Naxal Free Karnataka |ನಕ್ಸಲ್‌ ರವಿ ಬಳಿಕ ಲಕ್ಷ್ಮಿ ಶರಣು; ಉಳಿದಿದೆಯೇ ಹಸಿರು ನೆಲದಲ್ಲಿ ʼಆ ಇಪ್ಪತ್ತು ಮಂದಿʼಯ ಕೆಂಪು ಅಧ್ಯಾಯ?

ನಕ್ಸಲ್‌ ರವಿ ಅಲಿಯಾಸ್‌ ರವೀಂದ್ರ, ಶನಿವಾರ ಶರಣಾಗಿದ್ದಾನೆ. ತೊಂಬಟ್ಟು ಲಕ್ಷ್ಮಿ ಎಂಬಾಕೆ ಭಾನುವಾರ ಉಡುಪಿಯಲ್ಲಿ ಶರಣಾಗಲು ವೇದಿಕೆ ಸಜ್ಜಾಗಿದೆ. ಆದರೆ ಪೊಲೀಸರ ಕಣ್ಣು ತಪ್ಪಿಸಿಕೊಂಡು ಇನ್ನೆಷ್ಟು ಮಂದಿ ಇದ್ದಾರೆ?;

Update: 2025-02-02 00:30 GMT

ಕರ್ನಾಟಕವನ್ನು ನಕ್ಸಲ್‌ ಮುಕ್ತ ಮಾಡುವ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು, ಕಳೆದ ತಿಂಗಳು ಶರಣಾದ ಗುಂಪಿನಿಂದ ಬೇರ್ಟಟ್ಟಿದ್ದ ಕೋಟೆಹೊಂಡ ರವಿ  ಅಲಿಯಾಸ್‌ ರವೀಂದ್ರ, ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿದ್ದಾನೆ. ನಕ್ಸಲರ ಶರಣಾಗತಿ ಮುಗಿಯಿತೆನ್ನುವಾಗಲೇ ತೊಂಬಟ್ಟು ಲಕ್ಷ್ಮಿ ಎಂಬಾಕೆ ಭಾನುವಾರ (ಇಂದು) ಉಡುಪಿಯಲ್ಲಿ ಶರಣಾಗಲು ವೇದಿಕೆ ಸಜ್ಜಾಗಿದೆ.

ಈಗಿರುವ ಮಾಹಿತಿ ಪ್ರಕಾರ ತೊಂಬಟ್ಟು ಲಕ್ಷ್ಮಿ ಕರ್ನಾಟಕ ಸಂಘಟನೆಯ ಕೊನೆಯ ಕೊಂಡಿ ಎಂದು ಹೇಳಲಾಗುತ್ತಿದೆ. ಆದರೆ ಇದನ್ನೂ ಅಷ್ಟು ಸುಲಭವಾಗಿ ನಂಬಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಪೊಲೀಸ್‌ ಪಟ್ಟಿಯಲ್ಲಿರುವ ನಕ್ಸಲರು ಮಾತ್ರ ಜನರಿಗೆ ಗೊತ್ತಿದೆ. ಆದರೆ ಪೊಲೀಸರ ಕಣ್ಣು ತಪ್ಪಿಸಿಕೊಂಡು ಸಂಘಟನೆಯಲ್ಲಿರುವ ಕೆಲವರು ಇರಬಹುದು ಎಂಬ ಶಂಕೆಯಂತೂ ಇಲಾಖೆಗೆ ಇದೆ.

ಕಾಡಂಚಿನ ಗ್ರಾಮಗಳ ಹಲವು ಹುಡುಗರು 20 ವರ್ಷಗಳಿಂದ ಯಾರ ಕಣ್ಣಿಗೂ ಬಿದ್ದಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಅವರು ಮೊದಲೇ ಸಂಘಟನೆ ಬಿಟ್ಟು ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೊ ಅಥವಾ ಎಲ್ಲಿದ್ದಾರೊ ಗೊತ್ತಿಲ್ಲ ಎನ್ನುತ್ತವೆ ಮೂಲಗಳು.

ತೊಂಬಟ್ಟು ಲಕ್ಷ್ಮಿ

ಯಾರು ಕೊನೆಯ ಕೊಂಡಿ?

