ರಾಹುಲ್‌ ಗಾಂಧಿ ಭೇಟಿಗೆ ಅವಕಾಶ ಸಿಗದೆ ಮುಜುಗರ ಅನುಭವಿಸಿದ ಸಿದ್ದರಾಮಯ್ಯ, ಡಿಕೆಶಿ

ರಾಹುಲ್‌ ಗಾಂಧಿಯವರು ದೆಹಲಿಯಲ್ಲಿದ್ದ ವೇಳೆ , ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಭೇಟಿ ಮಾಡದೆ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್‌ ಪಕ್ಷದ ತುಮುಲಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.;

Update: 2025-07-11 05:16 GMT
ಸಾಂದರ್ಭಿಕ ಚಿತ್ರ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಒಳ ರಾಜಕೀಯ ದೆಹಲಿ ಅಂಗಳದಲ್ಲಿ ಹೊರಳಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಕಾಂಗ್ರೆಸ್‌ ಶಾಸಕರ ದೂರುಗಳ ಸರಮಾಲೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರಾಹುಲ್‌ ಗಾಂಧಿ ಬೇಟಿಗೆ ಕಾದು,  ಭೇಟಿಗೆ ಅವಕಾಶ ಸಿಗದೆ  ಮುಜುಗರ ಅನುಭವಿಸುವ ಪರಿಸ್ಥಿತಿ ತಲೆದೋರಿದೆ.

ದೆಹಲಿಯಲ್ಲಿ ಗುರುವಾರ, "ನಾನೇ ಐದೂ ವರ್ಷ ಸಿಎಂ" ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿ, ಸಿಎಂ ಆಗಲು ಪ್ರಯತ್ನಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕರ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ರಾಹುಲ್‌ ಗಾಂಧಿ ಉಭಯ ನಾಯಕರನ್ನು ಭೇಟಿಯಾಗದೇ ಇರಲು ನಿರ್ಧರಿಸಿರಬಹುದು. ಇತರ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಅವರಿಗೆ ಭೇಟಿಗೆ ಸಮಯಾವಕಾಶವೂ ಇರಲಿಲ್ಲ ಎನ್ನಲಾಗಿದೆ.

ಆದರೆ, ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಲು ಅವಕಾಶ ನೀಡಲಾಗಿದೆ. ಅ ಮೂಲಕ ಎಲ್ಲ ಗೊಂದಲಗಳ ಪರಿಹಾರಕ್ಕೆ ದೆಹಲಿಗೆ ಬರಬೇಡಿ, ಪಕ್ಷದ ಒಳಗೇ ತೀರ್ಮಾನ ಮಾಡಿ ಎನ್ನುವ ಪರೋಕ್ಷ ಸಂದೇಶವನ್ನೂ ರಾಹುಲ್‌ ಗಾಂಧಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಕಾಂಗ್ರೆಸ್‌ ಹೈಕಮಾಂಡ್‌ (ರಾಹುಲ್‌ ಗಾಂಧಿ) ಅವರನ್ನು ಭೇಟಿಯಾಗಲು ಕಾದು, ನಿರಾಶರಾಗಿದ್ದಾರೆ. ಬಿಹಾರ ಮತ್ತಿತರ ಕಡೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ರಾಹುಲ್‌ ಗಾಂಧಿಯವರು ದೆಹಲಿಗೆ ಬಂದಿದ್ದರೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಭೇಟಿ ಮಾಡಿದೆ ಪರೋಕ್ಷವಾಗಿ ತಮ್ಮ ರಾಜ್ಯ ಕಾಂಗ್ರೆಸ್‌ ಪಕ್ಷದ ತುಮುಲಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮೂರುದಿನಗಳ ದೆಹಲಿ ಭೇಟಿ ಸಂದರ್ಭದಲ್ಲಿ ಹೈಕಮಾಂಡ್‌ ಜತೆ ನೇರ ಸಂಪರ್ಕ ಸಾಧ್ಯವಾಗದೆ ಡಿ.ಕೆ. ಶಿವಕುಮಾರ್‌ ಅವರು, ಗುರುವಾರ ರಾತ್ರಿಯೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಒಳಬೇಗುದಿ ಬಗೆ ಮಾತನಾಡಿದ್ದಾರೆ. ಬಳಿಕ ಶುಕ್ರವಾರ ಅಪರಾಹ್ನ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದ ಕರ್ನಾಟಕ ಭವನದಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್‌ ಭೇಟಿಗಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ರಾಹುಲ್‌ ಗಾಂಧಿ ಅವರು ಸಿಎಂ, ಡಿಸಿಎಂ ಭೇಟಿಗೆ ಅವಕಾಶ ನೀಡದೇ ಇದ್ದ ಕಾರಣ, ಕೊನೆಗೂ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಖರ್ಗೆ ಮತ್ತು ಸಿದ್ದರಾಮಯ್ಯ ಪ್ರತ್ಯೇಕ ಭೇಟಿ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ. ಸುರ್ಜೇವಾಲ ಅವರು ಶಾಸಕರ ಭೇಟಿ ಬಳಿಕ ಕಲೆಹಾಕಿದ ಮಾಹಿತಿಗಳ ಬಗ್ಗೆ ಖರ್ಗೆಯವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ ಹಾಗೂ ಗೊಂದಲ ನಿವಾರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಸಕರು ಬಹಿರಂಗ ಹೇಳಿಕೆ ನೀಡಿದರೆ ಆಡಳಿತದ ಮೇಲೆ ಪರಿಣಾಮ ಬೀರಲಿದೆ ಎಂದು ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಸಿದ್ದಾರೆ. ಖರ್ಗೆಯವರೂ ಶಾಸಕರ ಹೇಳಿಕೆಗಳಿಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಗುರುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಗೊಂದಲ ಬೇಡ ಎಂದು ಭೇಟಿ ನೀಡದ ರಾಹುಲ್ ಗಾಂಧಿ?‌

