ವಿಧಾನ ಪರಿಷತ್ ಸ್ಥಾನಕ್ಕೆ ರಮೇಶ್ ಬಾಬು ನಾಮಕರಣ: ಜೆಡಿಎಸ್ ತೀವ್ರ ಆಕ್ಷೇಪ

ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಸಹಿಗಳ ಮೂಲಕ ಹಲವು ಭೂ ಅವ್ಯವಹಾರಗಳಲ್ಲಿ ರಮೇಶ್ ಬಾಬು ಭಾಗಿಯಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.;

Update: 2025-06-08 11:20 GMT
ವಿಧಾನ ಪರಿಷತ್ ಸ್ಥಾನಕ್ಕೆ ರಮೇಶ್ ಬಾಬು ನಾಮಕರಣ: ಜೆಡಿಎಸ್ ತೀವ್ರ ಆಕ್ಷೇಪ

ಬೆಂಗಳೂರು: ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾಗಿರುವ ರಮೇಶ್ ಬಾಬು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್​ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಬಾಬು ಅವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ಅವರ ಆಯ್ಕೆ ಅಸಮಪರ್ಕ ಎಂದು ಜೆಡಿಎಸ್ ಆರೋಪಿಸಿದೆ.

"ಅಪರಾಧ ಹಿನ್ನೆಲೆಯುಳ್ಳ ವಂಚಕ ರಮೇಶ್‌ ಬಾಬು ಹೆಸರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿರುವುದು ಎಷ್ಟು ಸಮಂಜಸ?" ಎಂದು ಜೆಡಿಎಸ್ ಪ್ರಶ್ನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಉದ್ದೇಶಿಸಿ, ಜೆಡಿಎಸ್ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದೆ. ಬಾಬು ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಪ್ರತಿಗಳನ್ನು ಹಂಚಿಕೊಂಡಿರುವ ಜೆಡಿಎಸ್, "ಹಲವು ಗಂಭೀರ ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ" ಎಂದು ಪ್ರತಿಪಾದಿಸಿದೆ.

ಇದಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಸಹಿಗಳ ಮೂಲಕ ಹಲವು ಭೂ ಅವ್ಯವಹಾರಗಳಲ್ಲಿ ರಮೇಶ್ ಬಾಬು ಭಾಗಿಯಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. "ಇಂತಹ ಭೂಗಳ್ಳನ ಹೆಸರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ಶೋಭೆಯೇ?" ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡದಂತೆ ಈಗಾಗಲೇ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎಂದೂ ಜೆಡಿಎಸ್ ಉಲ್ಲೇಖಿಸಿದೆ.

ಗಮನಾರ್ಹವೆಂದರೆ, ರಮೇಶ್ ಬಾಬು ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು, ಆ ನಂತರ ಕಾಂಗ್ರೆಸ್ ಸೇರಿಕೊಂಡಿದ್ದರು.

ಕಾಂಗ್ರೆಸ್ ಬಲ ಹೆಚ್ಚಳ

ಖಾಲಿ ಇದ್ದ ನಾಲ್ಕು ಸ್ಥಾನಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊನೆಗೂ ಭರ್ತಿ ಮಾಡುವುದರೊಂದಿಗೆ 75 ಸದಸ್ಯರ ಬಲದಲ್ಲಿ ಕಾಂಗ್ರೆಸ್‌ 37ಕ್ಕೆ ಹೆಚ್ಚಿಸಿಕೊಂಡಿದೆ. ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮೀನ್‌ಮಟ್ಟು ಹಾಗೂ ಡಿ.ಜಿ. ಸಾಗರ್ ಅವರನ್ನು ಮೇಲ್ಮನೆಗೆ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ಒಪ್ಪಿಗೆಗಾಗಿ ಸರ್ಕಾರ ಕಳುಹಿಸಿಕೊಟ್ಟಿದೆ. ನಾಳೆ (ಸೋಮವಾರ) ರಾಜ್ಯಪಾಲರು ಸಹಿ ಹಾಕಿ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

ಪರಿಷತ್‌ನಲ್ಲಿ75 ಸಂಖ್ಯಾಬಲ ಪೈಕಿ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್‌ 33, ಪ್ರತಿಪಕ್ಷ ಬಿಜೆಪಿ 29, ಜೆಡಿಎಸ್‌ 7, ಪಕ್ಷೇತರ 1 ಮತ್ತು ಸಭಾಪತಿ 1 ಸ್ಥಾನ ಇತ್ತು. ನಾಲ್ವರು ಆಯ್ಕೆ ಬಳಿಕ ಕಾಂಗ್ರೆಸ್‌ 37ಕ್ಕೆ ಹೆಚ್ಚಳವಾಗಿದೆ. ಆದರೂ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಇಲ್ಲ.

Tags:    

Similar News