ರವಿ ಶನಿವಾರ ಶರಣಾದ ಮೇಲೆ, ಭಾನುವಾರ (ಇಂದು) ಉಡುಪಿಯಲ್ಲಿ ಶರಣಾಗುತ್ತಿರುವ ತೊಂಬಟ್ಟು ಲಕ್ಷ್ಮಿ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಇದ್ದವರು. ಉಡುಪಿ ಜಿಲ್ಲೆಯ ತೊಂಬಟ್ಟು ಗ್ರಾಮದ ಈಕೆಯ ಮೇಲೆ 3 ಪ್ರಕರಣಗಳಿವೆ. ಈಕೆ ಆಂಧ್ರದಲ್ಲಿದ್ದರು. ಕೆಲ ತಿಂಗಳ ಹಿಂದೆ ಶರಣಾಗತಿ ಪ್ಯಾಕೇಜ್‌ಗೆ ಒಳಪಡುವ ಮಾತುಗಳು ಕೇಳಿಬಂದಿದ್ದವು.

ಈಕೆಯ ಪತಿ ಕೂಡಾ ನಕ್ಸಲ್‌ ಸಂಘಟನೆಯಲ್ಲಿದ್ದು, ಈಗಾಗಲೇ ಶರಣಾಗಿದ್ದಾರೆ. ಆಂಧ್ರದಲ್ಲಿ ಲಕ್ಷ್ಮಿ ಮೇಲೆ ಯಾವುದೇ ಪ್ರಕರಣ ಇಲ್ಲದ ಕಾರಣ ಅಲ್ಲಿ ಶರಣಾಗತಿ ಆಗಿಲ್ಲ. ರಾಜ್ಯದಲ್ಲಿ ಗಂಭೀರವಲ್ಲದ ಮೂರು ಪ್ರಕರಣಗಳಿದ್ದು, ಭಾನುವಾರ ಶರಣಾಗುತ್ತಿದ್ದಾರೆ.

ಕೋಟೆಹೊಂಡ ರವಿಗೆ ಶರಣಾಗುವುದೇ ಬೇಡವೇ ಎಂಬ ಗೊಂದಲವಿತ್ತು

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಕಿಗ್ಗಾ ಸಮೀಪದ ಕೋಟೆಹೊಂಡದ ವಾಸಿಯಾಗಿದ್ದ ರವಿ (44) ಕಳೆದ ಹದಿನೇಳು ವರ್ಷಗಳಿಂದ ನಕ್ಸಲ್‌ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ನಕ್ಸಲ್‌ ಸಂಘಟನೆ ಸಂಪರ್ಕಕ್ಕೆ ಬಂದಿದ್ದ ಈತ ಮುಂಡಗಾರು ಲತಾ ಮತ್ತು ವಿಕ್ರಂಗೌಡರ ತಂಡದೊಂದಿಗೆ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿ ಸಕ್ರಿಯನಾಗಿದ್ದ. ವಿಕ್ರಂ ಗೌಡನ ಎನ್‌ಕೌಂಟರ್‌ ಬಳಿಕ ವಿಚಲಿತನಾಗಿದ್ದ ರವಿ , ಕಳೆದ ತಿಂಗಳೇ ಶರಣಾಗಬೇಕಿತ್ತು. ಆದರೆ ಆತನಲ್ಲಿದ್ದ ಭಯ ಮತ್ತು ಶರಣಾಗತಿ ಪ್ರಕ್ರಿಯೆ ಮೇಲೆ ನಂಬಿಕೆ ಕಳೆದುಕೊಂಡು ಕೊನೇ ಕ್ಷಣದಲ್ಲಿ ಕಾಡಿನಲ್ಲಿಯೇ ತಲೆಮರೆಸಿಕೊಂಡಿದ್ದ.


ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯು ಅಂದಿನಿಂದಲೂ ನಿರಂತರವಾಗಿ ರವಿಯನ್ನು ಶರಣಾಗತಿ ಮಾಡಿಸುವ ಪ್ರಯತ್ನದಲ್ಲಿತ್ತು. ಇದರ ಭಾಗವಾಗಿ ರವಿ ಶನಿವಾರ ಕೊನೆಗೂ ಶರಣಾಗಿದ್ದಾನೆ. ಕಳೆದ ಒಂದು ತಿಂಗಳಿಂದ ಶರಣಾಗಬೇಕೆ, ಬೇಡವೇ ಎಂಬ ಗೊಂದಲದಲ್ಲಿದ್ದ ರವಿಗೆ ಶಾಂತಿಗಾಗಿ ನಾಗರೀಕ ಸಮಿತಿ ಸದಸ್ಯರು ತಿಳಿವಳಿಕೆ ಹೇಳಿದ ಮೇಲೆ ಮನಸು ಮಾಡಿದ್ದ. ಹಲವು ಬಾರಿ ಮನಸು ಬದಲಿಸಿದ್ದ ಕಾರಣ ಸಮಿತಿಗೂ ಆತನ ವಿಚಾರದಲ್ಲಿ ತಲೆಬೇನೆಯಾಗಿತ್ತು.