ದೆಹಲಿಯಲ್ಲೆ ರಾಹುಲ್ ಗಾಂಧಿ ಇದ್ದರೂ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಸಿಎಂ ಬದಲಾವಣೆ ಹೇಳಿಕೆಗಳು ಜೋರಾದ ಹಿನ್ನಲೆಯಲ್ಲಿ ಈ ಸಮಯದಲ್ಲಿ ಯಾರನ್ನೇ ಭೇಟಿಯಾದರೂ ಗೊಂದಲ ಉಂಟಾಗಲಿದೆ ಎಂದು ಭೇಟಿಗೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಗುರುವಾರ ರಾತ್ರಿವರೆಗೂ ಸಿದ್ದರಾಮಯ್ಯ ಹಾಗು ಡಿಕೆಶಿ ರಾಹುಲ್ ಗಾಂಧಿ ಪ್ರತ್ಯೇಕ ಭೇಟಿಗೆ ಕಾದಿದ್ದರು. ಆದರೆ ರಾಹುಲ್ ಗಾಂಧಿ ಕಚೇರಿಯಿಂದ ಭೇಟಿ ಸಮಯ ನಿಗದಿ ಸಂಬಂಧ ಕರೆ ಬಾರದ ಹಿನ್ನಲೆಯಲ್ಲಿ ಉಭಯ ನಾಯಕರಿಗೆ ನಿರಾಸೆ ಉಂಟಾಗಿದೆ.

ಸುರ್ಜೇವಾಲ ಜತೆ ಉಭಯ ನಾಯಕರ ಸಭೆ

ಗುರುವಾರ ರಾತ್ರಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ ಅವರು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆಶಿ ಜತೆ ಸಮಾಲೋಚನೆ ನಡೆಸಿದ್ದಾರೆ.

ಸುರ್ಜೆವಾಲಾ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಸಭೆ ನಡೆಸಿದ್ದಾರೆ. ವಿಧಾನಪರಿಷತ್ ನಾಮನಿರ್ದೇಶನ ಸದಸ್ಯರ ನೇಮಕ ಹಾಗು ನಿಗಮಮಂಡಳಿಗಳ ಸದಸ್ಯರ ನೇಮಕದ ಬಗ್ಗೆ ಚರ್ಚೆ ನಡೆದಿದೆ. ನಾಲ್ಕು ವಿಧಾನಪರಿಷತ್ ಸದಸ್ಯರ ನೇಮಕದ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಇಂದು ಅಥವಾ ನಾಳೆ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಇದೇ ವೇಳೆ ಶಾಸಕರ ಜತೆ ನಡೆದ ಒನ್ ಟು ಒನ್ ಸಭೆಯ ಬಗ್ಗೆಯೂ ಸಮಾಲೋಚನೆ ಆಗಿದೆ. ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸುರ್ಜೆವಾಲಾ ಅವರು ಸಿಎಂ ಹಾಗು ಡಿಸಿಎಂ ಗಮನಕ್ಕೆ ತಂದಿದ್ದಾರೆ. ಶಾಸಕರ ಅಸಮಾಧಾನ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆಯೂ ಸೂಚನೆ ನೀಡಿದ್ದಾರೆ.

ಪ್ರತ್ಯೇಕವಾಗಿ ಸುರ್ಜೆವಾಲಾ ಮನಗೆ ಆಗಮಿಸಿದ ಸಿಎಂ ಹಾಗು ಡಿಸಿಎಂ

ಸಿದ್ದರಾಮಯ್ಯ ಹಾಗು ಡಿಕೆಶಿ ಕರ್ನಾಟಕ ಭವನದಿಂದ ಸುರ್ಜೆವಾಲಾ ಮನೆಗೆ ಪ್ರತ್ಯೇಕ ಕಾರಿನಲ್ಲಿ ಆಗಮಿಸಿದರು. ನಾನೇ 5 ವರ್ಷ ಸಿಎಂ ಅಂತಾ ಸಿದ್ದರಾಮಯ್ಯ ಹೇಳಿಕೆ ಕೊಟ್ಟ ಬಳಿಕ ಸಂಜೆ ಸುರ್ಜೆವಾಲಾ ಭೇಟಿಯಾಗಿದ್ದಾರೆ. ಕರ್ನಾಟಕ ಭವನದಲ್ಲಿ ಸಿಎಂ ಹಾಗು ಡಿಸಿಎಂ ವಾಸ್ತವ್ಯ ಹೂಡಿದ್ದರು. ಆದರೆ ಸುರ್ಜೆವಾಲಾ ಭೇಟಿಗೆ ಇಬ್ಬರೂ ಪ್ರತ್ಯೇಕ ಕಾರಿನಲ್ಲಿ ಆಗಮಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Tags:    

Similar News