Dhootha Sameer MD | ಸೌಜನ್ಯಾ ಕೊಲೆ ಪ್ರಕರಣ: ಯೂಟ್ಯೂಬರ್‌ಗೆ ನೋಟಿಸ್, ಸರ್ಕಾರದ ನಡೆ ವಿರುದ್ಧ ಜನಾಕ್ರೋಶ
ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ರೇಪ್ ಅಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂಬ ಯುವಕ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ, ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ.;
ಎಂ.ಡಿ ಸಮೀರ್
ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಡಿ ಸಮೀರ್ ಎಂಬ ಯುವಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೇಸ್ತುಬಿದ್ದಿರುವ ರಾಜ್ಯ ಸರ್ಕಾರ, ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ದನಿ ಎತ್ತಿದ ಯುವಕನ ವಿರುದ್ಧ ಪೊಲೀಸ್ ಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಧೂತ ಎಂಬ ಹೆಸರಿನ ಯೂ-ಟ್ಯೂಬ್ ಮೂಲಕ ಯುವಕನ ವಿಡಿಯೋ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಡ ಕುಟುಂಬದ ಯುವತಿ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಶಂಕಿತ ಆರೋಪಿ ನಿರ್ದೋಷಿ ಎಂದು ನ್ಯಾಯಾಲಯ ಬಿಡುಗಡೆ ಮಾಡಿದೆ. 13 ವರ್ಷವಾದರೂ ಪ್ರಕರಣದ ಅಸಲೀ ಆರೋಪಿಗಳನ್ನು ಪತ್ತೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ವಿಫಲವಾಗಿದೆ. ಅಲ್ಲದೆ, ಸಂತೋಷ್ ರಾವ್ ಎಂಬಾತನನ್ನು ಆರೋಪಿ ಎಂದು ಬಿಂಬಿಸಿ ತನಿಖೆಯ ಹಾದಿ ತಪ್ಪಿಸಿದ ತನಿಖಾಧಿಕಾರಿ ವಿರುದ್ಧವೂ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನೆಲ್ಲಾ ನ್ಯಾಯಯುತವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರಶ್ನಿಸಿದ ಯೂಟ್ಯೂಬರ್ ಮೇಲೆ ಸರ್ಕಾರ ಗಧಾಪ್ರಹಾರಕ್ಕೆ ಮುಂದಾಗಿದೆ. ಅಂದರೆ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಸಲೀ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದಲ್ಲವೇ? ಎಂದು ನೆಟ್ಟಿಗರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದ ಪ್ರಭಾವಿ ಕುಟುಂಬದೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇರುವ ಫೋಟೋಗಳ ಸಹಿತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನತದೃಷ್ಟ ಯುವತಿ ಸೌಜನ್ಯ ಸಾವಿಗೆ ನ್ಯಾಯ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸಮೀರ್ ಬಂಧನಕ್ಕೆ ಮುಂದಾದ ಪೊಲೀಸ್
ದಕ್ಷಿಣಕನ್ನಡ ಸೌಜನ್ಯ ಪ್ರಕರಣದ ಕುರಿತು ಸಮೀರ್ ಅವರು ತಮ್ಮ ʼಧೂತʼ ಯೂಟ್ಯೂಬ್‌ನಲ್ಲಿ ʼಊರಿಗೆ ದೊಡ್ಡವರೇ ಕೊಲೆ ಮಾಡಿದರಾ?ʼ ಎಂಬ ಹೆಸರಿನಲ್ಲಿ ಮಾಡಿರುವ ವಿಡಿಯೋವನ್ನು ಕೋಟ್ಯಂತರ ಜನ ವೀಕ್ಷಿಸಿದ್ದು, ಪ್ರಕರಣದ ಕುರಿತು ರಾಜ್ಯದ ಉದ್ದಗಲಕ್ಕೆ ಸಂಚಲನ ಮೂಡಿಸಿದೆ.
ಸಹಜವಾಗಿಯೇ ಈ ಬೆಳವಣಿಗೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಧರ್ಮಸ್ಥಳದ ಪ್ರಭಾವಿಗಳ ವರ್ಚಸ್ಸಿಗೆ ಮಸಿ ಬಳಿದಿದೆ. ವಿಡಿಯೋ ಬಳಿಕ ಪ್ರಕರಣ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. ಅಲ್ಲದೆ ಸಮೀರ್ ಪರ ಮತ್ತು ವಿರುದ್ಧದ ಚರ್ಚೆ ಕೂಡ ಕಾವೇರಿದೆ. ಸಮೀರ್ ಅವರು ಹೇಳಿರುವ ಪ್ರಕರಣದ ಕುರಿತ ವಿವರಗಳೊಂದಿಗೆ ಆತನ ಧರ್ಮ ಮತ್ತು ಜಾತಿಯ ಹಿನ್ನೆಲೆಯನ್ನು ಹಿಡಿದುಕೊಂಡು ಕೆಲವರು ಬೆದರಿಕೆ ಹಾಕುವ ಪ್ರಯತ್ನವನ್ನೂ ನಡೆಸಿದ್ದಾರೆ. ಅಲ್ಲದೆ ಸಮೀರ್ ಅವರ ವಿಳಾಸ ಮತ್ತು ಸಂಪರ್ಕ ಮೊಬೈಲ್ ನಂಬರ್ ಲೀಕ್ ಮಾಡಿ ಅವರಿಗೆ ಬೆದರಿಕೆ ಹಾಕಲು ಪ್ರಚೋದನೆ ನೀಡಲಾಗುತ್ತಿದೆ ಎಂದೂ ಹೇಳಲಾಗಿದೆ.
