Heat Wave | ಬಿಸಿಲ ಬೇಗೆಗೆ ತತ್ತರಿಸಿದ ಸಿಲಿಕಾನ್ ಸಿಟಿ: ಸುಡುಬಿಸಿಲಿಗೆ ಹೈರಾಣಾದ ಜನತೆ
ಬೆಂಗಳೂರಿನಲ್ಲಿ ಮಾರ್ಚ್ ಕೊನೆಯ ದಿನಗಳಲ್ಲಿ ಗರಿಷ್ಠ ತಾಪಮಾನ, ಅಂದರೆ 39 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.;
ಬೆಂಗಳೂರಿನಲ್ಲಿ ಬಿಸಿಲ ಧಗೆಗೆ ಜನರು ಹೈರಾಣರಾಗಿದ್ದಾರೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿಸಿಲ ಬೇಗೆ ಏರುತ್ತಿದ್ದು, ಜನ ಹೈರಾಣಾಗಿದ್ದಾರೆ.
ಸೋಮವಾರ ಕಲಬುರಗಿಯ ಐನಾಪುರದಲ್ಲಿ 42.8 ಡಿಗ್ರಿ ಸೆಲ್ಸಿಯಸ್ ದಾಖಲೆ ಉಷ್ಣಾಂಶ ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 33 ಡಿಗ್ರಿಯಷ್ಟು ತಾಪಮಾನ ದಾಖಲಾಗಿತ್ತು. ಈ ಬಾರಿ ಈಗಾಗಲೇ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ.
ಮುಂದಿನ 2 ದಿನಗಳಲ್ಲಿ ಸಿಲಿಕಾನ್ ಸಿಟಿಯ ಗರಿಷ್ಠ ತಾಪಮಾನ 37 ಡಿಗ್ರಿಗೆ ತಲುಪಲಿದೆ. 15 ದಿನಗಳ ಬಳಿಕ ಮತ್ತಷ್ಟು ಬಿಸಿಲು ಸುಡಲಿದೆ. ಏಕೆಂದರೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಾರ್ಚ್ ಕೊನೆಯ ದಿನಗಳಲ್ಲಿ ಗರಿಷ್ಠ ತಾಪಮಾನ, ಅಂದರೆ 39 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅತೀ ಹೆಚ್ಚು ತಾಪಮಾನದಿಂದಾಗಿ ಮಕ್ಕಳು ಹಾಗೂ ವೃದ್ಧರಿಗೆ ಹೆಚ್ಚು ಆರೋಗ್ಯದ ಸಮಸ್ಯೆ ಕಾಡಲಿದೆ. ಈ ಹಿನ್ನೆಲೆ ಜನರು ಹೆಚ್ಚು ನೀರು ಕುಡಿಯಬೇಕು. ಹಣ್ಣುಗಳನ್ನು ಸೇವಿಸಬೇಕು. ಜನರು ಬಿಸಿಲಿಗೆ ಹೆಚ್ಚು ಮೈಒಡ್ಡಬಾರದು ಹಾಗೂ ಮೈತುಂಬ ಬಟ್ಟೆ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಈ ನಡುವೆ ಆರೋಗ್ಯ ಸಚಿವರು ಕೂಡ ಜನರಿಗೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದು, ತಾಪಮಾನ ಏರಿಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ದಿಢೀರ್ ತಾಪಮಾನ ಏರಿಕೆಯಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜನ ಬೆಳಿಗ್ಗೆ 11 ಗಂಟೆಯಿಂದ ಮತ್ತು ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ ಸಾಧ್ಯವಾದಷ್ಟು ಮನೆಯೊಳಗೇ ಇರುವುದು ಕ್ಷೇಮ. ಅಗತ್ಯಬಿದ್ದಲ್ಲಿ ಸರ್ಕಾರಿ ಕಚೇರಿಗಳ ಕರ್ತವ್ಯದ ಅವಧಿಯನ್ನು ಕೂಡ ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.