ಗುಪ್ತಚರ ತಂಡದ ಮಾಹಿತಿ

ಕಾಡಿನಲ್ಲಿ ಏಕಾಂಗಿಯಾಗಿ ಅಲೆಯುತಿದ್ದ ರವಿ ಯಾವ ಕ್ಷಣದಲ್ಲಾದರೂ ಕೋಟೆಹೊಂಡಕ್ಕೆ ಬರುತ್ತಾನೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರಿಗೆ ನೀಡಿದ್ದರು. ಕಳೆದ ವಾರ ಸಮಿತಿಯ ಕೆ.ಪಿ.ಶ್ರೀಪಾಲ್‌ ಅವರು ಕೋಟೆಹೊಂಡ ಮತ್ತು ಅವರ ಬಂಧುಗಳಿರುವ ಗ್ರಾಮಗಳಿಗೆ ಭೇಟಿ ನೀಡಿ ಸಮನ್ವಯ ಸಾಧಿಸಿದ್ದರು. ಅದರಂತೆ ಶುಕ್ರವಾರ ತಡರಾತ್ರಿ ರವಿ ಅವರ ಸಂಬಂಧಿಕರ ಮನೆಗೆ ಬಂದಿದ್ದ.

ತಕ್ಷಣ ಆ ಕುಟುಂಬದವರು ಶ್ರೀಪಾಲ್‌ ಅವರನ್ನು ಸಂಪರ್ಕಿಸಿದ್ದರು. ಬೆಂಗಳೂರಿನಲ್ಲಿರುವ ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್.ಅಶೋಕ್‌, ವಿ.ಎ. ಶ್ರೀಧರ್, ನಗರಗೆರೆ ರಮೇಶ್, ಗೌಸ್ ಮೊಹಿಯುದ್ದೀನ್ ತಡರಾತ್ರಿಯೇ ಶೃಂಗೇರಿಗೆ ಬಂದಿದ್ದರು. ಈ ನಡುವೆ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನೂ ಸಂಪರ್ಕಿಸಿ ರವಿಯನ್ನು ಶೃಂಗೇರಿ ತಾಲೂಕು ನೆಮ್ಮಾರಿನ ಪ್ರವಾಸಿ ಮಂದಿರಕ್ಕೆ ಕರೆತರಲಾಗಿತ್ತು. ಶನಿವಾರ ಬೆಳಗ್ಗೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ರವೀಂದ್ರ ಅವರು 'ಎ' ಕೆಟಗರಿಯ ನಕ್ಸಲ್ ಆಗಿದ್ದಾರೆ. ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಅವರಿಗೆ ₹7.50 ಲಕ್ಷ ಸರ್ಕಾರದಿಂದ ಬರಲಿದೆ. ಸರ್ಕಾರದ ಅನುಮತಿ ಪಡೆದು ಮೊದಲ ಹಂತದಲ್ಲಿ ₹3 ಲಕ್ಷ ನೀಡಲಾಗುವುದು. ಬಾಕಿ ಮೊತ್ತವನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು. ಅವರು ಬಯಸಿದರೆ ಕೌಶಲ ತರಬೇತಿ ನೀಡಲಾಗುವುದು. ಇವರ ಮೇಲೆ ದಾಖಲಾಗಿರುವ ಮೊಕದ್ದಮೆಗಳ ಸಂಬಂಧ ಕಾನೂನು ಪ್ರಕ್ರಿಯೆ ನಡೆಯಲಿದೆ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಶರಣಾದ ರವಿ  ಮಾತನಾಡಿ, ನಮ್ಮೂರಿನಲ್ಲಿ ಜಮೀನಿಲ್ಲದವರಿಗೆ ಹಕ್ಕು ಪತ್ರ ಕೊಡಬೇಕು. ಊರಿನ ರಸ್ತೆ ಅಭಿವೃದ್ಧಿಯಾಗಬೇಕು. ಕಾಡಿನ ಉತ್ಪನ್ನ ತರಲು ಅವಕಾಶ ನೀಡಬೇಕೆಂಬ ಬೇಡಿಕೆ ನನ್ನದು. ಸ್ವಯಂ ಪ್ರೇರಣೆಯಿಂದ ಶರಣಾಗಿದ್ದೇನೆ ಎಂದು ಹೇಳಿದ್ದಾನೆ.

