ಪ್ರತ್ಯೇಕ ಪ್ರಕರಣ: ಹೃದಯಾಘಾತಕ್ಕೆ ಯುವಕ, ಯುವತಿ ಬಲಿ; ವೈದ್ಯರು ಏನು ಹೇಳುತ್ತಾರೆ?
ಇಂದಿನ ಆಹಾರಪದ್ದತಿ, ಒತ್ತಡದ ಜೀವನ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವುದು. ಧೂಮಪಾನ, ಮದ್ಯಪಾನ ಹಾಗೂ ತಂಬಾಕು ಸೇವಿಸುವಂತಹ ದುರಭ್ಯಾಸಗಳು ಹೃದಯಾಘಾತಕ್ಕೆ ಕಾರಣವಾಗುತ್ತಿದೆ.;
ಸಾಂದರ್ಭಿಕ ಚಿತ್ರ
ಕಾಮಿಡಿ ಕಿಲಾಡಿ ನಟ ರಾಕೇಶ್ ಕುಮಾರ್ ಹೃದಯಾಘಾತದಿಂದ ನಿಧನರಾದ ಘಟನೆ ಮಾಸುವ ಮುನ್ನವೇ ಪ್ರತ್ಯೇಕ ಘಟನೆಗಳಲ್ಲಿ 19 ವರ್ಷದ ಯುವಕ ಹಾಗೂ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಸಂಧ್ಯಾ (19) ಸ್ನಾನಗೃಹದಲ್ಲಿ ಕುಸಿದು ಬಿದ್ದಿದ್ದರು. ಪೋಷಕರು ತಕ್ಷಣ ಪುತ್ರಿಯನ್ನುಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮತ್ತೊಂದು ಘಟನೆಯಲ್ಲಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ ಬಸವೇಶ್ವರ ನಗರದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳಿಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಯಾಕೆ ಈ ಹೃದಯಾಘಾತ?
ಹೃದಯಾಘಾತ ಸಂಭವಿಸುವುದು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಎನ್ನವ ಮಾತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೇರಿದಂತೆ ಯುವಕರಲ್ಲೇ ಹೆಚ್ಚಾಗಿ ಹೃದಯಾಘಾತಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ʼದ ಪೆಢರಲ್ ಕರ್ನಾಟಕʼ ಹೃದ್ರೋಗ ತಜ್ಞ ಡಾ. ಮಹಾಂತೇಶ್ ಚರಂತಿಮಠ್ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೃದಯಾಘಾತದ ಕುರಿತು ವಿವರವಾಗಿ ಮಾತನಾಡಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಹೃದಯಾಘಾತದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಇದು ಆನುವಂಶಿಕ ಕಾರಣಗಳಿಂದಲೂ ಸಂಭವಿಸಬಹುದು. ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಮಸ್ಯೆಗಳಿದ್ದರೆ, ಅಂತಹ ವ್ಯಕ್ತಿಗಳಲ್ಲಿ ಹೃದಯಾಘಾತದ ಅಪಾಯವು ಹೆಚ್ಚಿರುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿ. ಫಾಸ್ಟ್ ಫುಡ್, ಕರಿದ ಪದಾರ್ಥಗಳು, ಸಂಸ್ಕರಿಸಿದ ಆಹಾರಗಳು ಮತ್ತು ತಂಪು ಪಾನೀಯಗಳು ನಮ್ಮ ದೇಹ ಮತ್ತು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತವೆ. ಇಂತಹ ಆಹಾರಗಳಲ್ಲಿ ಅತಿಯಾದ ಕೊಬ್ಬಿನಂಶವಿರುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ಅವು ಬ್ಲಾಕ್ ಆಗಿ ಹೃದಯಾಘಾತ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.
ಇಂದಿನ ಆಹಾರಪದ್ದತಿ, ಒತ್ತಡದ ಜೀವನ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವುದು. ಧೂಮಪಾನ, ಮದ್ಯಪಾನ ಹಾಗೂ ತಂಬಾಕು ಸೇವಿಸುವಂತಹ ದುರಭ್ಯಾಸಗಳು ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಇಂತಹ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆಮಟ್ಟ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದರು.
ಹೃದಯಾಘಾತದ ಮುನ್ಸೂಚನೆಗಳು
ಸಾಮಾನ್ಯವಾಗಿ ಶೇ. 5ರಿಂದ 10 ಜನರಿಗೆ ಹೃದಯಾಘಾತದ ಬಗ್ಗೆ ಯಾವುದೇ ಮುನ್ಸೂಚನೆ ಇರುವುದಿಲ್ಲ. ಆದರೆ ಕೆಲವರಿಗೆ ಎದೆನೋವು, ಎದೆಭಾರ, ಉಸಿರಾಟದ ತೊಂದರೆ, ಎದೆ ಹಿಂಡಿದಂತಾಗುವುದು ಅಥವಾ ಕೈ ಅಥವಾ ಬೆರಳುಗಳಲ್ಲಿ ಮುಳ್ಳು ಚುಚ್ಚಿದಂತಹ ಅನುಭವ ಉಂಟಾಗಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಎದೆನೋವು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ವ್ಯಾಯಮ ಅತ್ಯಗತ್ಯ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ನಡಿಗೆ, ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಬಹಳ ಮುಖ್ಯ. ಇದು ಮಧುಮೇಹ, ರಕ್ತದೊತ್ತಡ ಮತ್ತು ಬೊಜ್ಜುತನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ನಮ್ಮ ಆಹಾರದಲ್ಲಿ ಹೆಚ್ಚಿನ ನಾರಿನಂಶ, ಬೇಳೆಕಾಳುಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು. ಆದಷ್ಟ ಕೆಂಪು ಮಾಂಸ (ರೆಡ್ ಮೀಟ್) ಸೇವನೆಯನ್ನು ಕಡಿಮೆ ಮಾಡಬೇಕು. ಧೂಮಪಾನ ಮತ್ತು ಅತಿಯಾದ ಮದ್ಯಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಹೇಳಿದ್ದಾರೆ.