ಪ್ರವಾಹ ತಡೆಗೆ ಕ್ರಿಯಾಯೋಜನೆ ರೂಪಿಸಿ ಕೆಲಸ ನಿರ್ವಹಿಸಿ, ಬಿಬಿಎಂಪಿಗೆ ಲೋಕಾಯುಕ್ತ ಎಚ್ಚರಿಕೆ
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ನೀವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಹೇಗೆ? ಮಳೆಯಿಂದ ಉಂಟಾಗುವ ಪ್ರವಾಹ ತಡೆಗೆ ಶೀಘ್ರವೇ ಕ್ರಿಯಾಯೋಜನೆ ರೂಪಿಸಿ. ಅದರಂತೆ ನೀವು ಕೆಲಸ ಮಾಡುತ್ತಿರೋ, ಇಲ್ಲವೋ ಎಂದು ಖಾಸಗಿ ಏಜನ್ಸಿಯನ್ನು ನೇಮಿಸಿ ಪರಿಶೀಲನೆ ನಡೆಸುತ್ತೇವೆ.;
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್
ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡು, ಮರಗಳು ರಸ್ತೆಗೆ ಬಿದ್ದು ಸಾರ್ವಜನಿಕರು ಪರದಾಡಿದ್ದರು. ಈ ಹಿನ್ನೆಲೆಯಲ್ಲಿ, ಪ್ರವಾಹ ತಡೆಗಟ್ಟಲು ಏನು ಕೆಲಸ ಮಾಡಿದ್ದೀರಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಕ್ರಿಯಾಯೋಜನೆ ರೂಪಿಸಿ ಕೆಲಸ ನಿರ್ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಈ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತರಾದ ಬಿ. ವೀರಪ್ಪ ಹಾಗೂ ಕೆ.ಎನ್. ಫಣೀಂದ್ರ ಅವರು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರವಾಹ ತಡೆಗಟ್ಟಲು ಬಿಬಿಎಂಪಿ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳನ್ನು ಲೋಕಾಯುಕ್ತ ಕಚೇರಿಗೆ ಕರೆಯಲಾಗಿತ್ತು.
ಸಭೆಯಲ್ಲಿ, "ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ನೀವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಹೇಗೆ? ಮಳೆಯಿಂದ ಉಂಟಾಗುವ ಪ್ರವಾಹ ತಡೆಗೆ ಶೀಘ್ರವೇ ಕ್ರಿಯಾಯೋಜನೆ ರೂಪಿಸಿ. ಅದರಂತೆ ನೀವು ಕೆಲಸ ಮಾಡುತ್ತೀರೋ, ಇಲ್ಲವೋ ಎಂದು ಖಾಸಗಿ ಏಜೆನ್ಸಿಯನ್ನು ನೇಮಿಸಿ ಪರಿಶೀಲನೆ ನಡೆಸುತ್ತೇವೆ. ಇದಕ್ಕೆ ನಮಗೆ ಕಾನೂನಿನಲ್ಲಿ ಅವಕಾಶವಿದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ" ಎಂದು ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಗಳು ದಾಖಲು
ಬಿಬಿಎಂಪಿಯ ಎಂಟು ವಲಯಗಳ ರಾಜಕಾಲುವೆಗಳಲ್ಲಿ ಹೂಳು ತೆಗೆಯದಿರುವುದು, ಕಸ ವಿಲೇವಾರಿ ಮಾಡದಿರುವುದು, ಕೆರೆ ಒತ್ತುವರಿ ತೆರವು ಮಾಡದಿರುವುದರ ಬಗ್ಗೆ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. "ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆಯಾಗುತ್ತಿದ್ದು ನಿಮ್ಮ ಕೆಲಸ ಏನು? ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮರುಕಳಿಸಬಾರದು" ಎಂದು ಅಧಿಕಾರಿಗಳಿಗೆ ಲೋಕಾಯುಕ್ತ ಸೂಚನೆ ನೀಡಿದೆ.