ದೇನೆ ಎಂದು ಕೃಷ್ಣ ಹೇಳಿದರು.;
ಸ್ನೇಹಮಯಿ ಕೃಷ್ಣ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದಾರೆ.
ಮುಡಾ ಹಗರಣ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಏಕಸದಸ್ಯ ಪೀಠ ಸ್ನೇಹಮಯಿ ಕೃಷ್ಣ ಅರ್ಜಿಯನ್ನು ವಜಾ ಮಾಡಿತ್ತು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಾಳರಾಗಿದ್ದರು.
ಕೋರ್ಟ್ ಅರ್ಜಿ ವಜಾ ಮಾಡಿದ ಬಳಿಕ ಸ್ನೇಹಮಯಿ ಕೃಷ್ಣ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳಿಗೆ ರಕ್ಷಣೆ
ಮೇಲ್ಮನವಿ ಸಲ್ಲಿಕೆ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, "ಲೋಕಾಯುಕ್ತ ಸರಿಯಾಗಿ ತನಿಖೆ ನಡೆಸದಿರುವುದರ ಬಗ್ಗೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಲೋಕಾಯುಕ್ತದವರು ಸರಿಯಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ವಜಾ ಮಾಡಿತ್ತು. ಆದರೆ ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸರಿಯಾಗಿ ತನಿಖೆ ಮಾಡದಿರುವುದು ಸ್ಪಷ್ಟವಾಗಿ ಕಂಡುಬಂದಿದೆ" ಎಂದರು.
"ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಲೋಕಾಯುಕ್ತ, ಆರೋಪಿಗಳ ಪರವಾಗಿ ಯಾವ ರೀತಿ ತನಿಖೆ ನಡೆಸಿದೆ ಎಂಬುವುದನ್ನು ವಿಭಾಗೀಯ ಪೀಠಕ್ಕೆ ಗಮನಕ್ಕೆ ತಂದಿದ್ದೇನೆ. 14ನಿವೇಶಗಳಿಗೆ ಸಂಬಂಧಪಟ್ಟಂತೆ ಅವರು ಹೀಗೆ ನಡೆದುಕೊಂಡಿದ್ದಾರೆ. ಆದರೆ ಸಾವಿರಾರು ನಿವೇಶನಗಳ ಸಮಗ್ರ ತನಿಖೆಗೆ ನಡೆಸಲು ಸಿಬಿಐ ತನಿಖೆಯಾಗಬೇಕು" ಎಂದು ಅವರು ಹೇಳಿದರು.
ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಬೆಂಬಲ ಇದೆ
ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದವರು ಪರೋಕ್ಷವಾಗಿ ಬೆಂಬಲ ಹಾಗೂ ಸಹಕಾರ ನೀಡುತ್ತಿದ್ದಾರೆ. ಸಿಬಿಐ ತನಿಖೆ ನಂತರ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಶಿಕ್ಷೆಯಾಗಲಿದೆ. ಯಾವ ರೀತಿಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಹಿಂದೆ ಇದ್ದ ಮುಡಾ ಕಮಿಷನ್ ನಟೇಶ್ ಅವರ ವಿಚಾರಣೆ ನಡೆಸಲು ಲೋಕಾಯುಕ್ತ ತನಿಖಾಧಿಕಾರಿಗಳು ಪತ್ರ ಬರೆದಿದ್ದರು ಎಂದು ಮಾಹಿತಿ ನೀಡಿದರು.
ಈ ಪತ್ರದಲ್ಲಿ ಸಿದ್ದರಾಮಯ್ಯ ಹಾಗೂ ಪಾರ್ವತಿ ಅವರಿಗೆ ಹೆಚ್ಚಿನ ಲಾಭ ಮಾಡಿಸಿಕೊಡುವ ಉದ್ದೇಶದಿಂದ ಅಕ್ರಮವಾಗಿ 14 ನಿವೇಶಗಳನ್ನು ಹಂಚಿರುವ ಆರೋಪ ಮಾಡಿದ್ದರು. ಇಲ್ಲಿ ಅಕ್ರಮ ನಡೆದಿದೆ ಎಂಬುವುದನ್ನು ಲೋಕಯುಕ್ತರೇ ಉಲ್ಲೇಖಿಸಿದ್ದು, ನಿವೇಶಗಳು ಪಡೆದವರು ಕೂಡ ಅಪರಾಧಿಗಳೇ ಎಂದು ತಿಳಿಯುತ್ತದೆ. ಇಂಥಹ ಸೂಕ್ಷ್ಮ ವಿಷಯಗಳನ್ನು ಮಚ್ಚಿಟ್ಟು ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.