ರಾಜ್ಯದ ಶೇ. 99 ರಷ್ಟು ಮಕ್ಕಳಿಗೆ ಮೊಬೈಲ್ ಗೀಳು ಆಘಾತಕಾರಿ: ಸಭಾಪತಿ ಬಸವರಾಜ ಹೊರಟ್ಟಿ
ಹೆಚ್ಚುತ್ತಿರುವ ಆನ್ಲೈನ್ ಮತ್ತು ಮೊಬೈಲ್ ಬಳಕೆ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದರಿಂದ ಮಕ್ಕಳು ಹೆಚ್ಚಾಗಿ ಆನ್ಲೈನ್ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ.;
ಮೊಬೈಲ್ ಬಳಸುತ್ತಿರುವ ಮಕ್ಕಳು(ಸಾಂದರ್ಭಿಕ ಚಿತ್ರ)
ರಾಜ್ಯದ ಶೇ.99 ರಷ್ಟು ಮಕ್ಕಳಿಗೆ ಮೊಬೈಲ್ ಗೀಳಿರುವುದು ಆಘಾತಕಾರಿಯಾಗಿದೆ. ಆನ್ ಲೈನ್ ಮತ್ತು ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ತಡೆಗೆ ಸೂಕ್ತ ನಿಯಮ ರೂಪಿಸಲು ವಿಧಾನಪರಿಷತ್ನಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ವಿಕಾಸ ಸೌಧದಲ್ಲಿ ವಿಶೇಷ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಆನ್ಲೈನ್ ಮತ್ತು ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿದೆ. ಅದಕ್ಕಾಗಿ ಮುಂದಿನ ಅಧಿವೇಶನದಲ್ಲಿ ವಿಧಾನಪರಿಷತ್ನಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಿರುವ 'ರಾಜ್ಯದಲ್ಲಿ ಮಕ್ಕಳ ಆನ್ಲೈನ್ ಅಪಾಯಗಳ ಕುರಿತು ವಿಶೇಷ ಅಧ್ಯಯನ' ವರದಿಯಲ್ಲಿ ಮಕ್ಕಳ ಮೇಲೆ ಮೊಬೈಲ್ ಪರಿಣಾಮದ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಹೆಚ್ಚುತ್ತಿರುವ ಆನ್ಲೈನ್ ಮತ್ತು ಮೊಬೈಲ್ ಬಳಕೆ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದರಿಂದ ಮಕ್ಕಳು ಹೆಚ್ಚಾಗಿ ಆನ್ಲೈನ್ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ.
5 ಜಿಲ್ಲೆಗಳಲ್ಲಿ ಅಧ್ಯಯನ
ಬೆಂಗಳೂರು, ಬೆಳಗಾವಿ, ಚಾಮರಾಜ ನಗರ, ಚಿಕ್ಕಮಗಳೂರು, ರಾಯಚೂರು ಜಿಲ್ಲೆಗಳಲ್ಲಿನ 8ರಿಂದ 18 ವರ್ಷದ 900 ಕ್ಕೂ ಹೆಚ್ಚಿನ ಮಕ್ಕಳ ಮೊಬೈಲ್ ಬಳಕೆ ಕುರಿತಂತೆ ಅಧ್ಯಯನ ನಡೆಸಲಾಗಿದೆ. ಆ ಪ್ರಕಾರ 8ರಿಂದ11 ವರ್ಷದ ಮಕ್ಕಳು ಶೇ. 87ರಷ್ಟು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. 15ರಿಂದ 18 ವರ್ಷ ವಯಸ್ಸಿನ ಶೇ. 99ರಷ್ಟು ಹುಡುಗರು, ಶೇ.100ರಷ್ಟು ಹುಡುಗಿಯರು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ.
