PG CET |ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ ನಾಳೆ
ಪಿಜಿ ಸಿಇಟಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಲಾಗುವುದು. ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳ ಗುರುತು ಸಹ ಪತ್ತೆ ಹಚ್ಚಲಾಗುತ್ತದೆ. ನಕಲಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.;
ಸಾಂದರ್ಭಿಕ ಚಿತ್ರ
ಎಂ.ಟೆಕ್, ಡಿಸಿಇಟಿ ಪ್ರವೇಶ ಪರೀಕ್ಷೆ ಸೇರಿದಂತೆ ಎಸ್ಸಿ/ಎಸ್ಟಿ ಹಾಗೂ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ತರಬೇತಿಗೆ ಆಯ್ಕೆ ಮಾಡುವ ಸಲುವಾಗಿ ಶನಿವಾರ (ಮೇ 31) ರಾಜ್ಯದ 113 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡುವ ಜತೆಗೆ ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳ ಗುರುತು ಪತ್ತೆಹಚ್ಚಲಾಗುತ್ತದೆ. ನಕಲಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಒಟ್ಟು 52,352 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.
ಡಿಪ್ಲೊಮಾ ಮುಗಿಸಿ, ಎಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸುವುದಕ್ಕೆ ರಾಜ್ಯದ 46 ಕೇಂದ್ರಗಳಲ್ಲಿ ಡಿಸಿಇಟಿ ನಡೆಸುತ್ತಿದ್ದು, 21,201 ಮಂದಿ ಪರೀಕ್ಷೆ ತೆಗೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ಎಂ.ಟೆಕ್‌ನ ಮ್ಯಾಕಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿಜ್ಞಾನ ವಿಭಾಗಗಳ ಪ್ರವೇಶಕ್ಕೆ 13 ಕೇಂದ್ರಗಳಲ್ಲಿ ಪಿಜಿಸಿಇಟಿ ನಡೆಯುತ್ತಿದ್ದು 3,756 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನಡೆಸುವ ಕೆಎಎಸ್ ಪರೀಕ್ಷೆಯ ತರಬೇತಿಗೆ 19,992 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ 7,403 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ
ಯುಜಿಸಿಇಟಿ ಬರೆದ ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಜೂನ್ 3ರಿಂದ 6ರವರೆಗೆ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮುಂಗಡವಾಗಿ ದಿನಾಂಕ ಕಾಯ್ದಿರಿಸಿಕೊಳ್ಳಲು ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ.
ಪಿಜಿಸಿಇಟಿ (ಎಂಇ, ಎಂಟೆಕ್) ತೆಗೆದುಕೊಂಡಿರುವ ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಜೂನ್ 9ರಂದು ಕೆಇಎ ಕಚೇರಿಯಲ್ಲಿ ನಡೆಯಲಿದೆ. ಎಂಬಿಎ, ಎಂಸಿಎ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.