Mango Season: ವಿಳಂಬವಾಗಿ ಮಾರುಕಟ್ಟೆಗೆ ಮಾವು; ಬೆಲೆ ಕುಸಿತ; ರೈತರು ಕಂಗಾಲು
ಕೋಲಾರದ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಂತರ ಹಾಗೂ ಮೈಸೂರಿನಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಆರಂಭದಲ್ಲಿ ಇಳುವರಿ ಕುಸಿತದಿಂದಾಗಿ ಬೆಲೆ ಹೆಚ್ಚಾಗಬಹುದು ಎಂದು ಮಾವು ಬೆಳೆಗಾರರು ನಿರೀಕ್ಷಿಸಿದ್ದರು.;
ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಮಾವಿನ ಫಸಲು ವಿಳಂಬವಾಗಿದ್ದು, ರಾಜ್ಯಾದ್ಯಂತ ಏಕಕಾಲಕ್ಕೆ ಬಾದಾಮಿ ಹಾಗೂ ತೋತಾಪುರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಒಂದೇ ಸಮನೆ ಮಾರುಕಟ್ಟೆಗೆ ಬಂದ ಕಾರಣ ಬೇಡಿಕೆ ಕುಸಿತ ಕಂಡಿದ್ದು ಬೆಲೆ ಇಳಿಕೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.
ಕೋಲಾರದ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. ಆರಂಭದಲ್ಲಿ ಇಳುವರಿ ಕುಸಿತದಿಂದಾಗಿ ಬೆಲೆ ಹೆಚ್ಚಾಗಬಹುದೆಂದು ಮಾವು ಬೆಳೆಗಾರರು ನಿರೀಕ್ಷಿಸಿದ್ದರು. ಆದರೆ, ಈಗ ಎಲ್ಲಾ ಮಾರುಕಟ್ಟೆಗಳಿಗೆ ಒಂದೇ ಬಾರಿಗೆ ಮಾವು ಬಂದಿರುವುದರಿಂದ ದರ ಕುಸಿದಿದ್ದು, ರಫ್ತು ಸಹ ಕಳೆದ ಬಾರಿಯಂತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ರುಚಿಯಿಂದಲೇ ಪ್ರಸಿದ್ಧವಾಗಿರುವ ಬಾದಾಮಿ ಮಾವನ್ನು ರಾಜ್ಯ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ದರ ಕುಸಿತದಿಂದ ಕಾಯಿಯ ಬೆಲೆ ಕೆ.ಜಿ.ಗೆ 100 ರೂಪಾಯಿಗಿಂತ ಹೆಚ್ಚಾಗಿಲ್ಲ. ಮೇ 21ರಂದು ಕಾಯಿಯ ಫ್ಯಾಕ್ಟರಿ ದರ ಟನ್‌ಗೆ 32,000 ರೂಪಾಯಿ ಇದ್ದರೆ, ಮೇ 24ಕ್ಕೆ ಅದು ಟನ್‌ಗೆ 28,000 ರೂಪಾಯಿಗೆ ಕುಸಿದಿದ್ದು, ಕೇವಲ ಮೂರೇ ದಿನಗಳಲ್ಲಿ ಟನ್‌ಗೆ ನಾಲ್ಕು ಸಾವಿರ ರೂಪಾಯಿ ಕಡಿಮೆಯಾಗಿದೆ ಎಂದು ಮಾವು ಬೆಳೆಗಾರರಾದ ರಾಮನಗರದ ಸಿದ್ದೇಶ್ ಎಂಬುವರು ದ ಫೆಡರಲ್ ಜತೆ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆರಂಭದಲ್ಲಿ ಆಪೂಸ್, ಪೈರಿ, ಕರಿ ಇಷಾಡ, ಮಾನಕೂರ ಮುಂತಾದ ಉತ್ತಮ ತಳಿಯ ಮಾವಿಗೆ ಉತ್ತಮ ಬೆಲೆ ಇತ್ತು. ಆದರೆ, ಈಗ ಎಲ್ಲ ಕಡೆಯಿಂದ ಮಾವಿನ ಫಸಲು ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾವಿನ ದರದಲ್ಲಿ ಭಾರಿ ಕುಸಿತ ಕಂಡಿದೆ.
ಹಾಕಿದ ಬಂಡವಾಳ ಉಳಿಸುವ ಪ್ರಯತ್ನ
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಉತ್ತಮ ದರ್ಜೆಯ ತೊಟ್ಟು ಸಮೇತ ಮಾವಿನ ಕಾಯಿಯನ್ನು ಮಾವಿನ ಮಂಡಿಗಳ ಮೂಲಕ ನಿತ್ಯ ಲಾರಿಗಳಲ್ಲಿ ರಾಜ್ಯದ ವಿವಿಧ ಪಾನೀಯ ಕಂಪನಿಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಆರಂಭದಲ್ಲಿ ಆಪೂಸ್ ಮಾವಿನಕಾಯಿ ಕೆ.ಜಿ.ಗೆ 70 ರಿಂದ 80 ರೂಪಾಯಿ ಇದ್ದ ದರ ಈಗ 30 ರೂಪಾಯಿಗೆ ಇಳಿದಿದೆ. ಇದು ಮಾವು ಬೆಳೆಗಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇದರಿಂದಾಗಿ ಬಹುತೇಕ ಮಾವು ಬೆಳೆಗಾರರು ಮಾವನ್ನು ಹಣ್ಣು ಮಾಡಿ ರಸ್ತೆ ಪಕ್ಕದಲ್ಲಿಯೇ ವ್ಯಾಪಾರ ನಡೆಸುತ್ತಿದ್ದಾರೆ.
