NAAC Bribe Case | ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ: ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅಮಾನತು

NAAC Bribe Case | ಗಾಯತ್ರಿ ಅವರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಿ ನಿರ್ಣಯ ಕೈಗೊಳ್ಳಲಾಗಿದೆ.;

Update: 2025-02-07 05:28 GMT
ಗಾಯತ್ರಿ ದೇವರಾಜ

ನ್ಯಾಕ್‌ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಗುರುವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಗಾಯತ್ರಿ ಅವರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಿ ನಿರ್ಣಯ ಕೈಗೊಳ್ಳಲಾಗಿದೆ.

'ಕೆಸಿಎಸ್‌ಆರ್ ನಿಯಮಗಳ ಪ್ರಕಾರ ಪ್ರೊ. ಗಾಯತ್ರಿ ದೇವರಾಜ ಅವರನ್ನು ಅಮಾನತುಗೊಳಿಸಲಾಗಿದೆ. ಆದೇಶದ ಪ್ರತಿಯನ್ನು ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಕಳಿಸಿಕೊಡಲಾಗುವುದು' ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದರು.

ನ್ಯಾಕ್‌ ಮಾನ್ಯತೆ ನೀಡಲು ವಿಶ್ವವಿದ್ಯಾನಿಲಯಗಳಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಕ್ ಸಮಿತಿಯ ಸದಸ್ಯೆಯಾದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಅವರನ್ನು ಸಿಬಿಐ ಪೊಲೀಸರು ಕಳೆದ ಭಾನುವಾರ ಬಂಧಿಸಿದ್ದರು. 

ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದು, ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿದ್ದಾರೆ. ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ನ್ಯಾಕ್) ಏಳು ಸದಸ್ಯರ ತಪಾಸಣಾ ತಂಡದ ಭಾಗವಾಗಿದ್ದರು.

ಯುಜಿಸಿಯ ನ್ಯಾಕ್ ಮಾನ್ಯತೆ ನೀಡಲು ವಿಶ್ವವಿದ್ಯಾನಿಲಯಗಳಿಂದ ಲಂಚ ಬೇಡಿಕೆ ಇಡುತ್ತಿದ್ದ ನ್ಯಾಕ್ ತಂಡ, ಭಾರೀ ಮೊತ್ತದ ನಗದು ಮತ್ತು ಇತರೆ ಆಮಿಷಗಳಿಗೆ ಬೇಡಿಕೆ ಇಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಅಕ್ರಮ ನಡೆದಿರುವುದು ತನಿಖೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಭಾನುವಾರ ನ್ಯಾಕ್ ತಂಡದ ಅಧ್ಯಕ್ಷರು ಸೇರಿದಂತೆ ಹಲವನ್ನು ಬಂಧಿಸಿದ್ದಾರೆ.

Tags:    

Similar News