Gold Smuggling Case | ರನ್ಯಾ ರಾವ್‌ ಬಂಧನಕ್ಕೆ ಮುನ್ನ ದುಬೈಗೆ ತೆರಳಿದ್ದ ಗಣ್ಯ ವ್ಯಕ್ತಿಗಳು ಯಾರು? ತನಿಖೆಗೆ ಸಿಬಿʼಐʼ

ಆಕೆ ಬಂಧನಕ್ಕೆ ಒಳಗಾಗುವ ಮುನ್ನ ದುಬೈಗೆ ತೆರಳಿದ್ದ ಕೆಲ ಗಣ್ಯ ವ್ಯಕ್ತಿಗಳು ಆಕೆಯ ಜತೆ ಸಂಪರ್ಕದಲ್ಲಿದ್ದರೇ ಎಂಬ ತನಿಖೆಯೂ ನಡೆದಿದೆ. ಒಂದು ವೇಳೆ ಆಕೆಯ ಸಂಪರ್ಕದಲ್ಲಿದ್ದರೆ, ಅವರು ರಾಜಕಾರಣಿಗಳೇ ಅಥವಾ ಯಾವ ಕ್ಷೇತ್ರದವರು ಎಂಬ ತನಿಖೆ ನಡೆಯಲಿದೆ;

Update: 2025-03-09 02:30 GMT
ಚಿತ್ರನಟಿ ರನ್ಯಾ ರಾವ್‌

ವಿದೇಶದಿಂದ ಚಿನ್ನ ಕಳ್ಳಸಾಗಾಣಿಕೆ ಆರೋಪದಲ್ಲಿ ಸಿಲುಕಿರುವ ಚಿತ್ರನಟಿ ರನ್ಯಾ ರಾವ್ ಅವರಿಗೆ ಚಿತ್ರರಂಗ, ಉದ್ಯಮಿಗಳು, ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳ ಸಂಪರ್ಕ ಇತ್ತೆನ್ನುವ ಮಾಹಿತಿ ತನಿಖೆಯಿಂದ ಹೊರಬಂದಿದೆ. ಈ ನಡುವೆ ಸಿಬಿಐ ಕೂಡಾ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಮತ್ತಿತರ ಕಡೆ  ಎಫ್‌ಐಆರ್‌ ದಾಖಲಿಸಿ ತನಿಖೆಗೆ ಮುಂದಾಗಿರುವುದು ರನ್ಯಾ ರಾವ್‌ ಜತೆ ಸಂಪರ್ಕದಲ್ಲಿದ್ದವರ ತಳಮಳಕ್ಕೆ ಕಾರಣವಾಗಿದೆ.

ಈ ಗೋಲ್ಡ್ ಸಗ್ಲಿಂಗ್ ಪ್ರಕರಣದಲ್ಲಿ ದೊಡ್ಡ ಜಾಲವೇ ಇದೆ ಎನ್ನುವ ಅನುಮಾನ ಕೂಡ ಇದೆ. ಚಿನ್ನ ಕಳ್ಳ ಸಾಗಾಣೆ ಮಾಡುವಂತೆ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಲಾಯಿತು ಎಂದು ನಟಿ ರನ್ಯಾ ಹೇಳಿದ್ದಾರೆ ಎನ್ನಲಾಗಿದೆ. ನಟಿಗೆ ಬೆದರಿಕೆ ಹಾಕಿ ಈ ಕೆಲಸ ಮಾಡಿಸಿದ್ದು ಯಾರು? ಈ ಪ್ರಕರಣದ ಹಿಂದೆ ಇರುವ ಅಸಲಿ ಕೈ ಯಾವುದು? ಎಂಬಿತ್ಯಾದಿ ವಿಷಯಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿನ್ನ ಸಾಗಣೆ ಪ್ರಕರಣದಲ್ಲಿ ರನ್ಯಾ ಕೂಡ ಕಮೀಷನ್ ಪಡೆದಿದ್ದಾರೆ ಎನ್ನಲಾಗಿದೆ.


ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ಸಂದರ್ಭದಲ್ಲಿ ಕೆಲವು ಗಣ್ಯ ವ್ಯಕ್ತಿಗಳ ಹೆಸರು ಬೆಳಕಿಗೆ ಬಂದಿದ್ದು, ಅವರಲ್ಲಿ ತಳಮಳ ಸೃಷ್ಟಿಯಾಗಿದೆ.  ಜತೆಗೆ, ಆಕೆ ಬಂಧನಕ್ಕೆ ಒಳಗಾಗುವ ಮುನ್ನ ದುಬೈಗೆ ತೆರಳಿದ್ದ ಕೆಲ ಗಣ್ಯ ವ್ಯಕ್ತಿಗಳು ಆಕೆಯ ಜತೆ ಸಂಪರ್ಕದಲ್ಲಿದ್ದರೇ ಎಂಬ ತನಿಖೆಯೂ ನಡೆದಿದೆ. ಒಂದು ವೇಳೆ ಆಕೆಯ ಸಂಪರ್ಕದಲ್ಲಿದ್ದರೆ, ಅವರು ರಾಜಕಾರಣಿಗಳೇ ಅಥವಾ ಯಾವ ಕ್ಷೇತ್ರದವರು ಎಂಬ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ದುಬೈನಿಂದ 12 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ  ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ  ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು  ಬಂಧಿಸಿದ್ದರು.

14 ಕೆ.ಜಿ. ಚಿನ್ನವನ್ನು ದುಬೈನಿಂದ  ಅಕ್ರಮವಾಗಿ ಭಾರತಕ್ಕೆ ತಂದಿರುವ ಹಿನ್ನೆಲೆಯಲ್ಲಿ  ಪ್ರಭಾವಿ ವ್ಯಕ್ತಿಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಡಿಆರ್‌ಐ ಅಧಿಕಾರಿಗಳು  ಸೈಬರ್‌ ಫಾರೆನ್ಸಿಕ್‌ ತಂಡದ ಸಹಕಾರದಿಂದ ರನ್ಯಾ ರಾವ್‌ಳ ಮೊಬೈಲ್‌ ಫೋನ್‌, ಇ-ಮೇಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಇದರಿಂದಾಗಿ ಆಕೆ ಜತೆ ನಿರಂತರ ಸಂಪರ್ಕ ಹೊಂದಿರುವ ಕೆಲವು ಗಣ್ಯ ವ್ಯಕ್ತಿಗಳ ಮಾಹಿತಿ ಡಿಆರ್‌ಐಗೆ  ಗೊತ್ತಾಗಿದೆ ಎನ್ನಲಾಗಿದೆ. ಹಾಗಾಗಿ ಅಂತಹ ವ್ಯಕ್ತಿಗಳನ್ನು ಡಿಆರ್‌ಐ ತನಿಖೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.

ಯಾರು ಗಣ್ಯ ವ್ಯಕ್ತಿಗಳು?

ಆಕೆ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಹಲವರಿದ್ದರೂ, ಪ್ರಮುಖವಾಗಿ ಆಕೆ ಚಿನ್ನ ಸ್ಮಗ್ಲಿಂಗ್‌ ಮಾಡಿದ ಸಂದರ್ಭದಲ್ಲಿ ಸಂಪರ್ಕದಲ್ಲಿದ್ದವರ ತನಿಖೆ ಸಾಧ್ಯತೆ ಹೆಚ್ಚಿದೆ. ಇದು ಚಿತ್ರರಂಗಕ್ಕೆ ಅಥವಾ ವೃತ್ತಿಜೀವನಕ್ಕೆ ಸೀಮಿತವಾದ ಸಂಪರ್ಕವೇ ಅಥವಾ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಪಾಲುದಾರಿಕೆಯೇ ಎಂಬ ಬಗ್ಗೆ ಪರಿಶೀಲನೆ ನಡೆದಿದೆ ಹಾಗೂ ರನ್ಯಾ ರಾವ್‌ಳನ್ನೂ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಆಕೆ ಬಂಧನವಾಗುವುದಕ್ಕಿಂದ ಹಿಂದಿನ  15 ದಿನಗಳಲ್ಲಿ ರನ್ಯಾ ರಾವ್ 4 ಬಾರಿ ದುಬೈಗೆ ತೆರಳಿದ್ದಾಳೆ.  ಇತ್ತೀಚೆಗೆ ಬೆಂಗಳೂರಿನ ತಾರಾ ಹೋಟೆಲ್‌ನಲ್ಲಿ ಅದ್ದೂರಿಯ ಕಾರ್ಯಕ್ರಮವೊಂದನ್ನೂ ಆಕೆ ಆಯೋಜಿಸಿದ್ದಳು ಎಂಬ ಮಾಹಿತಿ ಹೊರಬಿದ್ದಿದೆ.

