ಅತಿಥಿ ಉಪನ್ಯಾಸಕರಿಗೆ ₹5 ಲಕ್ಷ ಇಡುಗಂಟು: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ(2019 ರಿಂದ 2023) ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರೂ ಈ ಯೋಜನೆಗೆ ಒಳಪಡಲಿದ್ದಾರೆ.;

Update: 2025-05-30 11:33 GMT

ಸಾಂದರ್ಭಿಕ ಚಿತ್ರ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದವರು ಹಾಗೂ ಈಗಾಗಲೇ ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂಪಾಯಿ ಇಡುಗಂಟು (ಒನ್-ಟೈಮ್ ಸೆಟಲ್ಮೆಂಟ್) ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮಹತ್ವದ 'ಇಡುಗಂಟು ಯೋಜನೆ'ಯು  2024ರ ಜನವರಿ 1 ರಿಂದ ಜಾರಿಗೆ ಬರಲಿದೆ. ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಮರಣ ಹೊಂದಿದ ಎಲ್ಲ ಅತಿಥಿ ಉಪನ್ಯಾಸಕರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ (2019 ರಿಂದ 2023ರ ಅವಧಿ) ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರವು ಒಟ್ಟಾರೆ   44.15 ಕೋಟಿ ರೂಪಾಯಿಗಳನ್ನು ಮೀಸಲಿರಿಸಿ ಆದೇಶ ಹೊರಡಿಸಿದೆ.

ಸೇವಾವಧಿ ಲೆಕ್ಕಾಚಾರ ಮತ್ತು ಪರಿಹಾರ ಮೊತ್ತ

ಇಡುಗಂಟು ಯೋಜನೆಗೆ ಅತಿಥಿ ಉಪನ್ಯಾಸಕರ ಸೇವೆಯ ಅವಧಿಯನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ನಿಗದಿತ ನಮೂನೆಯಲ್ಲಿ ನೀಡಿದ ಸೇವಾ ಪ್ರಮಾಣಪತ್ರಗಳ ಆಧಾರದಲ್ಲಿ ಲೆಕ್ಕಹಾಕಲಾಗುವುದು. ಇಡುಗಂಟು ಯೋಜನೆಯು  ಪ್ರತಿ ವರ್ಷಕ್ಕೆ  50,000 ರೂಪಾಯಿ ದರದಲ್ಲಿದ್ದು, ಅತಿಥಿ ಉಪನ್ಯಾಸಕರ ಸೇವೆಯ ವರ್ಷಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ. ಆದರೆ, ಗರಿಷ್ಠ ಮೌಲ್ಯ  ₹5 ಲಕ್ಷ ರೂಪಾಯಿ ಆಗಿರುತ್ತದೆ.

ಪ್ರತಿ ಶೈಕ್ಷಣಿಕ ವರ್ಷದ 8 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ (ಅಂದರೆ ಶೈಕ್ಷಣಿಕ ವರ್ಷದಲ್ಲಿ 240 ದಿನಗಳು) ಸೇವೆಯನ್ನು ಒಂದು ವರ್ಷ ಎಂದು ಪರಿಗಣಿಸಲಾಗುವುದು. ಶೈಕ್ಷಣಿಕ ವರ್ಷದಲ್ಲಿ 8 ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಭಾಗಶಃ ವರ್ಷವೆಂದು ಪರಿಗಣಿಸಿ ಒಟ್ಟು ಸೇವಾವಧಿಗೆ ಸೇರಿಸಲಾಗುವುದು. ನಿಯಮಗಳ ಪ್ರಕಾರ, ಇಡುಗಂಟು ಯೋಜನೆಗೆ ಅರ್ಹರಾಗಿದ್ದು ಮರಣ ಹೊಂದಿದ ಅತಿಥಿ ಉಪನ್ಯಾಸಕರ ನಾಮನಿರ್ದೇಶಿತ ವ್ಯಕ್ತಿಗೆ ಅಥವಾ ಅವರ ಕುಟುಂಬದ ಕಾನೂನುಬದ್ಧ ವಾರಸುದಾರರ ಬ್ಯಾಂಕ್ ಖಾತೆಗೆ ಇಡುಗಂಟಿನ ಮೊತ್ತವನ್ನು ವರ್ಗಾಯಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ 

ಈ ನಿಯಮಗಳ ಅನ್ವಯ, ಅರ್ಹ ಅತಿಥಿ ಉಪನ್ಯಾಸಕರು ಇಡುಗಂಟು ಕ್ಲೇಮ್ ಪ್ರಸ್ತಾವನೆಯನ್ನು ತಮ್ಮ ಸಂಬಂಧಪಟ್ಟ ಕಾಲೇಜಿನ (ಅಂದರೆ 60 ವರ್ಷ ಪೂರೈಸುವ ವರ್ಷದಲ್ಲಿ ಅಥವಾ ಅದಕ್ಕೂ ಮೊದಲು ಕರ್ತವ್ಯ ನಿರ್ವಹಿಸಿದ ಕಾಲೇಜು) ಪ್ರಾಂಶುಪಾಲರ ಮೂಲಕ ಸಲ್ಲಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಅತಿಥಿ ಉಪನ್ಯಾಸಕರಿಗೆ ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯುವ ನಿರೀಕ್ಷೆಯಿದೆ. 

Tags:    

Similar News