Guarantee Schemes | ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದ್ದು ಪರಮೇಶ್ವರ್: ಗೃಹ ಸಚಿವರಿಗೆ ಡಿಸಿಎಂ ತಿರುಗೇಟು

2023 ರ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು ಗೃಹ ಸಚಿವ ಪರಮೇಶ್ವರ ನೇತೃತ್ವದ ಸಮಿತಿಯೇ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ;

Update: 2025-02-26 06:36 GMT
ಡಿ.ಕೆ ಶಿವಕುಮಾರ್‌

ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರ ಹೇಳಿಕೆ ಇದೀಗ ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಕಡೆ ಸರ್ಕಾರ ಮತ್ತು ಪಕ್ಷ ಗ್ಯಾರಂಟಿ ಯೋಜನೆಗಳು ತಮ್ಮ ಹೆಗ್ಗಳಿಕೆ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಸರ್ಕಾರದ ಭಾಗವಾಗಿರುವ ಹಿರಿಯ ಸಚಿವರೇ ವ್ಯತಿರಿಕ್ತ ಹೇಳಿಕೆ ನೀಡಿರುವುದು ತೀವ್ರ ಇರಿಸು-ಮುರಿಸಿಗೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಡಾ ಪರಮೇಶ್ವರ್‌ ಅವರ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೃಹ ಸಚಿವ ಪರಮೇಶ್ವರ್ ಅವರೇ ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದು, ಆ ಪ್ರಣಾಳಿಕೆಯ ಭಾಗವಾಗಿಯೇ ಗ್ಯಾರಂಟಿ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು ಪರಮೇಶ್ವರ ನೇತೃತ್ವದ ಸಮಿತಿಯೇ ಎಂದಿದ್ದಾರೆ. ಆ ಮೂಲಕ ಈಗ ರಾಜ್ಯದ ಆರ್ಥಿಕತೆಗೆ ಗ್ಯಾರಂಟಿ ಯೋಜನೆ ಭಾರ ಎನ್ನುವ ಡಾ ಪರಮೇಶ್ವರ್‌ ಅವರು ಅಂದು ಪ್ರಣಾಳಿಕೆಯಲ್ಲಿ ಆ ಅಂಶವನ್ನು ಅಳವಡಿಸುವಾಗ ಆರ್ಥಿಕತೆಯ ಮೇಲೆ ಅದರ ಪರಿಣಾಮವೇನು ಎಂಬ ಅಂದಾಜು ಇರಲಿಲ್ಲವೇ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. 

ತುಮಕೂರಿನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಹೊರೆ ಆಗುತ್ತಿರುವುದು ನಿಜ. ಅದು ಗೊತ್ತಿದ್ದೇ ನಾವು ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಗುವ ಈ ಹೊರೆಯನ್ನು ನಾವು ಸಹಿಸಿಕೊಳ್ಳಬೇಕು ಎಂದು ಪರಮೇಶ್ವರ್ ಹೇಳಿದ್ದರು.

Tags:    

Similar News