ಪತಿಯ ಶೋಧನೆ

ಈವರೆಗಿನ ತಪಾಸಣೆಯಲ್ಲಿ ಒಟ್ಟು 17 ಕೋಟಿ ರೂ.ಗಳ ಸಂಪತ್ತು ಪತ್ತೆಯಾಗಿದೆ. ಆಕೆಯ ಪತಿ ಜತಿನ್ ಹುಕ್ಕೇರಿ ಉದ್ಯಮಿಯಾಗಿದ್ದು, ಅವರ ಆದಾಯದ ಮೂಲಗಳನ್ನೂ ಸಹ ಶೋಧಿಸಲಾಗುತ್ತಿದೆ.

ರನ್ಯಾ  12 ಕೋಟಿ ರೂ. ಮೊತ್ತದ ಚಿನ್ನವನ್ನು ವಿದೇಶದಲ್ಲಿ ಖರೀದಿಸಲು ಹಣಕಾಸಿನ ಸೌಲಭ್ಯಗಳು ಯಾವ ಮೂಲದಿಂದ ಬಂದಿವೆ ಎಂಬ ಬಗ್ಗೆ ತನಿಖೆ ನಡೆದಿದೆ. ಕೆಲವು ನಿರ್ಮಾಪಕರು ಹಾಗೂ ಹಣಕಾಸು ಸಂಸ್ಥೆ ನಡೆಸುವವರ  ಜೊತೆ ರನ್ಯಾ ರಾವ್ ಸಂಪರ್ಕದಲ್ಲಿದ್ದಳೆನ್ನಲಾಗಿದೆ. 

ಡಿಆರ್‌ಐ ಕಸ್ಟಡಿ

ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತಳಾವಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅಲಿಯಾಸ್‌ ಹರ್ಷವರ್ದಿನಿ ರನ್ಯಾಳನ್ನು ತನಿಖೆಗೆ ಒಳಪಡಿಸಲು ಮೂರು ದಿನಗಳ ಕಾಲ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಕ್ಕೆ ನೀಡಿ ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶಿಸಿತ್ತು.

ರನ್ಯಾಳನ್ನು ತನಿಖೆಗೆ ಒಳಪಡಿಸಲು ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಕೋರಿ ಡಿಆರ್‌ಐ ಸಲ್ಲಿಸಿದ್ದ ಅರ್ಜಿಯನ್ನು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್‌ ಚನ್ನಬಸಪ್ಪ ಗೌಡರ್‌ ಪುರಸ್ಕರಿಸಿ, ಮೂರು ದಿನ ಡಿಆರ್‌ಐ ಕಸ್ಟಡಿಗೆ ನೀಡಿದ್ದರು. ಆ ಸಂದರ್ಭದಲ್ಲಿ ಡಿಆರ್‌ಐ ಪರ ವಕೀಲರು “ರನ್ಯಾಗೆ ಯಾರು ಮತ್ತು ಎಲ್ಲಿಂದ ಚಿನ್ನ ಪೂರೈಸಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ದೇಶ ವಿರೋಧಿ ಚಟುವಟಿಕೆಗಳ ಜೊತೆ ಚಿನ್ನ ಕಳ್ಳ ಸಾಗಣೆ ತಳುಕು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ತನಿಖೆ ಅಗತ್ಯವಾಗಿದೆ. ಕಳೆದ ಆರು ತಿಂಗಳಲ್ಲಿ ರನ್ಯಾ 27 ಬಾರಿ ದುಬೈ ಪ್ರವಾಸ ಮಾಡಿದ್ದು, ಇದರ ಉದ್ದೇಶವನ್ನು ಅರಿಯಬೇಕಿದೆ” ಎಂದು ತಿಳಿಸಿದ್ದರು. ಈ ಎಲ್ಲಾ ದೃಷ್ಟಿಕೋನಗಳಿಂದ ತನಿಖೆ ನಡೆಯುತ್ತಿದೆ.

