Shoot-Out in Hassan | ಹಾಸನದಲ್ಲಿ ಹಾಡುಹಗಲೇ ಶೂಟೌಟ್‌: ಇಬ್ಬರ ಸಾವು

ಹಾಸನದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ನಗರದ ಹೊಯ್ಸಳ‌ನಗರ ಬಡಾವಣೆಯಲ್ಲಿ ಗುರುವಾರ (ಜೂ.20) ಮಧ್ಯಾಹ್ನ ನಡೆದ ಘಟನೆಯಲ್ಲಿಇಬ್ಬರು ಮೃತಪಟ್ಟಿದ್ದಾರೆ.

Update: 2024-06-20 10:10 GMT
ಹಾಸನದಲ್ಲಿ ಹಾಡುಹಗಲೇ ಶೂಟೌಟ್‌ ಪ್ರಕರಣ ನಡೆದಿದೆ.
Click the Play button to listen to article

ಹಾಸನದಲ್ಲಿ ಗುರುವಾರ ಮಧ್ಯಾಹ್ನ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಹಾಸನ ನಗರದ ಹೊಯ್ಸಳ‌ನಗರ ಬಡಾವಣೆಯಲ್ಲಿ ಜೂ.20ರ ಮಧ್ಯಾಹ್ನ ಘಟನೆ ನಡೆದಿದ್ದು, ಆಸ್ತಿ ವಿಚಾರವಾಗಿ ಇಬ್ಬರ ನಡುವಿನ ವಾಗ್ವಾದದಲ್ಲಿ ಒಬ್ಬನಿಗೆ ಗುಂಡಿಕ್ಕಿ ಸಾಯಿಸಿ, ಮತ್ತೊಬ್ಬ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರಿನೊಳಗೆ ಇರುವಾಗಲೇ ಗುಂಡು ಹಾರಿಸಿದ್ದು, ಕಾರಿನೊಳಗೆ ಒಬ್ಬನ ಮೃತದೇಹ ಇದ್ದರೆ ಮತ್ತೊಬ್ಬ ಶವ ರಸ್ತೆ ಬದಿಯಲ್ಲಿ ಬಿದ್ದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಸುಜಿತಾ ಮೊಹಮ್ಮದ್ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ತಜ್ಞರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೆಆರ್‌ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೂಟೌಟ್‌ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಹಾಸನ ಎಸ್‌ಪಿ ಸುಜಿತಾ, ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಹಾಗಾಗಿ ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ಸಂಭವಿಸಿದೆ. ಘಟನಾ ಸ್ಥಳದಲ್ಲಿದ್ದ ಕಾರು ಮೈಸೂರು ಮೂಲದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಸೈಟ್​ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಶಂಕೆ ಇದೆ. ಆದರೆ ನಿಜವಾದ ಕಾರಣ ತನಿಖೆಯ ನಂತರವೇ ತಿಳಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

Tags:    

Similar News