ಕೋಮು ಗಲಭೆ | ಕರಾವಳಿ ಜನರಿಗೆ ಭಾವನಾತ್ಮಕ ಪತ್ರ ಬರೆದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌

ಇದು ದ್ವೇಷದಿಂದ ಪ್ರತಿಕ್ರಿಯಿಸುವ ಸಮಯವಲ್ಲ. ಶಾಂತಿ, ಘನತೆ ಮತ್ತು ಪ್ರತಿಯೊಂದು ಧರ್ಮಕ್ಕೆ ಗೌರವ ನೀಡುವ ನಮ್ಮ ನೈತಿಕ ಮೌಲ್ಯಗಳೊಂದಿಗೆ ದೃಢವಾಗಿ ನಿಲ್ಲುವ ಸಮಯವಾಗಿದೆ ಎಂದು ಯು.ಟಿ. ಖಾದರ್‌ ಅವರು ಪತ್ರದಲ್ಲಿ ಬರೆದಿದ್ದಾರೆ.;

Update: 2025-06-11 14:59 GMT

ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌

ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಗಲಭೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕದಡಿದೆ. ದ್ವೇಷ ಭಾಷಣ, ಮತೀಯ ಗಲಭೆಗಳು ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅವಸಾನ ಹೊಂದುತ್ತಿವೆ. ಇತ್ತೀಚೆಗೆ ನಡೆದ ಎರಡು ಕೊಲೆ ಪ್ರಕರಣಗಳಿಂದ ಕರಾವಳಿಯಲ್ಲಿ ಕೋಮು ಸಾಮರಸ್ಯ ಹಾಳಾಗಿದೆ. 

ಕೆಲ ವರ್ಷಗಳ ಹಿಂದೆ ನಡೆದಿದ್ದ ಮಸೂದ್‌, ಪ್ರವೀಣ್‌ ನೆಟ್ಟಾರು, ಪಾಝೀಲ್‌, ಆಶ್ರಫ್‌ ಕೊಲೆಗಳ ಬಳಿಕ ಈಗ ಸುಹಾಸ್‌ ಶೆಟ್ಟಿ, ಅಬ್ದುಲ್‌ ರಹೀಂ ಹತ್ಯೆಯಿಂದ ಕರಾವಳಿ ಉದ್ವಿಗ್ನವಾಗಿದೆ. ಇಂತಹ ಮತೀಯ ಸಂಘರ್ಷಗಳಿಗೆ ಕೊನೆ ಹಾಡುವಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಜನರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.   

ಪತ್ರದ ಸಾರಾಂಶ ಹೀಗಿದೆ 

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೆಲವು ಘಟನೆಗಳು ಪ್ರತಿಯೊಬ್ಬರಿಗೂ ನೋವು ಉಂಟು ಮಾಡಿವೆ. ಹಿಂಸಾಚಾರ, ದ್ವೇಷ ಭಾಷಣ ಮತ್ತು ಸಮುದಾಯಗಳ ನಡುವಿನ ಉದ್ವಿಗ್ನತೆಯು ಆಂತರಿಕವಾಗಿ ತೀವ್ರ ಅಶಾಂತಿ, ಆತಂಕ ತಂದಿವೆ. ನಾನು ಈ ಕ್ಷೇತ್ರದ ಜನಪ್ರತಿನಿಧಿಯಾಗಿ, ವಿಧಾನಸಭಾಧ್ಯಕ್ಷರಾಗಿ, ಒಬ್ಬ ರಾಜಕಾರಣಿಯಾಗಿ ಮಾತ್ರವಲ್ಲದೇ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಜಿಲ್ಲೆಯ ಬಗ್ಗೆ ನಿಮ್ಮಷ್ಟೇ ಪ್ರೀತಿ, ಕಾಳಜಿ ವಹಿಸಿದ್ದು, ನಿಮ್ಮೊಂದಿಗೆ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. 

ಸಾಮರಸ್ಯ ಕದಡಲು ಅವಕಾಶ ಕೊಡಬೇಡಿ 

ಜಿಲ್ಲೆಯು ಜನರ ಪರಸ್ಪರ ನಂಬಿಕೆ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ನಿರ್ಮಿತವಾಗಿದೆ. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ತಲೆಮಾರುಗಳಿಂದ ಪ್ರೀತಿ ವಿಶ್ವಾಸದೊಂದಿಗೆ ಜೊತೆಯಾಗಿ ಬದುಕುತ್ತಿದ್ದೇವೆ. ಒಂದೇ ಶಾಲೆಯಲ್ಲಿ ಓದಿದ್ದೇವೆ, ಒಂದೇ ಮಾರುಕಟ್ಟೆಯಲ್ಲಿ ಕೆಲಸ ಮಾಡಿದ್ದೇವೆ, ಒಟ್ಟಿಗೆ ಹಬ್ಬಗಳನ್ನು ಆಚರಿಸಿದ್ದೇವೆ. ಇಂತಹ ಸಾಮರಸ್ಯದ ಜಿಲ್ಲೆಯನ್ನು ನೋಡಿ ಬೆಳೆದಿರುವ ನಮಗೆ, ಅದು ನಮ್ಮ ಕೈತಪ್ಪುತ್ತಿರುವುದು ಸಹಿಸಲು ಅಸಾಧ್ಯವಾಗಿದೆ. ಇದಕ್ಕೆ ನಾವ್ಯಾರೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. 

