ಸಂವಿಧಾನ ವಿರೋಧಿ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಿ: ಜಿಲ್ಲಾಧಿಕಾರಿ, ಎಸ್ಪಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಸಂವಿಧಾನದ ಆಶಯಗಳ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಅಧ್ಯಯನ ಮಾಡಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ಧರಾಗಿದ್ದೀರಿ ಎಂದು ನಂಬಿದ್ದೇನೆ.;
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಸಂವಿಧಾನ ವಿರೋಧಿ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಿ: ಜಿಲ್ಲಾಧಿಕಾರಿ, ಎಸ್ಪಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ರಾಜ್ಯದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ (ಎಸ್ಪಿ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆ ಎತ್ತುತ್ತಿದ್ದು, ಅವರನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ರಾಜ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒಗಳು ತಮ್ಮ ಅಹಂ ಬದಿಗೊತ್ತಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕಾಗಿಯೇ ನೀವುಗಳು ಐಎಎಸ್ ಮಾಡಿರುವುದು, ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿ ಕುಂಠಿತಕ್ಕೆ ಸಿಎಂ ಅಸಮಾಧಾನ, ಕಠಿಣ ಕ್ರಮದ ಎಚ್ಚರಿಕೆ
ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳು ಮತ್ತು ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲವು ಇಲಾಖೆಗಳು ಶೇ.100ರಷ್ಟು ಪ್ರಗತಿ ತೋರಿಸದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. "ಇದನ್ನು ಸಹಿಸಲು ಸಾಧ್ಯವಿಲ್ಲ ಹಾಗೂ ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯವಾಗುತ್ತದೆ," ಎಂದು ಅವರು ಎಚ್ಚರಿಕೆ ನೀಡಿದರು.
1949 ಅಕ್ಟೋಬರ್ 10 ರಂದು ಸಂವಿಧಾನ ಜಾರಿ ಸಭೆಯಲ್ಲಿ ಇಂಡಿಯನ್ ಸಿವಿಲ್ ಸರ್ವೀಸ್ ಬೇಕಾ ಎಂದು ಚರ್ಚೆ ನಡೆಸಿ ಐಎಎಸ್ ಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಅಂದು ಗೃಹ ಸಚಿವ ವಲ್ಲಭಭಾಯಿ ಪಟೇಲರು, "ದೇಶವನ್ನು ನೈಜ ಸ್ವಾತಂತ್ರ್ಯ ಹೋರಾಟಗಳ ಆಶಯದಲ್ಲಿ ಮುನ್ನಡೆಸಲು ಐಎಎಸ್ ಸೇವೆ ಇರಬೇಕು," ಎಂದು ಹೇಳಿದ್ದರು. ಈ ನೈಜ ಕಾಳಜಿಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಪ್ರತಿಪಾದಿಸಿದರು.
ಸಂವಿಧಾನ ವಿರೋಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ವಲ್ಲಭಬಾಯಿ ಅವರ ಮಾತನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. "ನೀವೆಲ್ಲಾ ಸಂವಿಧಾನ ಅಧ್ಯಯನ ಮಾಡಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ಧರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ," ಎಂದು ಸಿಎಂ ಎಚ್ಚರಿಸಿದರು.
ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದರು.
ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿಗೆ ಆದ್ಯತೆ, ಜನಪರ ಧೋರಣೆಗೆ ಒತ್ತು
ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇವೆರಡಕ್ಕೂ ನೇರ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಅಭಿವೃದ್ಧಿ ಕುಂಠಿತವಾದಂತೆ. ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ನೇರ ಹೊಣೆ ಎಂದರು. ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ಸರ್ಕಾರ ತೆರಿಗೆ ಹಣದಲ್ಲಿ ಕೊಡುತ್ತದೆ. ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂದರು.
ದಕ್ಷ ಕಾರ್ಯನಿರ್ವಹಣೆಗೆ ಸೂಚನೆ
ಜಿಲ್ಲಾ ಮಟ್ಟದ ಶಾಂತಿ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರುತ್ತಾರೆ. ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿಭಂಗ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರಬಾರದು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ನಿಮಗೆ ಎಂದು ಸಿಎಂ ಪ್ರಶ್ನಿಸಿದರು. ಬಾಲ್ಯ ವಿವಾಹ ಆಗುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಏಕೆ ಬರುವುದಿಲ್ಲ? ನಿಮ್ಮ ಕೆಳಗಿನವರು ನಿಮಗೆ ವರದಿ ಮಾಡುವುದಿಲ್ಲವೇ? ಕೆಳಗಿನವರು ನಿಮಗೆ ಹೇಳದಿದ್ದರೆ ನಿಮಗೆ ದಕ್ಷತೆ ಇಲ್ಲ ಎಂದು ಅರ್ಥ. ನಿಮಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ, ನಿಮ್ಮ ಬಗ್ಗೆ ಅವರಿಗೆ ಭಯ ಇಲ್ಲ ಎಂದೇ ಅರ್ಥ ಎಂದು ತರಾಟೆಗೆ ತೆಗೆದುಕೊಂಡರು.
ಈ ವರ್ಷ 700 ಬಾಲ್ಯ ವಿವಾಹ ನಡೆದಿದೆ, ಬಾಲ್ಯದಲ್ಲೇ ತಾಯಂದಿರಾದ ಘಟನೆಗಳೂ ವರದಿಗಳಾಗಿವೆ. ಈ ಬಗ್ಗೆ ಹಲವು ಕಡೆ ಎಫ್ಐಆರ್ ಕೂಡ ದಾಖಲಾಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಸ್ವಾತಂತ್ರ್ಯ ಬಂದು ಇಷ್ಟ ವರ್ಷಗಳಾದರೂ 700 ಬಾಲ್ಯ ವಿವಾಹ ನಡೆಯುತ್ತಿದೆ ಎಂದರೆ ಹೇಗೆ? ಬಾಲ್ಯವಿವಾಹ ತಡೆಗೆ ಕಾಯ್ದೆ, ಕಾನೂನುಗಳಿವೆ. ಆದರೂ ಇದನ್ನು ಪರಿಣಾಮಕಾರಿಯಾಗಿ ಕೆಲವು ಕಡೆ ಬಳಸಿಲ್ಲ. ಇದು ತಪ್ಪಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಸಾರ್ವಜನಿಕರಿಗೆ ಲಭ್ಯವಿರುವ ಸಮಯ ಪ್ರಕಟಿಸಲು ನಿರ್ದೇಶನ
ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಬರುತ್ತಾರೆ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು ಎಂದು ಸಿಎಂ ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದರು.
ಕೆರೆ ಒತ್ತುವರಿ ತೆರವಿನಲ್ಲಿ ವಿಳಂಬ: ಸಿಎಂ ಗರಂ
ಎರಡು ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವು ಮಾಡದಿರುವುದನ್ನು ಗಮನಿಸಿ ಗರಂ ಆದ ಮುಖ್ಯಮಂತ್ರಿಗಳು, ಆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಭೆಯಲ್ಲೇ ಸೂಚನೆ ನೀಡಿದರು. ಒಂದೂ ಕೆರೆ ಒತ್ತುವರಿ ತೆರವುಗೊಳಿಸದ ಜಿಲ್ಲಾಧಿಕಾರಿ, ಸಿಇಓ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯ ವೇಳೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ಒಟ್ಟು 10,931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6,065 ಕೆರೆಗಳ ಒತ್ತುವರಿ ಮಾತ್ರ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು ಎಂದರು.