ಜಾಗತಿಕ ಸಾಮರ್ಥ್ಯ ಕೇಂದ್ರ (GCC) ಕರಡು ನೀತಿ ಬಿಡುಗಡೆ; 5 ವರ್ಷಗಳಲ್ಲಿ 50 ಶತಕೋಟಿ ಡಾಲರ್‌ ಆರ್ಥಿಕತೆ ಗುರಿ

ಕರಡು ನೀತಿ ಸಿದ್ಧಪಡಿಸುವ ಸಲುವಾಗಿ ವ್ಯಾಪಕವಾದ ಉದ್ಯಮ ಸಂಶೋಧನೆ, ಹೂಡಿಕೆದಾರರ ಸಲಹೆ, ಉದ್ಯಮ ಕ್ಷೇತ್ರದ ತಜ್ಞರೊಂದಿಗೆ 500 ಹೆಚ್ಚು ಬಾರಿ ಸಮಾಲೋಚನೆ ನಡೆಸಲಾಗಿದೆ. ಮಹಾತ್ವಾಕಾಂಕ್ಷೆಯ ಗುರಿ, ಪ್ರೋತ್ಸಾಹ ಮತ್ತು ಸಹಯೋಗದ ಪರಿಣಾಮ ಸಮಗ್ರ ನೀತಿ ರೂಪಿಸಲಾಗಿದೆ

Update: 2024-09-27 13:27 GMT

ಮುಂದಿನ ಐದು ವರ್ಷಗಳಲ್ಲಿ 50 ಶತಕೋಟಿ ಡಾಲರ್ ಆರ್ಥಿಕತೆಯ ಗುರಿಯೊಂದಿಗೆ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಕರಡು ನೀತಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ. 2029 ರ ವೇಳೆಗೆ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆ, 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಕರಡು ನೀತಿಯಲ್ಲಿದೆ.

ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವ ಮೂಲಕ ಸ್ಥಳೀಯ ಹೊಸ ಪರಿಸರ ವ್ಯವಸ್ಥೆಯೊಂದಿಗೆ ತಡೆರಹಿತ ಸಹಯೋಗವನ್ನು ಉತ್ತೇಜಿಸುವುದು. ಕೃತಕ ಬುದ್ಧಿಮತ್ತೆ(AI) ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ರಾಜ್ಯವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿಸುವಂತೆ ಕರಡು ನೀತಿ ವಿನ್ಯಾಸ ಮಾಡಲಾಗಿದೆ.

ಕರಡು ನೀತಿ ಸಿದ್ಧಪಡಿಸುವ ಸಲುವಾಗಿ ವ್ಯಾಪಕವಾದ ಉದ್ಯಮ ಸಂಶೋಧನೆ, ಹೂಡಿಕೆದಾರರ ಸಲಹೆ, ಉದ್ಯಮ ಕ್ಷೇತ್ರದ ತಜ್ಞರೊಂದಿಗೆ 500 ಹೆಚ್ಚು ಬಾರಿ ಸಮಾಲೋಚನೆ ನಡೆಸಲಾಗಿದೆ. ಮಹಾತ್ವಾಕಾಂಕ್ಷೆಯ ಗುರಿ, ಪ್ರೋತ್ಸಾಹ ಮತ್ತು ಸಹಯೋಗದ ಪರಿಣಾಮ ಸಮಗ್ರ ನೀತಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಡು ನೀತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿಸಿಸಿ) ಸಂಬಂಧಿಸಿ ಮೊದಲ ಮೀಸಲು ನೀತಿಯನ್ನು ಪ್ರಾರಂಭಿಸಿದ್ದೇವೆ, ಇದರಿಂದ ನಾವೀನ್ಯತೆ ಮತ್ತು ವ್ಯವಹಾರ ಪರಿವರ್ತನೆಯ ಪ್ರಮುಖ ತಾಣವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ. ಜಾಗತಿಕ ಕಾರ್ಯತಂತ್ರದ ಉಪಕ್ರಮಗಳು, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ತಂತ್ರಜ್ಞಾನ ಪರಿಹಾರಗಳ ನಿರ್ಣಾಯಕರಾಗಲು ಕರಡು ನೀತಿ ನೆರವಾಗಲಿದೆ.

1.2 ಮಿಲಿಯನ್ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಮತ್ತು ಆರ್ಥಿಕತೆಗೆ 22.2 ಶತಕೋಟಿ ಡಾಲರ್ ಕೊಡುಗೆ ಜೀಡಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕರ್ನಾಟಕದ ಬೆಳವಣಿಗೆ ಮತ್ತು ಉದ್ಯೋಗದ ಪ್ರಮುಖ ಮೂಲವಾಗಿವೆ ಎಂದು ಹೇಳಿದರು.

ಮುಂದಿನ ಹತ್ತು ವರ್ಷಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಪ್ರತಿ ಶತ 12-14 ರಷ್ಟು ಬೆಳವಣಿಗೆ ಸಾಧಿಸಲಿವೆ ಎಂಬ ನಿರೀಕ್ಷೆ ಇದೆ. 2029 ರ ವೇಳೆಗೆ ರಾಷ್ಟ್ರೀಯ GCC ಮಾರುಕಟ್ಟೆಯಲ್ಲಿ ಕರ್ನಾಟಕದ ಪಾಲು ಸುಮಾರು 50 ಪ್ರತಿಶತ ಹೊಂದುವ ನಿರೀಕ್ಷೆಯಿದೆ. ನಾವೀನ್ಯತೆ ಉತ್ತೇಜಿಸುವ, ಆರ್ & ಡಿ ಬೆಂಬಲಿಸುವ ಮತ್ತು ಉನ್ನತ ಪ್ರತಿಭೆಗಳನ್ನು ಪೋಷಿಸುವ ಕರ್ನಾಟಕದ ಪರಿಸರ ವ್ಯವಸ್ಥೆಯು ಜಾಗತಿಕವಾಗಿ ಜಿಸಿಸಿಗಳಿಗೆ ಅತ್ಯಂತ ಆಕರ್ಷಕ ತಾಣವಾಗಿ ಉಳಿದಿದೆ ಎಂದು ಖರ್ಗೆ ಹೇಳಿದರು.

ಕರಡು ನೀತಿಗೆ ಸಂಬಂಧಿಸಿ ಸಾರ್ವಜನಿಕರ ಆಕ್ಷೇಪಣೆಗೆ ಮುಕ್ತವಾಗಿದೆ. ಕರಡು ನೀತಿಯನ್ನು ಮತ್ತಷ್ಟು ಪರಿಷ್ಕರಿಸಿ, ಬಲಪಡಿಸಲು ಎಲ್ಲಾ ಮಧ್ಯಸ್ಥಗಾರರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಅವರು ಕರಡು ಜಿಸಿಸಿ ನೀತಿಯ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು. ಕರಡು ನೀತಿಯ ಉದ್ದೇಶ, ದೂರದೃಷ್ಟಿ ಮತ್ತು ಗುರಿಗಳನ್ನು ವಿವರಿಸಿದರು. ಜಿಸಿಸಿ ಪರಿಸರ ವ್ಯವಸ್ಥೆಯನ್ನು ಬೆಂಗಳೂರಿನ ಆಚೆಗೂ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

Tags:    

Similar News