ವದಂತಿಗಳಿಗೆ ಕಿವಿಗೊಡಬೇಡಿ

ಈಗ ನಾವು ಒಂದು ಅತ್ಯಂತ ಸೂಕ್ಷ್ಮವಾದ ಕಾಲಘಟ್ಟದಲ್ಲಿದ್ದೇವೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳು ವದಂತಿ, ದ್ವೇಷಭರಿತ ಹೇಳಿಕೆಗಳನ್ನು ವೇಗವಾಗಿ ಹರಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಪರಿಸ್ಥಿತಿ ನಿರ್ಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟವಾಗಿ ಹೇಳಬಯಸುತ್ತೇನೆ, ಇದು ಕೋಪದಿಂದ, ಭಯದಿಂದ ಅಥವಾ ದ್ವೇಷದಿಂದ ಪ್ರತಿಕ್ರಿಯಿಸುವ ಸಮಯವಲ್ಲ. ಇದು ಶಾಂತಿ, ಘನತೆ ಮತ್ತು ಪ್ರತಿಯೊಂದು ಧರ್ಮಕ್ಕೆ ಗೌರವ ನೀಡುವ ನಮ್ಮ ನೈತಿಕ ಮೌಲ್ಯಗಳೊಂದಿಗೆ ದೃಢವಾಗಿ ನಿಲ್ಲುವ ಸಮಯವಾಗಿದೆ ಎಂದು ಯು.ಟಿ. ಖಾದರ್‌ ಅವರು ಸಲಹೆ ನೀಡಿದ್ದಾರೆ.

ಕಠಿಣ ಕ್ರಮಕ್ಕೆ ಸೂಚನೆ 

ನಾನು ಈಗಾಗಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ. ದ್ವೇಷವನ್ನು ಹರಡುವ ಅಥವಾ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳು ಯಾರೇ ಆಗಿರಲಿ, ಅವರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆ ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಏನೇ ಇರಲಿ, ಇವೆಲ್ಲವನ್ನೂ ಮೀರಿ, ನಾವು ಒಗ್ಗಟ್ಟಿನಿಂದ, ತಾಳ್ಮೆಯಿಂದ, ಪರಸ್ಪರ ಪ್ರೀತಿ ವಿಶ್ವಾಸ, ಕರುಣೆ ಮತ್ತು ಶಾಂತಿಯಿಂದ ಇರಬೇಕಾದ ಸಮಯ ಇದಾಗಿದೆ ಎಂದು ಹೇಳಿದ್ದಾರೆ. 

ಶಾಂತಿ ಪುನರ್‌ ಸ್ಥಾಪನೆಗೆ ಒತ್ತು

ನಾನು ಎಲ್ಲ ಧರ್ಮಗಳ ಧಾರ್ಮಿಕ ನಾಯಕರೊಂದಿಗೆ ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅರ್ಥಪೂರ್ಣ ಮಾತುಕತೆಯ ಮೂಲಕ ಸಮಾಜದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುವ ಬದಲು, ಶಾಂತಿಯತ್ತ ಮುನ್ನಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರಾವಳಿ ಜನತೆಗೆ ಮನವಿ ಮಾಡಿದ್ದಾರೆ.

ಮನಸುಗಳು ಕುರುಡಾಗಿವೆ

ಇಂದು ಎಲ್ಲರ ಹೃದಯಗಳು ನೋವಿನಿಂದ ತುಂಬಿವೆ, ಮನಸ್ಸುಗಳು ಕೋಪದಿಂದ ಕುರುಡಾಗಿವೆ. ಹೇಗೆ ಕುದಿಯುವ ನೀರಿನಲ್ಲಿ ಪ್ರತಿಬಿಂಬ ಕಾಣುವುದಿಲ್ಲವೋ ಹಾಗೆ ಮನಸ್ಸು ಉದ್ವಿಗ್ನವಾಗಿರುವಾಗ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರಿ ತಪ್ಪುಗಳ ವಿಶ್ಲೇಷಣೆಯು ಅಸಾಧ್ಯ. ಆದ್ದರಿಂದ ನಾವು ತಾಳ್ಮೆಯಿಂದ, ಜವಾಬ್ದಾರಿಯುತವಾಗಿ ಭವಿಷ್ಯದ, ಸಾಮರಸ್ಯ ಸಮಾಜದ ಉಳಿವಿಗಾಗಿ ಗಂಭೀರ ಚಿಂತನೆ ಹಾಗೂ ವಿಶ್ಲೇಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ. 

ಒಗ್ಗಟ್ಟು ನಮ್ಮ ಶಕ್ತಿ

ನನ್ನ ಜಿಲ್ಲೆಯ ಪ್ರೀತಿಯ ಜನತೆಗೆ ನಾನು ಹೇಳುವುದಿಷ್ಟೇ, ಮಾನವೀಯತೆಯ ಎದುರು ದ್ವೇಷವು ವಿಜೃಂಭಿಸಲು ನಾವು ಅವಕಾಶ ನೀಡಬಾರದು. ಹಿಂಸೆಯು ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸಲು, ನಿರ್ಧರಿಸಲು ಬಿಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಈ ಸಂಕಲ್ಪದಲ್ಲಿ ನಾವೆಲ್ಲರೂ ಜತೆಯಾಗಿದ್ದೇವೆ. ಒಗ್ಗಟ್ಟು ನಮ್ಮ ಶಕ್ತಿ, ಸಹಿಷ್ಣುತೆ ನಮ್ಮ ಮೌಲ್ಯ, ಮತ್ತು ಶಾಂತಿ ನಮ್ಮ ಗುರಿ, ಈ ಮೌಲ್ಯಗಳ ಜತೆಗೆ ನಾವು ಧೈರ್ಯದಿಂದ ಮುಂದೆ ಸಾಗೋಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

Tags:    

Similar News