Snehamayi Krishna | ಇನ್ನು ಮುಂದೆ ರೌಡಿ ಎಂದರೆ ಕಾನೂನು ಕ್ರಮ: ಸ್ನೇಹಮಯಿ ಕೃಷ್ಣ
Snehamayi Krishna : ಮುಂದಿನ ದಿನಗಳಲ್ಲಿ ಯಾರಾದರೂ ನನ್ನನ್ನು ರೌಡಿ ಶೀಟರ್, ರೌಡಿ ಎಂದು ಕರೆದರೆ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.;
ನನ್ನ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ದುರುದ್ದೇಶಪೂರ್ವಕವಾಗಿ ನನ್ನ ಹೆಸರನ್ನು ರೌಡಿಪಟ್ಟಿಗೆ ಸೇರಿಸಿದ್ದು, ಇದೀಗ ರೌಡಿ ಪಟ್ಟಿ ಯಿಂದ ನನ್ನ ಹೆಸರನ್ನು ತೆಗೆಯುವಂತೆ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಆದೇಶ ಮಾಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಯಾರಾದರೂ ನನ್ನನ್ನು ರೌಡಿ ಶೀಟರ್, ರೌಡಿ ಎಂದು ಕರೆದರೆ, ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾನೂನು ಹೋರಾಟ ನಡೆಸಿ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರದಿಂದ ಆದೇಶ ಪಡೆದಿದ್ದೇನೆ. ರೌಡಿಪಟ್ಟಿಯಿಂದ ಹೆಸರು ತೆಗೆಯುವಂತೆ ಪ್ರಾಧಿಕಾರ ಆದೇಶಿಸಿದೆ. ಇದು ನನ್ನ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ಹೇಳಿದ್ದಾರೆ.
ಈ ಹಿಂದೆ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಗೂಂಡಾ ಕಾಯ್ದೆಯನ್ನು ಹಾಕುವಂತೆ ಮತ್ತು ಗಡಿಪಾರು ಮಾಡುವಂತೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಅವರು ಮೈಸೂರಿನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ಸ್ನೇಹಮಯಿ ಕೃಷ್ಣ ವಿರುದ್ಧವೇ ರಾಜ್ಯದಾದ್ಯಂತ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೈಸೂರಿನಲ್ಲೇ 17 ಪ್ರಕರಣಗಳು ಇವೆ. ಅವರ ವಿರುದ್ಧ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ. ಈಗಲೂ ರೌಡಿಶೀಟರ್ ಆಗಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ಕೊಲೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಾಗಿದೆ ಎಂದು ಅವರು ಆರೋಪಿಸಿದ್ದರು.
ಸ್ನೇಹಮಯಿ ಕೃಷ್ಣ ಅವರು ಪ್ರಮುಖ ವ್ಯಕ್ತಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದ ಲಕ್ಷ್ಮಣ್ ಅವರು, ಕೃಷ್ಣ ಅವರ ಬೆದರಿಕೆಯಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಅಪರಿಚಿತರು ಈತನ ಜತೆ ಒಡನಾಟ ಹೊಂದಿರುವುದಾಗಿ ಹೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದೂ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ನೇಹಮಯಿ ಕೃಷ್ಣಾ, ನಾನು ರೌಡಿ ಶೀಟರ್ ಅಲ್ಲ ಎಂದು ನ್ಯಾಯಾಲಯವೇ ಘೋಷಣೆ ಮಾಡಿದೆ. ಅದನ್ನು ಲಕ್ಷ್ಮಣ್ ಓದಿಕೊಳ್ಳಲಿ. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜದಲ್ಲಿ ಆಗುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಒಬ್ಬ ಭ್ರಷ್ಟ ಪೋಲಿಸ್ ಅಧಿಕಾರಿ ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ರೌಡಿ ಶೀಟ್ ಓಪನ್ ಮಾಡಿದ್ದ. ಆದರೆ ನ್ಯಾಯಾಲಯ ಒಬ್ಬ ಸಾಮಾಜಿಕ ಕಾರ್ಯಕರ್ತ ರೌಡಿ ಶೀಟರ್ ಅಲ್ಲ ಎಂದು ತೀರ್ಪು ನೀಡಿದೆ. ನಾನು ಹೇಗೆ ರೌಡಿ ಶೀಟರ್, ಎಷ್ಟು ಕೊಲೆ ಮಾಡಿದ್ದೀನಿ, ಎಷ್ಟು ಸುಲಿಗೆ ಮಾಡಿದ್ದೀನಿ, ಯಾರ ಮೇಲೆ ಹಲ್ಲೆ ಮಾಡಿದ್ದೀನಿ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದೂ ಕೃಷ್ಣ ಸವಾಲು ಹಾಕಿದ್ದರು.