Covid-19| ಶಾಲೆ ಪುನರಾರಂಭ ; ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಕೋವಿಡ್ ಗುಣಲಕ್ಷಣ ಕಂಡು ಬಂದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಬೇಕು. ಸೋಂಕಿನ ಲಕ್ಷಣ ಕಡಿಮೆಯಾದ ನಂತರವೇ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಶಾಲೆಗಳು ಪುನರಾರಂಭವಾಗಿವೆ. ಆದರೆ, ಇದೇ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿವೆ. ಕೋವಿಡ್ ರೂಪಾಂತರ ತಳಿಯ ಸೋಂಕು ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಾಜ್ಯ ಸರ್ಕಾರ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು, ಸೋಂಕಿತ ಪತ್ತೆ, ನಿಯಂತ್ರಣ ಕ್ರಮಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮಾರ್ಗಸೂಚಿ ಏನು?
ಕೋವಿಡ್ ಗುಣಲಕ್ಷಣ ಕಂಡು ಬಂದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಬೇಕು.
ಮಕ್ಕಳಲ್ಲಿ ಗುಣಲಕ್ಷಣಗಳು ಕಡಿಮೆಯಾದ ನಂತರವೇ ಶಾಲೆಗೆ ಕಳಿಸಬೇಕು.
ಶಾಲೆಗಳಲ್ಲಿರುವ ಮಕ್ಕಳಿಗೆ ಜ್ವರ, ಕೆಮ್ಮ, ನೆಗಡಿ ಸೇರಿದಂತೆ ಇತರೆ ಲಕ್ಷಣಗಳಿದ್ದರೆ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳಿಸಬೇಕು.
ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯಲ್ಲಿ ಜ್ವರ, ಕೆಮ್ಮು, ನೆಗಡಿ ಗುಣಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಪ್ರತಿ ಶಾಲೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಮೂವರು ಸಾವು
ರಾಜ್ಯದಲ್ಲಿ ಬೆಂಗಳೂರು ಸೇರಿ ಹಲವೆಡೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತವೆ. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 350ಗಡಿ ದಾಟಿದ್ದು, ಬೆಂಗಳೂರು ಒಂದರಲ್ಲೇ 150 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಜೊತೆಗೆ ಮೂವರು ಮೃತಪಟ್ಟಿದ್ದಾರೆ.
ಮಳೆಗಾಲ ಆರಂಭವಾಗಿರುವುದರಿಂದ ಕೋವಿಡ್ ಪ್ರಕರಣಗಳ ಜತೆಗೆ ಡೆಂಗ್ಯೂ ನಿಯಂತ್ರಣ ಮಾಡುವುದು ಸವಾಲಾಗಿ ಪರಿಣಮಿಸಿದೆ.
ದೇಶದಲ್ಲಿ ಏಳು ಮಂದಿ ಸಾವು
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,000 ಗಡಿ ದಾಟಿದೆ. ಒಟ್ಟು ಏಳು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಶುಕ್ರವಾರದ (ಮೇ 30) ಅಂತ್ಯದ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 2,710 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ಶೇ. 69.45 ರಷ್ಟು ಗಮನಾರ್ಹ ಏರಿಕೆ ಕಂಡುಬಂದಿದ್ದು, ಮೇ 26 ರ ಅಂತ್ಯಕ್ಕೆ 1,010 ಸಕ್ರಿಯ ಪ್ರಕರಣಗಳು ವರದಿಯಾಗಿದ್ದವು.