ಶ್ರೀನಿವಾಸಪುರದ ಯುವ ರೈತ ನವೀನ್‌ಕುಮಾರ್ 'ದಿ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, "ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆರಂಭದಲ್ಲಿಯೇ ಮಾವು ಇಳುವರಿ ಕುಸಿತವಾಗಿತ್ತು. ಆತಂಕದಿಂದಲೇ ಕಡಿಮೆ ಇಳುವರಿಯನ್ನೇ ಕಾಪಾಡಿಕೊಂಡು ಬಂದಿದ್ದೆವು. ರಾಜ್ಯದೆಲ್ಲೆಡೆ ಕಡಿಮೆ ಇಳುವರಿ ಇರುವುದರಿಂದ ಬೆಲೆ ಹೆಚ್ಚಳವಾಗುತ್ತದೆ ಎಂಬ ಖುಷಿಯಲ್ಲಿದ್ದೆವು. ಆದರೆ, ಎಲ್ಲಾ ಭಾಗಗಳಿಂದ ಒಂದೇ ಸಮಯಕ್ಕೆ ಮಾರುಕಟ್ಟೆಗೆ ಮಾವಿನಹಣ್ಣು ಬಂದಿರುವುದರಿಂದ ಬಹಳ ನಿರಾಸೆಯಾಗಿದೆ. ಹಾಕಿದ ಬಂಡವಾಳವಾದರೂ ಸಿಗಲಿ ಎಂದು ಕಡಿಮೆ ಬೆಲೆಗೆ ಹಣ್ಣುಗಳನ್ನು ಮಾರುತ್ತಿದ್ದೇವೆ" ಎಂದು ತಿಳಿಸಿದರು.
ದರ ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಆರಂಭದಲ್ಲಿ ಮಾವಿನಹಣ್ಣಿಗೆ ಉತ್ತಮ ಬೆಲೆ ಇತ್ತು. ಆದರೆ, ಈಗ ಒಂದು ಕೆ.ಜಿ ಮಾವಿನ ಹಣ್ಣಿನ ದರ 100 ರೂಪಾಯಿಗಿಂತಲೂ ಕಡಿಮೆಯಿದೆ. ಹಣ್ಣು ಮಾಡಿ ಹುಬ್ಬಳ್ಳಿ, ಶಿರಸಿ, ಬೆಂಗಳೂರು, ಕೋಲಾರ, ಮುಂಬೈ ಮುಂತಾದ ಮಾರುಕಟ್ಟೆಗಳಿಗೆ ಕೊಂಡೊಯ್ದು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುತ್ತದೆ. ಅಲ್ಲಿ ಕೊಂಡೊಯ್ದ ಮಾವಿಗೆ ಕಡಿಮೆ ದರ ಕೇಳಲಾಗುತ್ತಿದೆ. ಹೀಗಾಗಿ ಹಣ್ಣು ಕೆಟ್ಟು ಹೋಗುವ ಭಯಕ್ಕೆ ದಲ್ಲಾಳಿಗಳು ಕೇಳಿದ ದರಕ್ಕೆ ಕೊಟ್ಟು ಮರಳಬೇಕಾದ ಸ್ಥಿತಿ ಎದುರಾಗಿದೆ.
ಕೋಲಾರ, ಮಹಾರಾಷ್ಟ್ರದ ರತ್ನಗಿರಿ ಮುಂತಾದ ಕಡೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವು ಏಕಕಾಲಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದೇ ಮಾವಿನ ಹಣ್ಣಿನ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ನಿರಂತರ ಮಳೆಯಿಂದ ಸಾಕಷ್ಟು ಪ್ರಮಾಣದ ಮಾವಿನ ಬೆಳೆ ಹಾನಿಗೊಳಗಾಗುತ್ತಿರುವುದು ಸಹ ಒಂದು ಪ್ರಮುಖ ಕಾರಣವಾಗಿದೆ.
ವರ್ತಕರಿಗೆ ಲಾಭ, ಗ್ರಾಹಕರಿಗೆ ದುಬಾರಿ
ಸಗಟು ಧಾರಣೆ ಕುಸಿದಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಇಳಿಕೆ ಕಂಡಿಲ್ಲ. ರಸಪುರಿ, ಮಲಗೋವಾ, ಬಾದಾಮಿ, ಮಲ್ಲಿಕಾ ಸೇರಿ ಪ್ರಮುಖ ತಳಿಯ ಹಣ್ಣುಗಳೆಲ್ಲವೂ ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿಯಾಗಿಯೇ ಇವೆ. ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕೆ.ಜಿ. ಕೇಸರಿ 160 ರೂ., ದಶೇರಿ 180 ರೂ. ಹಾಗೂ ಇಮಾಮ್ ಪಸಂದ್ 250 ರೂ. ದರದಲ್ಲಿ ಮಾರಾಟವಾಗುತ್ತಿದೆ. ಈ ಪರಿಸ್ಥಿತಿಯು ರೈತರು ಮತ್ತು ಗ್ರಾಹಕರ ನಡುವೆ ದಲ್ಲಾಳಿಗಳು ಮತ್ತು ವರ್ತಕರು ಹೆಚ್ಚು ಲಾಭ ಗಳಿಸುತ್ತಿದ್ದಾರೆ.