‘ಪೊರ್ಕಿ’, ‘ಪೋಲಿ’, ‘ತರ್ಲೆ ನನ್ಮಗ’, ‘ದಾರಿ ತಪ್ಪಿದ ಮಗ’ ನಂತರ ‘ಬ್ರ್ಯಾಟ್‍’ …

ಈ ಕಥೆಗೆ ‘ಬ್ರ್ಯಾಟ್‍’ ಎಂಬ ಶೀರ್ಷಿಕೆ ಸೂಕ್ತವಾಗಿದ್ದರಿಂದ ಆ ಹೆಸರನ್ನೇ ಇಡಲಾಗಿದೆ ಎನ್ನುವ ಶಶಾಂಕ್‍, ‘‘ಬ್ರ್ಯಾಟ್‍’ ಎಂದರೆ 16 ವರ್ಷದ ಒಳಗಿನ ಹುಡುಗರಿಗೆ ಕರೆಯಲಾಗುತ್ತದೆ.;

Update: 2025-04-01 00:40 GMT

ಬ್ರ್ಯಾಟ್‍ ಸಿನಿಮಾದಲ್ಲಿ ಕೃಷ್ಣ ಜೊತೆಗೆ ಮನೀಷಾ ನಾಯಕಿಯಾಗಿ ನಟಿಸಿದ್ದಾರೆ.

ಶಶಾಂಕ್‍ ಮತ್ತೊಮ್ಮೆ ಮಗನ ಕುರಿತು ಸಿನಿಮಾ ಮಾಡುತ್ತಿದ್ದಾರೆ. ‘ತಾಯಿಗೆ ತಕ್ಕ ಮಗ’ ಮತ್ತು ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಗಳಲ್ಲಿ ತಾಯಿಯ ಮಮತೆ ಮತ್ತು ಮಗನ ವಿಧೇಯತೆಯನ್ನು ತೋರಿಸಿದ್ದ ಶಶಾಂಕ್‍, ಈ ಬಾರಿ ದಾರಿ ತಪ್ಪಿದ ಮಗನೊಬ್ಬನ ಕುರಿತು ಚಿತ್ರ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ಶಶಾಂಕ್‍ ‘ಬ್ರ್ಯಾಟ್‍’ ಎಂಬ ಹೆಸರಿಟ್ಟಿದ್ದು, ಈ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಚಿತ್ರದ ಸಾರವನ್ನು ಹೇಳುವ ಹಾಡನ್ನು ಬಿಡುಗಡೆ ಮಾಡಲಾಗಿದೆ. ರಾಹುಲ್‍ DIT-O ಹಾಡುವುದರ ಜೊತೆಗೆ ಸಾಹಿತ್ಯ ರಚಿಸಿರುವ ಈ ಹಾಡು ಯೂಟ್ಯೂಬ್‍ನ ಆನಂದ್‍ ಆಡಿಯೋ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ‘First Rank ರಾಜು’ ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್‍ ಕುಂದಕೂರು ‘ಬ್ರ್ಯಾಟ್‍’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

‘ಬ್ರ್ಯಾಟ್‍’ ಕುರಿತು ಮಾತನಾಡುವ ಶಶಾಂಕ್‍, ‘ಇವತ್ತಿನ ತಲೆಮಾರಿನ ಯುವಕರ ಕಥೆ. ಈ ಬ್ರ್ಯಾಟ್‍ ಎನ್ನುವ ಪಾತ್ರ, ಇವತ್ತಿನ ತಲೆಮಾರಿನ ಯುವಕರಿಗೆ ಕನೆಕ್ಟ್ ಆಗುವಂತಹ ಪಾತ್ರ. ಈ ಚಿತ್ರದಲ್ಲಿ ಅಚ್ಯುತ್‍ ಕುಮಾರ್ ಮತ್ತು ಕೃಷ್ಣ ತಂದೆ-ಮಗನ ಪಾತ್ರ ಮಾಡುತ್ತಿದ್ದಾರೆ. ಇದು ತಂದೆ-ಮಗನ ಸಂಘರ್ಷದ ಕಥೆ. ಇಲ್ಲಿ ತಂದೆಯ ದೃಷ್ಟಿಯಲ್ಲಿ ಮಗ ‘ಬ್ರ್ಯಾಟ್‍’ ಆಗಿರುತ್ತಾನೆ’ ಎಂದರು.

