Food Safety Campaign | ಆಹಾರ ಗುಣಮಟ್ಟ ತಪಾಸಣೆ: ರಾಜ್ಯಾದ್ಯಂತ ಎಫ್‌ಎಸ್‌ಎಸ್‌ಎಐ ಅಭಿಯಾನ

ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ಬದಿಯ ಆಹಾರ ಮಾರಾಟ ಮಳಿಗೆಗಳನ್ನು ತಪಾಸಣೆ ನಡೆಸಲಾಗುತ್ತಿದೆ.

Update: 2024-08-31 06:16 GMT
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಇಲಾಖೆ ಆಹಾರ ಗುಣಮಟ್ಟಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
Click the Play button to listen to article

ರಾಜ್ಯದಲ್ಲಿ ಆಹಾರ ಉತ್ಪನ್ನಗಳ ಉತ್ತಮ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆ.30 ಮತ್ತು 31ರಂದು ರಾಜ್ಯಾದ್ಯಂತ ಆರೋಗ್ಯ ಸುರಕ್ಷತಾ ಅಭಿಯಾನ ನಡೆಯುತ್ತಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಆಹಾರ ಗುಣಮಟ್ಟಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ ಮತ್ತು ಬೀದಿ ಬದಿಯ ಆಹಾರ ಮಳಿಗೆಗಳನ್ನು ತಪಾಸಣೆ ನಡೆಸಲಾಗುತ್ತಿದೆ. 

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಎರಡು ದಿನಗಳ ಕಾಲ ರಾಜ್ಯಾದ್ಯಂತ ಆಹಾರ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದು, ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 

ಮೊದಲ ದಿನ ಬೀದಿ ಆಹಾರ ಮಾರಾಟಗಾರರು ಸೇರಿದಂತೆ 753 ಆಹಾರ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೀದಿ ವ್ಯಾಪಾರ ಮಳಿಗೆಗಳು ಸೇರಿದಂತೆ ಒಟ್ಟು 67 ಆಹಾರ ಮಾರಾಟ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. 

ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಯಾವುದೇ ಪ್ರಮುಖ ಉಲ್ಲಂಘನೆ ಕಂಡು ಬಂದಿಲ್ಲ. ಆದರೆ ಅನೇಕ ಸಂಸ್ಥೆಗಳಲ್ಲಿ ಶುಚಿತ್ವದ ಕೊರತೆಗಾಗಿ ರೂ 1.8 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆ. ಅಧಿಕಾರಿಗಳು ಮುಖ್ಯವಾಗಿ ಸ್ವಚ್ಛತೆ ಕುರಿತು ಅರಿವು ಮೂಡಿಸಿ ಪರವಾನಗಿಗೆ ಅರ್ಜಿ ಸಲ್ಲಿಸುವಂತೆ ಜಾಗೃತಿ ಮೂಡಿಸಿದ್ದಾರೆ ಎಂದು ಕರ್ನಾಟಕ ಆಹಾರ ಸುರಕ್ಷತೆ ಆಯುಕ್ತ ಶ್ರೀನಿವಾಸ್ ಕೆ ತಿಳಿಸಿದ್ದಾರೆ.

ಅಧಿಕಾರಿಗಳು ಭಾನುವಾರ ಮತ್ತು ಬುಧವಾರ ಮಾಂಸ, ಮೊಟ್ಟೆ ಮತ್ತು ಮೀನಿನ ಮಾದರಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೂಡ ಈ ಕುರಿತು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಹಾರ ಗುಣಮಟ್ಟ ಮತ್ತು ಶುಚಿತ್ವದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Tags:    

Similar News