ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಕೇಂದ್ರದಿಂದ ಸಿಗದ ಒಪ್ಪಿಗೆ: ಯೋಜನೆ ಇನ್ನಷ್ಟು ವಿಳಂಬ

ಸಿವಿಲ್‌ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರವು 2024 ರ ಡಿಸೆಂಬರ್‌ 6 ರಂದು ಅನುಮತಿ ನೀಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಇದರಿಂದ ಮತ್ತಷ್ಟು ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;

Update: 2025-06-09 06:20 GMT

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ಕೆಂಪು ಮಾರ್ಗ (ಸರ್ಜಾಪುರ - ಹೆಬ್ಬಾಳ) 2030ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ವಿರಳವಾಗಿದೆ. ಈ ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಆರು ತಿಂಗಳು ಕಳೆದಿದ್ದರೂ, ಕೇಂದ್ರ ಸರ್ಕಾರದಿಂದ ಇನ್ನೂ ಗ್ರೀನ್ ಸಿಗ್ನಲ್ ದೊರೆತಿಲ್ಲ. ಅಷ್ಟೇ ಅಲ್ಲದೆ, ಯೋಜನೆಯ ವೆಚ್ಚ ಏಕೆ ಇಷ್ಟು ಅಧಿಕವಾಗಿದೆ ಎಂದು ವಿವರಣೆ ನೀಡುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್‌) ಸೂಚಿಸಿದೆ.

ಕೇಂದ್ರ ಸರ್ಕಾರ ಹಾಗೂ ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮತ್ತು ಸಿವಿಲ್ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರವು 2024ರ ಡಿಸೆಂಬರ್ 6ರಂದು ಅನುಮತಿ ನೀಡಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಆರು ತಿಂಗಳೊಳಗೆ ಕೇಂದ್ರದಿಂದ ಒಪ್ಪಿಗೆ ಸಿಗುವ ನಿರೀಕ್ಷೆಯಿತ್ತು. ಆದರೆ, ಯೋಜನಾ ವೆಚ್ಚವು ಕೇಂದ್ರದ ನಿಗದಿತ ಮಾನದಂಡಕ್ಕಿಂತ ಹೆಚ್ಚಿರುವುದರಿಂದ, ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ಬಂದಿದೆ. ಇದು ಯೋಜನೆಯ ಅನುಷ್ಠಾನವನ್ನು ಮತ್ತಷ್ಟು ತಡಗೊಳಿಸಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೃಹತ್ ಯೋಜನಾ ವೆಚ್ಚ ಮತ್ತು ಮಾರ್ಗದ ವಿವರ

ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಕೆಂಪು ಮಾರ್ಗವನ್ನು 28,405 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಈ ಮಾರ್ಗದಲ್ಲಿ 22.14 ಕಿ.ಮೀ. ಎತ್ತರಿಸಿದ ಮಾರ್ಗ ಹಾಗೂ 14.45 ಕಿ.ಮೀ. ಸುರಂಗ ಮಾರ್ಗ ಒಳಗೊಂಡಿದೆ. ಎತ್ತರಿಸಿದ ಮಾರ್ಗದಲ್ಲಿ 17 ಮೆಟ್ರೋ ನಿಲ್ದಾಣಗಳಿದ್ದರೆ, ಸುರಂಗ ಮಾರ್ಗದಲ್ಲಿ 11 ಮೆಟ್ರೋ ನಿಲ್ದಾಣಗಳು ಇರಲಿವೆ. ಅಂದಾಜಿನ ಪ್ರಕಾರ, ಪ್ರತಿ ಕಿ.ಮೀ.ಗೆ 776.3 ಕೋಟಿ ರೂ. ವೆಚ್ಚವಾಗಲಿದೆ.

ಪ್ರಮುಖ ನಿಲ್ದಾಣಗಳು ಮತ್ತು ವೆಚ್ಚದ ಹೆಚ್ಚಳಕ್ಕೆ ಕಾರಣ

ಈ ಮಾರ್ಗದಲ್ಲಿ ಹೆಬ್ಬಾಳ, ಗಂಗಾನಗರ, ಪಶು ವೈದ್ಯಕೀಯ ಕಾಲೇಜು, ಮೇಕ್ರಿ ಸರ್ಕಲ್, ಪ್ಯಾಲೇಸ್ ಗುಟ್ಟಹಳ್ಳಿ, ಗಾಲ್ಫ್ ಕೋರ್ಸ್, ಬಸವೇಶ್ವರ ಸರ್ಕಲ್, ಕೆ.ಆರ್. ಸರ್ಕಲ್, ಟೌನ್ ಹಾಲ್, ಶಾಂತಿ ನಗರ, ನಿಮ್ಹಾನ್ಸ್, ಡೇರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡ್ರಹಳ್ಳಿ, ದೊಡ್ಡಕನ್ನೆಲಿ, ಕಾರ್ಮೆಲಾರಂ, ಅಂಬೇಡ್ಕರ್ ನಗರ, ಕೊಡತಿ ಗೇಟ್, ಮುತ್ತಾನಲ್ಲೂರು ಕ್ರಾಸ್, ದೊಮ್ಮಸಂದ್ರ, ಸೋಂಪುರ, ಕಾಡ ಅಗ್ರಹಾರ ರಸ್ತೆ ಹಾಗೂ ಸರ್ಜಾಪುರ ನಿಲ್ದಾಣಗಳನ್ನು ಗುರುತಿಸಲಾಗಿದೆ.

ನಗರದೊಳಗೆ 11 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಿಸಲು ಹೆಚ್ಚು ವೆಚ್ಚವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿವರಿಸಿದ್ದಾರೆ. ನಿರ್ದಿಷ್ಟವಾಗಿ, ಪಶು ವೈದ್ಯಕೀಯ ಕಾಲೇಜಿನಿಂದ ಕೋರಮಂಗಲದ 3ನೇ ಬ್ಲಾಕ್‌ ವರೆಗೂ ಸುರಂಗ ನಿರ್ಮಾಣವಾಗಲಿದೆ. ಭೂ ಸ್ವಾಧೀನ, ಮಾರ್ಗ ರಚನೆ, ಹಳಿ ಜೋಡಣೆ, ನಿಲ್ದಾಣ ಕಟ್ಟಡಗಳ ನಿರ್ಮಾಣ, ವಿದ್ಯುತ್ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್, ದೂರಸಂಪರ್ಕ, ಡಿಪೋಗಳು, ರೈಲು ಕೋಚ್‌ಗಳ ಪೂರೈಕೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರದಿಂದ ಸ್ಪಷ್ಟೀಕರಣ ಕೇಳಿರುವ ಕಾರಣ, ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾಮಗಾರಿ ಆರಂಭಗೊಳ್ಳಲು ಇನ್ನಷ್ಟು ಸಮಯ ಹಿಡಿಯಲಿದೆ ಎನ್ನಲಾಗಿದೆ. 

Tags:    

Similar News