ಈ ನಡುವೆ, ಬುಧವಾರ ರಾಜ್ಯ ಪೊಲೀಸರು ಸಮೀರ್ ಬಂಧನಕ್ಕೆ ಮುಂದಾದ ಘಟನೆಯೂ ನಡೆದಿದೆ. ಬಳ್ಳಾರಿಯ ಪೊಲೀಸರು ಸಮೀರ್ ವಿರುದ್ಧ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಬಂಧನಕ್ಕೆ ಮುಂದಾಗಿದ್ದರು. ಆದರೆ, ವಿಚಾರಣೆಗೆ ಸಹಕರಿಸುವುದಾಗಿ ಸಮೀರ್ ಕೋರಿದ ಹಿನ್ನೆಲೆಯಲ್ಲಿ ಬಂಧಿಸದೇ ನೋಟಿಸ್ ನೀಡಿ ಹೋಗಿದ್ದಾರೆ ಎಂದು ಸ್ವತಃ ಸಮೀರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
"ಈ ವಿಡಿಯೋಗೆ ಒಂದು ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಭಯ ಶುರುವಾಯ್ತು. ಕೆಲವರು ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸವನ್ನು ಸೋಶಿಯಲ್ ಮೀಡಿಯದಲ್ಲಿ ಲೀಕ್ ಮಾಡಲಾಯ್ತು. ನಂತರ ನನಗೆ ಹಲವು ಜೀವಬೆದರಿಕೆ ಕರೆಗಳ ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದ್ರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ನಂತರ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ನಂತರ ಅವರೇ ವಕೀಲರ ಸಹಾಯವನ್ನು ನೀಡಿದ್ದಾರೆ" ಎಂದು ಸಮೀರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸರ್ಕಾರ- ಪೊಲೀಸ್ ವಿರುದ್ಧ ಜನಾಕ್ರೋಶ
ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ ಸಮೀರ್ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಆತಂಕ ವ್ಯಕ್ತಪಡಿಸಿ ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗಕ್ಕೆ ನೊಟೀಸ್ ನೀಡಿದ್ದಾರೆ.
"ಸಾಮಾಜಿಕ ಜಾಲತಾಣ ವಿಭಾಗದ ನಿರ್ವಾಹಕರು, ಸಮೀರ್ ಹರಿಬಿಟ್ಟಿದ್ದ ವಿಡಿಯೊ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಅದರಿಂದ ಸಮಾಜದಲ್ಲಿ ಪರ-ವಿರೋದ ಅನಿಸಿಕೆಗಳು ಉಂಟಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಘಟಕದ ಅಧಿಕಾರಿಗಳು ಚುರುಕುಗೊಳ್ಳಬೇಕು" ಎಂದು ಡಿಜಿಪಿ ಅಲೋಕ್ ಮೋಹನ್ ಆದೇಶದಲ್ಲಿ ತಿಳಿಸಿದ್ದಾರೆ.
ಒಟ್ಟಾರೆ, ಸೌಜನ್ಯ ಪ್ರಕರಣದಲ್ಲಿ ನತದೃಷ್ಟ ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಆಸಕ್ತಿ ತೋರಬೇಕಿದ್ದ ಮತ್ತು ಆ ಮೂಲಕ ಸಂವಿಧಾನ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಯಬೇಕಿದ್ದ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ, ಪ್ರಕರಣದಲ್ಲಿ ನ್ಯಾಯದ ಪರ ದನಿ ಎತ್ತಿದವರ ಮೇಲೆಯೇ ಮುಗಿಬೀಳುವ ಪ್ರಯತ್ನ ನಡೆಸಿವೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದಿದೆ.
ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ಹಿನ್ನೆಲೆ
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ಕೋರಿ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳನ್ನು ಕಳೆದ ವರ್ಷ ಹೈಕೋರ್ಟ್ ರದ್ದುಗೊಳಿಸಿತ್ತು.
ಸೌಜನ್ಯ ತಂದೆ ಧರ್ಮಸ್ಥಳದ ಚಂದಪ್ಪ ಗೌಡ, ಪ್ರಕರಣದಲ್ಲಿ ಖುಲಾಸೆಗೊಂಡಿರುವ ಕಾರ್ಕಳ ತಾಲ್ಲೂಕಿನ ಕುಂದೂರಿನ ಸಂತೋಷ್ ರಾವ್ ಹಾಗೂ ಸಿಬಿಐ ಪರವಾಗಿ ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ ಎಂ ಖಾಜಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.
2012ರ ಅಕ್ಟೋಬರ್ 9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ 2023ರ ಜೂನ್ 16ರಂದು ಆದೇಶಿಸಿತ್ತು.