
ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ
ಸೋನಿಯಾ, ರಾಹುಲ್ ಭೇಟಿಗೆ ದೆಹಲಿಯಲ್ಲಿ ಬೀಡುಬಿಟ್ಟ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್
"ಸದ್ಯಕ್ಕೆ ಸಚಿವ ಸಂಪುಟ ಬದಲಾವಣೆ ಕುರಿತು ಯಾವುದೇ ವಿಷಯ ಚರ್ಚಿಸುವುದಿಲ್ಲ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬಂದಿರುವುದು ಅಭಿವೃದ್ದಿ ವಿಚಾರಗಳನ್ನು ಚರ್ಚಿಸಲು," ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಸಂಬಂಧ ಊಹಾಪೋಹ, ಶಾಸಕರ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಪ್ರತ್ಯೇಕ ಮಾತುಕತೆ ... ಹೀಗೆ ನಡೆಯುತ್ತಿರುವ ರಾಜಕೀಯ ಘಟನಾವಳಿಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.
ರಾಹುಲ್ ಗಾಂಧಿ ಅವರ ಜತೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚೆಇಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಪ್ರಯತ್ನಿಸುತ್ತಿದ್ದಾರೆ. ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರದರೂ, ಇನ್ನೂ ನಿಗದಿಯಾಗಿಲ್ಲ.
"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಚುನಾವಣಾ ಪ್ರಚಾರಕ್ಕೆ ಪಾಟ್ನಾಗೆ ತೆರಳಿದ್ದು ದೆಹಲಿಗೆ ಇನ್ನೂ ವಾಪಸ್ ಬಂದಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನೂ ಭೇಟಿಯಾಗಿಲ್ಲ. ಕೇವಲ ಪಕ್ಷ ಸಂಘಟನೆ ವಿಚಾರ ಮಾತನಾಡಲಿದ್ದೇವೆ," ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸದ್ಯಕ್ಕೆ ಸಚಿವ ಸಂಪುಟ ಬದಲಾವಣೆ ಕುರಿತು ಯಾವುದೇ ವಿಷಯ ಚರ್ಚಿಸುವುದಿಲ್ಲ. ನಾನು ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬಂದಿರುವುದು ಅಭಿವೃದ್ದಿ ವಿಚಾರಗಳನ್ನು ಚರ್ಚಿಸಲು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸಂಘಟನಾ ವರ್ಷ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಜಿಲ್ಲಾ ಅಧ್ಯಕ್ಷರನ್ನು ಕರೆಸಿ ಸಭೆ ನಡೆಸಲಾಗಿದೆ. ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕುಮಾರಸ್ವಾಮಿ ವಿರುದ್ಧ ಡಿಕೆಶಿ ಟೀಕೆ
"ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸರ್ಕಾರದಿಂದ ಮೊದಲು ದುಡ್ಡು ಕೊಡಿಸಲಿ, ಬರೀ ಮಾತು ಬೇಡ, ಅವರ ಸಲಹೆಯನ್ನೂ ನಾನು ಸ್ವೀಕಾರ ಮಾಡುತ್ತೇನೆ. ಬೆಂಗಳೂರು ಟನಲ್ ರಸ್ತೆಗೆ ಮೂರು ದಿನದಲ್ಲಿ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಟೋಲ್ ಇಲ್ಲದೇ ರಸ್ತೆ ಮಾಡಲು ಸಾಧ್ಯವಿಲ್ಲ. ವಿಮಾನ ನಿಲ್ದಾಣ, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಟೋಲ್ ಇದೆ." ಎಂದು ಸುರಂಗ ಮಾರ್ಗ ನಿರ್ಮಾಣ ಸಂಬಂಧ ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಕೆಲವು ರಸ್ತೆಗಳನ್ನು ಅಗಲೀಕರಣ ಮಾಡಬೇಕಿದೆ ಅದಕ್ಕಾಗಿ ರಕ್ಷಣಾ ಇಲಾಖೆ ಭೂಮಿಯ ಅವಶ್ಯಕತೆಯಿದೆ. ದಸರಾ ವೇಳೆ ಚುಟುಕು ಏರ್ ಶೋ ನಡೆಸಲು ರಕ್ಷಣಾ ಸಚಿವರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದೇವೆ ಎಂದು ತಿಳಿಸಿದರು.
ಶೀಘ್ರದಲ್ಲೇ ವಿಧಾನಪರಿಷತ್‌ಗೆ ನಾಮ ನಿರ್ದೇಶನ
ವಿಧಾನಸಭಾ ಅಧಿವೇಶನ ಆರಂಭಕ್ಕೂ ಮುನ್ನವೇ ವಿಧಾನಪರಿಷತ್ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲಾಗುವುದು. ಮಾಧ್ಯಮದವರಿಗೂ ಒಂದು ಸ್ಥಾನ ನೀಡಲಾಗುವುದು ಎಂದರು. ಈ ಮೊದಲು ನಾಲ್ಕು ಹೆಸರುಗಳಲ್ಲಿ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಹೆಸರನ್ನೂ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು.
ದ್ವಿ ಭಾಷೆಗೆ ಪ್ರಾಮುಖ್ಯತೆ
ಪಾಟ್ನಾದಲ್ಲಿ ರಾಹುಲ್ ಗಾಂಧಿಯ ಪ್ರತಿಭಟನೆಯನ್ನು ತಡೆದಿದ್ದು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವುದು ಸರ್ಕಾರದ ಕೆಲಸವಾಗಿದೆ. ರಾಹುಲ್ ಗಾಂಧಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋಗಿದ್ದಾರೆ ಎಂದರು. ದ್ವಿ ಭಾಷಾ ಆಯ್ಕೆ ಆಯಾ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರ. ನಾವು ಕನ್ನಡ ಮತ್ತು ಇಂಗ್ಲಿಷ್‌ಗೆ ಪ್ರಾಮುಖ್ಯತೆ ನೀಡುತ್ತೇವೆ ಎಂದು ಮಾಹಿತಿ ನೀಡಿದರು.