ಉಕ್ಕಿ ಹರಿದ ಕೃಷ್ಣಾ ನದಿ | ಬೆಳಗಾವಿ, ರಾಯಚೂರು, ಬಾಗಲಕೋಟೆ ಪ್ರವಾಹ ಭೀತಿ
ಜಮಖಂಡಿ ಸಮೀಪದ ಹಿಪ್ಪರಗಿ ಬ್ಯಾರೇಜಿನಿಂದ ಮುಳುಗಡೆಯಾಗಿರುವ 28 ಗ್ರಾಮಗಳ ನಿವಾಸಿಗಳಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೂ ರೈತರು ಆರ್ಥಿಕ ಅಡಚಣೆಯಿಂದಾಗಿ ಮುಳಗುಡೆಯಾಗಿರುವ ಗ್ರಾಮಗಳಲ್ಲೇ ವಾಸಿಸುತ್ತಿದ್ದಾರೆ.;
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದ್ದು, ಊರು- ಕೇರಿಗಳು ಮುಳುಗಡೆಯಾಗಿವೆ. ಪ್ರವಾಹ ಭೀತಿ ಎದುರಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳು ಅಪಾಯದ ಮಟ್ಟ ಮೀರಿರುವ ಕಾರಣ ಭಾರಿ ಪ್ರವಾಹ ಪರಿಸ್ಥಿತಿ ಉಂಟುಮಾಡಿದೆ. ಮಹಾರಾಷ್ಟ್ರದ ಅಣೆಕಟ್ಟುಗಳಿಂದ 2.43 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿರುವುದರಿಂದ 45 ಸೇತುವೆಗಳು ಮುಳುಗಿವೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಐದು ಸಾವುಗಳು
ಮುಂಗಾರು ಆರಂಭವಾದಾಗಿನಿಂದ ಬೆಳಗಾವಿ ಗ್ರಾಮಾಂತರದಲ್ಲಿ ಐವರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ಜಿಲ್ಲೆಯಲ್ಲೂ 26,674 ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದೆ. ಆಲಮಟ್ಟಿ ಅಣೆಕಟ್ಟಿನ ಮಟ್ಟ ಶೇ.55ರಷ್ಟಿದ್ದರೂ ಸೋಮವಾರದಂದು 2,71,385 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವು 3,13,920 ಕ್ಯೂಸೆಕ್ ಇತ್ತು. ಘಟಪ್ರಭಾದಲ್ಲಿ 47,420 ಕ್ಯೂಸೆಕ್ ಒಳಹರಿವು ಇದ್ದು, ಹೊರಹರಿವು 40,393 ಕ್ಯೂಸೆಕ್ ಇತ್ತು. ಅಣೆಕಟ್ಟೆ ಶೇ 92ರಷ್ಟು ತುಂಬಿದೆ.
ಜಲಾವೃತಗೊಂಡಿರುವ ಸೇತುವೆ
ಜಮಖಂಡಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಿಂದ ನೀರು ತುಂಬಿದ ಪರಿಣಾಮ 28 ಗ್ರಾಮಗಳ ನಿವಾಸಿಗಳಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ. ಆದರೂ ರೈತರು ಆರ್ಥಿಕ ಅಡಚಣೆಯಿಂದಾಗಿ ಮುಳುಗಡೆ ಗ್ರಾಮಗಳಲ್ಲೇ ವಾಸಿಸುತ್ತಿದ್ದಾರೆ.
ಗೋಕಾಕದ ಜನನಿಬಿಡ ಲೋಳಸೂರು ಸೇತುವೆ ಜಲಾವೃತ
ಭಾನುವಾರ ಗೋಕಾಕದ ಜನನಿಬಿಡ ಲೋಳಸೂರು ಸೇತುವೆ ಜಲಾವೃತಗೊಂಡಿದ್ದು, ಮಟನ್ ಮಾರ್ಕೆಟ್, ಕುಂಬಾರ ಓಣಿ, ಉಪ್ಪಾರ ಓಣಿ, ಭೋಜಗರ ಗಲ್ಲಿ, ಕಲಾಲ್ ಗಲ್ಲಿಯಲ್ಲಿ ನೂರಾರು ಮನೆಗಳು ಜಲಾವೃತಗೊಂಡಿದ್ದವು. ಆದರೆ ಇದೀಗ ಪ್ರವಾಹ ಇಳಿಮುಖವಾಗಿದೆ. ಖಾನಾಪುರ ಹಾಗೂ ಚಿಕ್ಕೋಡಿ ತಾಲೂಕಿನ ಹಲವು ರಸ್ತೆಗಳು, ಸೇತುವೆಗಳು ಸೋಮವಾರ ಜಲಾವೃತಗೊಂಡಿದ್ದರಿಂದ ಸ್ಥಳೀಯ ಆಡಳಿತ ವಾಹನಗಳನ್ನು ಪರ್ಯಾಯ ಮಾರ್ಗ ಬಳಸಲಾಯಿತು.
