ರನ್ಯಾ ರಾವ್ ಪ್ರಕರಣ: ಪ್ರೋಟೋಕಾಲ್ ದುರ್ಬಳಕೆ ವರದಿ ಸಿದ್ದ
ತನಿಖಾ ವರದಿ ಸಿದ್ಧವಿದೆ. ಇದುವರೆಗೆ ಹಲವರ ವಿಚಾರಣೆ ಮಾಡಿದ್ದೇವೆ. ಕೊನೆ ಹಂತದ ಮಾಹಿತಿ ಸಂಗ್ರಹ ಆಗಿದೆ. ಸರ್ಕಾರಕ್ಕೆ ಇಂದೇ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.;
ರನ್ಯಾ ರಾವ್
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟಮಾಡುತ್ತಿದ್ದ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ಮಂಗಳವಾರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ, ತನಿಖಾ ವರದಿ ಸಿದ್ಧವಿದೆ. ಇದುವರೆಗೆ ಹಲವರ ವಿಚಾರಣೆ ಮಾಡಿದ್ದೇವೆ. ಕೊನೆ ಹಂತದ ಮಾಹಿತಿ ಸಂಗ್ರಹ ಆಗಿದೆ. ಸರ್ಕಾರಕ್ಕೆ ಇಂದೇ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದುವರೆಗೆ, 10-15 ಜನರ ವಿಚಾರಣೆ ಮಾಡಿದ್ದೇವೆ, ಸರ್ಕಾರಕ್ಕೆ ವರದಿ ಕೊಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಮಾಡಿದ್ದೇವೆ. ಆದರೆ ಈಗ ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಆಗದು ಎಂದು ಹೇಳಿದ್ದಾರೆ.
ರನ್ಯಾ ರಾವ್ ಗೆ ಜಾಮೀನು ನೀಡಿ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಿತು. ಹಿರಿಯ ವಕೀಲ ಕಿರಣ್ ಜವಳಿ ರನ್ಯಾ ಪರ ವಾದ ಮಂಡಿಸಿದರು. ರನ್ಯಾ ಒರ್ವ ಮಹಿಳೆ, ಮತ್ತು ಬೆಂಗಳೂರು ನಿವಾಸಿ. ಆಕೆಯ ಪಾಸ್‌ಪೋರ್ಟ್ ಈಗಾಗಲೇ DRI ವಶದಲ್ಲಿದೆ. ಹೀಗಾಗಿ, ಆಕೆ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ. ವಶಕ್ಕೆ ಪಡೆದ ನಂತರ, ಮಹಜರು ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸಿಲ್ಲ. ಕಸ್ಟಮ್ಸ್ ಕಾಯ್ದೆಯ 102 ಸೆಕ್ಷನ್ ಅನ್ವಯವಾಗದು ಎಂದು ವಾದಿಸಿದರು. ಇದು ಆರ್ಥಿಕ ಅಪರಾಧವಾಗಿದ್ದು, ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇಲ್ಲ. ಹಾಗಾಗಿ, ಷರತ್ತುಗಳೊಂದಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು.
ಏನಿದು ಪ್ರಕರಣ?
ನಟಿ ರನ್ಯಾ ರಾವ್ ಅವರ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣವು ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮಾರ್ಚ್ 3 ರಂದು, ದುಬೈನಿಂದ 14.80 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.