ಅದಾನಿ ಲಂಚ ಪ್ರಕರಣ | ಇಂಡಿಯಾ ಒಕ್ಕೂಟದಿಂದ ಸಂಸತ್‌ ಮುಂದೆ ಪ್ರತಿಭಟನೆ

"ಮೋದಿ-ಅದಾನಿ ಏಕ್ ಹೈ, ಅದಾನಿ ಸೇಫ್ ಹೈ" ಎಂಬ ಬರಹದ ಸ್ಟಿಕ್ಕರ್‌ ಹೊಂದಿರುವ ಜಾಕೆಟ್‌ಗಳನ್ನು ತೊಟ್ಟು ಇಂಡಿಯಾ ಒಕ್ಕೂಟದ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Update: 2024-12-05 09:54 GMT

ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯದಿಂದ ಸಮನ್ಸ್‌ ಪಡೆದಿರುವ ಗೌತಮ್ ಅದಾನಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ಆರೋಪಗಳ ಕುರಿತ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಪಟ್ಟು ಹಿಡಿದ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಪಕ್ಷಗಳು ಗುರುವಾರ ಸಂಸತ್ ದ್ವಾರದಲ್ಲಿ ಪ್ರತಿಭಟನೆ ನಡೆಸಿದವು.

"ಮೋದಿ-ಅದಾನಿ ಏಕ್ ಹೈ, ಅದಾನಿ ಸೇಫ್ ಹೈ" ಎಂದು ಬರಹದ ಸ್ಟಿಕ್ಕರ್‌ ಹೊಂದಿರುವ ಜಾಕೆಟ್‌ಗಳನ್ನು ತೊಟ್ಟು ಇಂಡಿಯಾ ಒಕ್ಕೂಟದ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವಿರುದ್ಧ ಯಾವುದೇ ತನಿಖೆ ನಡೆಸುವುದಿಲ್ಲ. ಏಕೆಂದರೆ ಅದು ಸ್ವತಃ ಅವರ ವಿರುದ್ಧವೇ ತನಿಖೆಗೆ ಆದೇಶಿಸಿದಂತಾಗುತ್ತದೆ ಎಂದು ಕುಟುಕಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ಸಂಸದರು, ಆರ್‌ಜೆಡಿ, ಎಡಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ, ಇಂಡಿಯಾ ಒಕ್ಕೂಟದ ಭಾಗವಾಗಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸಂಸದರು ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದರು.

ಭಾರತದಲ್ಲಿ ಸೋಲಾರ್‌ ಯೋಜನೆಗೆ ಅಮೆರಿಕದ ಕಂಪನಿಗಳಿಂದ ಬಂಡವಾಳ ಆಕರ್ಷಿಸಲು ಲಂಚ ನೀಡಿದ್ದಾರೆ ಎಂದು ಆರೋಪ ಸಂಬಂಧ ಅಮೆರಿಕದ ನ್ಯಾಯಾಲಯ ಅದಾನಿ ವಿರುದ್ಧ ಬಂಧನ ವಾರೆಂಟ್‌ ಜಾರಿ ಮಾಡಿತ್ತು. ಈ ಕುರಿತಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು. ಅದಾನಿಯನ್ನು ಬಂಧಿಸಬೇಕು ಎಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದರು. ಆದರೆ, ಸಂಸತ್ತಿನಲ್ಲಿ ಅದಾನಿ ಅವ್ಯವಹಾರದ ಕುರಿತ ಚರ್ಚೆಗೆ ಅವಕಾಶ ನಿರಾಕರಿಸಲಾಗಿತ್ತು.

ಸಂಸತ್ತಿನ ಪ್ರವೇಶದ್ವಾರದ ಮುಂದೆ ಪ್ರತಿಭಟನೆ ನಡೆಸಲು ಸಂಸತ್‌ ಸಚಿವಾಲಯ ಅನುಮತಿ ನೀಡಿರಲಿಲ್ಲ. ಬದಲಿಗೆ ಸಂಸತ್ ದ್ವಾರದ ಎದುರು ಪ್ರತಿಭಟನೆ ನಡೆಸಲು ಸಲಹೆ ನೀಡಿತ್ತು. 

ಭಾರತದ ನಾಲ್ಕು ರಾಜ್ಯಗಳಲ್ಲಿ ಸೌರ ವಿದ್ಯುತ್‌ ಒಪ್ಪಂದಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡಲು ಅದಾನಿ ಗ್ರೂಪ್‌ ಭಾರತೀಯ ಅಧಿಕಾರಿಗಳಿಗೆ 2200 ಕೋಟಿ ಲಂಚ ನೀಡಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಮತ್ತು ಅಲ್ಲಿನ ಷೇರು ಮಾರುಕಟ್ಟೆ ನಿಯಂತ್ರಣ ಆಯೋಗ ಆರೋಪಿಸಿದ್ದವು. ಆದರೆ, ಈ ಆರೋಪವನ್ನು ತಳ್ಳಿ ಹಾಕಿದ್ದ ಅದಾನಿ ಗ್ರೂಪ್‌, ಇದೊಂದು ಆಧಾರರಹಿತ ಆರೋಪ ಎಂದು ಹೇಳಿತ್ತು.

Tags:    

Similar News