ಈ ಕಥೆಗೆ ‘ಬ್ರ್ಯಾಟ್‍’ ಎಂಬ ಶೀರ್ಷಿಕೆ ಸೂಕ್ತವಾಗಿದ್ದರಿಂದ ಆ ಹೆಸರನ್ನೇ ಇಡಲಾಗಿದೆ ಎನ್ನುವ ಶಶಾಂಕ್‍, ‘‘ಬ್ರ್ಯಾಟ್‍’ ಎಂದರೆ 16 ವರ್ಷದ ಒಳಗಿನ ಹುಡುಗರಿಗೆ ಕರೆಯಲಾಗುತ್ತದೆ. ಇಂಗ್ಲೀಷ್‍ ಟೀಚರ್ಸ್‌ಗಳು ಈ ಪದವನ್ನು ಹೆಚ್ಚು ಉಪಯೋಗಿಸುತ್ತಾರೆ. ನಮ್ಮ ಕಥೆಗೆ ಈ ಶೀರ್ಷಿಕೆ ಸೂಕ್ತವಾಗಿತ್ತು. ನಾಯಕನ ಪಾತ್ರವನ್ನು ಬಣ್ಣಿಸುವ ಪದ ಇದು. ಇದಕ್ಕೆ ಕನ್ನಡದಲ್ಲಿ ಸಮಾನಾಂತರ ಪದ ಸಿಗಲಿಲ್ಲ. ಕನ್ನಡದಲ್ಲಿ ಈ ತರಹದ ಪದಗಳಿರುವ ಹಲವು ಶೀರ್ಷಿಕೆಗಳು ಬಂದಿವೆ. ‘ಪೊರ್ಕಿ’, ‘ಪೋಲಿ’, ‘ತರ್ಲೆ ನನ್ಮಗ’, ‘ದಾರಿ ತಪ್ಪಿದ ಮಗ’ ಮುಂತಾದ ಶೀರ್ಷಿಕೆಗಳು ಬಂದಿವೆ. ಹಾಗಾಗಿ, ಈ ಹೆಸರು ಇಡಲಾಗಿದೆ. ಚಿತ್ರವು ಪ್ಯಾನ್‍ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಐದೂ ಭಾಷೆಗಳಿಗೆ ಶೀರ್ಷಿಕೆ ಹೊಂದುತ್ತದೆ ಎಂದು ಈ ಹೆಸರು ಇಟ್ಟಿದ್ದೇವೆ. ಹೆಚ್ಚು ಬಳಕೆಯಲ್ಲಿಲ್ಲದ ಪದವಾದ್ದರಿಂದ, ಇದನ್ನು ಅರ್ಥ ಮಾಡಿಸಬೇಕೆಂದು ಈ ಹಾಡು ಮಾಡಿದ್ದೇವೆ. ಈ ಹಾಡು ಸಿನಿಮಾದಲ್ಲಿಲ್ಲ. ಚಿತ್ರದ ಪ್ರಚಾರ ಮತ್ತು ಸಿನಿಮಾದ ಸಾರ ಹೇಳುವುದಕ್ಕಾಗಿ ಈ ಹಾಡು ಮಾಡಿದ್ದೇವೆ’ ಎಂದರು.

ಈಗಾಗಲೇ ಶೇ, 80ರಷ್ಟು ಚಿತ್ರೀಕರಣ ಮುಗಿದಿರುವ ‘ಬ್ರ್ಯಾಟ್‍’ ಚಿತ್ರದಲ್ಲಿ ಕೃಷ್ಣ ಜೊತೆಗೆ ಮನೀಷಾ, ಅಚ್ಯುತ್‍ ಕುಮಾರ್, ರಮೇಶ್‍ ಇಂದಿರಾ, ಡ್ರ್ಯಾಗನ್‍ ಮಂಜು ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.

Tags:    

Similar News