ಸಿಬಿಐ ತನಿಖೆ

ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸದ್ದು ಮಾಡಿರುವ ಕರ್ನಾಟಕದ ಚಲನಚಿತ್ರ ನಟಿ ಹಾಗೂ ರಾಜ್ಯ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾ ರಾವ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಸಿಬಿಐ ಶನಿವಾರ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಮತ್ತಿತರ ಕಡೆ ರನ್ಯಾರಾವ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದೆ. ಇದೀಗ ಚಿತ್ರನಟಿ ವಿರುದ್ಧ ಡಿಆರ್‌ಐ ಸಮನ್ವಯದೊಂದಿಗೆ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇದು ಬರುವ ದಿನಗಳಲ್ಲಿ ರನ್ಯಾರಾವ್‌ ಹಾಗೂ ಆಕೆಯ ಸಹವರ್ತಿಗಳಿಗೆ ಕಾನೂನಿನ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿಆರ್‌ಐ ತನಿಖೆ ವೇಳೆ ತಾನು ಕಳೆದ ವರ್ಷ ಒಟ್ಟು 30 ಬಾರಿ ದುಬೈಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಳು. ಅದರಲ್ಲೂ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ವಿದೇಶಿ ಪ್ರವಾಸ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರತಿಬಾರಿ ದುಬೈಗೆ ಪ್ರಯಾಣಿಸುತ್ತಿದ್ದ ವೇಳೆ ರನ್ಯಾ ರಾವ್ ಕೆಜಿಗಟ್ಟಲೇ ಚಿನ್ನವನ್ನು ತರುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಇದರ ಹಿಂದೆ ಅಂತಾರಾಷ್ಟ್ರೀಯ ಮಾಫಿಯಾ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಡಿಜಿಪಿ ಮಗಳಿಗೆ ಪೊಲೀಸ್‌ ಸಹಾಯ?

ತಾನು ಕರ್ನಾಟಕದ ಪೊಲೀಸ್ ವಸತಿ ಮಂಡಳಿಯ ಡಿಜಿಪಿ ರಾಮಚಂದ್ರ ರಾವ್ ಅವರ ಪುತ್ರಿ ಎಂದು ದುಬೈಗೆ ಪ್ರೋಟೊಕಾಲ್ ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರತಿ ಬಾರಿಯೂ ವಿದೇಶಕ್ಕೆ ತೆರಳುವ ವೇಳೆ ಪೊಲೀಸ್ ಭದ್ರತೆಯಲ್ಲಿ ವಿಮಾನ ನಿಲ್ದಾಣದ ಗಣ್ಯರು ತೆರಳುವ ಸ್ಥಳಕ್ಕೆ ಬರುತ್ತಿದದ್ದು ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ವಲಸಿಗರ ವಿಭಾಗ ಅಧಿಕಾರಿಗಳು ಇದನ್ನು ಪತ್ತೆಹಚ್ಚಿದ್ದು, ಪ್ರತಿ ಬಾರಿ ದುಬೈನಿಂದ ಸ್ವದೇಶಕ್ಕೆ ಬರುವ ವೇಳೆ ಕನಿಷ್ಟ 4ರಿಂದ 5 ಕೆಜಿ ಚಿನ್ನ ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.

Tags:    

Similar News