ಸಶಸ್ತ್ರ ಹೋರಾಟ ಮುಕ್ತ

ಕರ್ನಾಟಕ ಈಗ ನಕ್ಸಲರ ಸಶಸ್ತ್ರ ಹೊರಾಟದಿಂದ ಮುಕ್ತವಾಗಿದೆ. ನಕ್ಸಲ್‌ ಸಂಘಟನೆಯ ಬೇಡಿಕೆಗಳು, ಈ ನೆಲದ ಸಾಮಾನ್ಯ ಜನರ ಬೇಡಿಕೆಗಳೂ ಆಗಿವೆ. ಮಲೆನಾಡಿನ ರೈತರು, ಭೂ ರಹಿತರ, ಕೂಲಿಕಾರ್ಮಿಕರ, ಆದಿವಾಸಿಗಳು ಸಮಸ್ಯೆಗಳು ಹಾಗೇ ಇವೆ. ಇವುಗಳನ್ನೇ ಮುಂದಿಟ್ಟುಕೊಂಡು ಸಶಸ್ತ್ರ ಹೋರಾಟಕ್ಕೆ ಅವರು ಮುಂದಾಗಿದ್ದರು. ಆ ಮಾದರಿ ಹೋರಾಟಕ್ಕೆ ಇಲ್ಲಿ ಬೆಂಬಲ ಸಿಗುವುದಿಲ್ಲ ಎಂಬ ಅರಿವಾಗಿದೆ. ಈಗ ರಾಜ್ಯ ಸಶಸ್ತ್ರ ಹೋರಾಟದಿಂದ ಮುಕ್ತವಾಗಿದೆ. ಪ್ರಜಾಸತ್ತಾತ್ಮಕ ನೆಲೆಯ ಹೋರಾಟಗಳು ಸಂವಿಧಾನದ ಆಶಯದಂತೆ ನಡೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಸರ್ಕಾರ, ಪೊಲೀಸರು, ಸಮಾಜಮುಖಿ ಹೋರಾಟಗಾರರು ಶಾಂತಿಗಾಗಿ ನಾಗರೀಕ ಸಮಿತಿ ಸದಸ್ಯರು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹಾದಿಯಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಲೇಬೇಕು ಮತ್ತು ಕೃತಜ್ಞತೆ ಹೇಳಬೇಕು ಎಂದು ಕೆ.ಎಲ್.ಅಶೋಕ್‌ ದ ಫೆಡರಲ್‌ ಕರ್ನಾಟಕದೊಂದಿಗೆ ಸಂತಸ ಹಂಚಿಕೊಂಡರು.

ಆತಂಕವಿತ್ತು

ಕೋಟೆಗುಂಡಿ ರವಿ ಆಲಿಯಾಸ್‌ ರವೀಂದ್ರನ ಬಗ್ಗೆ ನಮಗೆ ಆತಂಕವಿತ್ತು ಎನ್ನುತ್ತಾರೆ ಕೆ.ಪಿ.ಶ್ರೀಪಾಲ್‌. ಕಳೆದ ತಿಂಗಳು ಶರಣಾದ ನಕ್ಸಲರ ತಂಡದಲ್ಲಿದ್ದ ಈತ, ಒಂದು ತಿಂಗಳಿಂದ ಏಕಾಂಗಿಯಾಗಿದ್ದ. ಸ್ಥಳೀಯನೇ ಆದರೂ ಸಂಘಟನೆಗೆ ಹೋದ ಬಳಿಕ ಆತನನ್ನು ಯಾರೂ ಸೇರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಶರಣಾಗಲೂ ಭಯಪಟ್ಟು ಕಾಡಲ್ಲಿ ಅಲೆಯುತ್ತಿದ್ದ. ನಾಗರೀಕ ಪ್ರಪಂಚದೊಂದಿಗೆ ಸಂಪರ್ಕ ಇಲ್ಲದೆ, ಮಾನಸಿಕ ಖಿನ್ನತೆಗೊಳಗಾದರೆ ಎಂಬ ಆತಂಕ ನಮಗಿತ್ತು. ಶರಣಾದರೆ ಸುರಕ್ಷಿತವಾಗಿರುತ್ತಾನೆ ಎಂದು ಪ್ರಯತ್ನ ಪಟ್ಟೆವು. ಈಗ ಆತನನ್ನೂ ಮುಖ್ಯವಾಹಿನಿಗೆ ತರುವಲ್ಲಿ ಯಶ ಕಂಡಿದ್ದೇವೆ ಎಂದು ಶ್ರೀಪಾಲ್‌ ನಿರಾಳ ಭಾವ ಹೊರಹಾಕಿದರು.

Tags:    

Similar News