ಶೇ.42 ರಷ್ಟು ಆನ್ಲೈನ್ ಲೈಂಗಿಕ ದೌರ್ಜನ್ಯ
ಪೋಷಕರು ತಮ್ಮ ಮಗು ಆನ್ಲೈನ್ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ತುತ್ತಾಗಿದೆ ಎಂದು ತಿಳಿಸಿದ್ದಾರೆ. ಶೇ.43ರಷ್ಟು ಆನ್ಲೈನ್ ಬೆದರಿಕೆ, ಶೇ. 32 ಲೈಂಗಿನ ಗ್ರೂಮಿಂಗ್, ಶೇ. 30 ಲೈಂಗಿಕವಾಗಿ ವಸ್ತುಗಳ ವಿನಿಮಯದಂತಹ ಪ್ರಕರಣ ನಡೆದಿದೆ. ದಬ್ಬಾಳಿಕೆ ಕುರಿತಂತೆ ಶೇ. 46ರಷ್ಟು ಪ್ರಕರಣಗಳಲ್ಲಿ ಮಕ್ಕಳೇ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಉಳಿದಂತೆ ಆನ್ಲೈನ್ ಚಟುವಟಿಕೆ ಮೇಲೆ ನಿಗಾವಹಿಸಿ ಶೇ. 27 ಪ್ರಕರಣ, ಅಸ್ವಾಭಾವಿಕ ನಡವಳಿಕೆಯಿಂದ ಶೇ.18ರಷ್ಟು ಹಾಗೂ ಶೇ. 9ರಷ್ಟು ಪ್ರಕರಣಗಳು ಮಗು ಹೇಳಿದ ಮೇಲೆ ಪೋಷಕರಿಗೆ ತಿಳಿದಿದೆ.
ಶೇ. 97 ಮಕ್ಕಳಿಂದ ಯೂಟ್ಯೂಬ್ ಬಳಕೆ
ಅಧ್ಯಯನದ ಪ್ರಕಾರ 12ರಿಂದ 14 ವರ್ಷದ ಶೇ. 97ರಷ್ಟು ಮಕ್ಕಳು ಯೂಟ್ಯೂಬ್ ಬಳಕೆ ಮಾಡುತ್ತಿದ್ದಾರೆ. ಉಳಿದಂತೆ ಶೇ. 92ರಷ್ಟು ಮಕ್ಕಳು ವಾಟ್ಸ್ ಆ್ಯಪ್, ಶೇ. 73ರಷ್ಟು ಮಕ್ಕಳು ಸರ್ಚ್ ಎಂಜಿನ್ ಬಳಸುತ್ತಿದ್ದಾರೆ. 15ರಿಂದ 18 ವರ್ಷದ ಶೇ. 25 ಮಕ್ಕಳು ದಿನದಲ್ಲಿ ಒಂದು ಗಂಟೆಗೂ ಹೆಚ್ಚಿನ ಸಮಯ ಮೊಬೈಲ್ ಬಳಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮೊಬೈಲ್ ಬಳಕೆ
ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿನ ಮಕ್ಕಳ ಅಧ್ಯಯನ ನಡೆಸಲಾಗಿದ್ದು. ಅದರಲ್ಲಿ ಶೇ. 97ರಷ್ಟು ಗ್ರಾಮೀಣ ಭಾಗದ ಮಕ್ಕಳು ಮೊಬೈಲ್, ಲ್ಯಾಪ್ ಟಾಪ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ನಗರ ಪ್ರದೇಶದ ಶೇ. 93ರಷ್ಟು ಮಕ್ಕಳು ಮಾತ್ರ ಮೊಬೈಲ್, ಲ್ಯಾಪ್ಟಾಪ್ ಬಳಸುತ್ತಿದ್ದಾರೆ. ಒಟ್ಟಾರೆ ಮಕ್ಕಳ ಪೈಕಿ 8ರಿಂದ 11 ವರ್ಷ ವಯಸ್ಸಿನ ಶೇ. 96 ಹಾಗೂ 15 ರಿಂದ18 ವಯಸ್ಸಿನ ಮಕ್ಕಳಲ್ಲಿ ಶೇ. 71 ಮಕ್ಕಳು ಮೊಬೈಲ್, ಲ್ಯಾಪ್ಟಾಪ್ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.