OPS Scheme | ರಾಜ್ಯ ನೌಕರರಿಗೆ ಶೀಘ್ರ ಹಳೇ ಪಿಂಚಣಿ ಸೌಲಭ್ಯ ಜಾರಿ: ಸಚಿವ ಬೋಸರಾಜು
ಓಪಿಎಸ್ ಯೋಜನೆ ಜಾರಿ ಮಾಡುವುದಾಗಿ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲೂ ಸೇರಿಸಲಾಗಿತ್ತು.;
ವಿಧಾನ ಸಭಾ ಕಲಾಪ
ರಾಜ್ಯದ ಎಲ್ಲಾ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಟ್ಟಿರುವ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ವಿಧಾನಪರಿಷತ್ ಸಭಾನಾಯಕ ಎಸ್.ಎನ್. ಬೋಸರಾಜು ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರು ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರಿ ಎನ್‌ಪಿಎಸ್ ನೌಕರರಿಗೆ ಓಪಿಎಸ್ ಯೋಜನೆ ಜಾರಿ ಮಾಡಬೇಕು. ಓಪಿಎಸ್ ಕೊಡುವುದಾಗಿ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲೂ ಸೇರಿಸಲಾಗಿತ್ತು. ನಮ್ಮ ಸರ್ಕಾರ ಬಂದಾಗ ಓಪಿಎಸ್ ಜಾರಿ ಮಾಡುವುದಾಗಿ ಹೇಳಿದ್ದೆವು. ಸರ್ಕಾರ ಬಂದು 1.5 ವರ್ಷ ಆದರೂ ಯಾವುದೇ ನಿರ್ಧಾರ ಆಗಿಲ್ಲ. ಇದು ಸರಿಯಲ್ಲ. ಸರ್ಕಾರ ಸಮಿತಿ ಮಾಡಿದೆ. ಸಮಿತಿಯಿಂದ ನಮಗೇನು ಲಾಭವಿಲ್ಲ. ಓಪಿಎಸ್‌ಗಾಗಿ ಹೋರಾಟ ನಡೆಯುತ್ತಿದೆ. ಕೂಡಲೇ ಓಪಿಎಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೋಸರಾಜು, ಪ್ರಸ್ತುತ ರಾಜ್ಯದಲ್ಲಿ 2.86 ಲಕ್ಷ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೇರಿದ್ದಾರೆ. ಇವರನ್ನು ಹಳೇ ಪಿಂಚಣಿ ವ್ಯವಸ್ಥೆಗೆ ಪರಿವರ್ತಿಸಲು ಹಲವಾರು ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಿದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.