ಘಟಪ್ರಭಾ ನದಿಯ ನೀರಿನ ಪ್ರಮಾಣ ಹೆಚ್ಚಳ; ಗ್ರಾಮಗಳು ಜಲಾವೃತ
ಘಟಪ್ರಭಾ ನದಿಯ ನೀರಿನ ಪ್ರಮಾಣ ಹೆಚ್ಚಳವಾದ ಕಾರಣ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯಿತಿ ಜಲಾವೃತವಾಗಿದೆ. ಭಾರೀ ಮಳೆಯಿಂದಾಗಿ ಸ್ಮಶಾನಕ್ಕೂ ನೀರು ನುಗ್ಗಿದೆ. ಬಾಗಲಕೋಟೆ ಜಿಲ್ಲಾಡಳಿತ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ತಾಲೂಕಿನ ಮಿರ್ಜಿ ಗ್ರಾಮವು ಜಲಾವೃತವಾಗಿದ್ದು, ಅಲ್ಲಿನ 138 ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿನ ಕಾಳಜಿ ಕೇಂದ್ರಕ್ಕೂ ನೀರು ಬಂದ ಕಾರಣ ಅದನ್ನು ಸಾಲಿಮಡ್ಡಿ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಮಳಲಿ ಗ್ರಾಮಕ್ಕೂ ನೀರು ನುಗ್ಗಿದೆ. ಆದರೆ, ಅಲ್ಲಿನ ಕಾಳಜಿ ಕೇಂದ್ರಕ್ಕೆ ಜನರು ಹೋಗಿಲ್ಲ. ಒಂಟಗೋಡಿ ಗ್ರಾಮದ ಸುತ್ತ ನೀರು ಆವರಿಸಿದ್ದು, ಇದರಿಂದ ಜನರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಿದ್ದಾರೆ.
ಘಟಪ್ರಭಾ ನದಿ ಪ್ರವಾಹದಿಂದ ತೊಂದರೆಗೆ ಈಡಾಗಿರುವ ಮುಧೋಳ ತಾಲೂಕಿನ ಮಳಲಿ ಎಂಬ ಗ್ರಾಮಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ಗೋಕಾಕ್‌ನಲ್ಲಿ ಮುಳುಗಿದ ಅಂಗಡಿ ಮುಗ್ಗಟ್ಟುಗಳು
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಗಡಿಯಲ್ಲಿ ಉಂಟಾಗಲಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಸಂತ್ರಸ್ತ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖಾನಾಪುರ ತಾಲೂಕಿನ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ನಾರಾಯಣಪುರದ ಬಸವಸಾಗರ ಅಣೆಕಟ್ಟಿನಿಂದ ಸೋಮವಾರ ಕನಿಷ್ಠ 3 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ರಾಯಚೂರಿನಲ್ಲಿ ಬೆಳೆ ಹಾನಿ, ರೋಗ-ರುಜಿನಗಳ ಭೀತಿ
ಕಳೆದ ಕೆಲವು ದಿನಗಳಿಂದ ಕೃಷ್ಣಾ ನದಿ ತೀರದ ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬೆಳೆಹಾನಿ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ರಾಯಚೂರಿನ ಲಿಂಗಸೂಗೂರು ತಾಲೂಕಿನ ರಾಯದುರ್ಗ ಗ್ರಾಮಕ್ಕೆ ಸೋಮವಾರ ನದಿ ನೀರು ನುಗ್ಗಿದೆ. ನದಿ ತೀರದ ಗ್ರಾಮಸ್ಥರಿಗೆ ರೋಗ ಹರಡುವ ಬಗ್ಗೆ ತಿಳಿವಳಿಕೆ ಮೂಡಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ. ಹೂವಿನಹಡಗಲಿ ಸೇತುವೆ ಜಲಾವೃತಗೊಂಡಿರುವುದರಿಂದ ವಾಹನಗಳನ್ನು ತಿಂಟಣಿ ಸೇತುವೆ ಮೂಲಕ ತಿರುಗಿಸಲಾಗುತ್ತಿದೆ. ಕೃಷಿ ಮತ್ತು ಕಂದಾಯ ಇಲಾಖೆಗಳು ಜಂಟಿ ವಿಚಾರಣೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿವೆ ಎಂದರು.
ಕೃಷ್ಣಾ ನದಿ ನೆರೆಯಿಂದ ಅಪಾರ ಬೆಳೆ ನಾಶ
ರಾಯಚೂರು ತಾಲೂಕಿನ ಗುರ್ಜಾಪುರ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಜಿಲ್ಲಾಧಿಕಾರಿ ನಿತೀಶ್ ಕೆ ಮತ್ತು ಎಸ್ಪಿ ಪುಟ್ಟ ಮಾದಯ್ಯ ಅವರು ಶನಿವಾರ ನದಿ ತೀರದ ಲಿಂಗಸುಗೂರು ಮತ್ತು ದೇವದುರ್ಗ ತಾಲೂಕಿನ ಗ್ರಾಮಗಳಿಗೆ ತೆರಳಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.