ಮಾಂಡರೀನ್‍ ಭಾಷೆಗೂ ಡಬ್‍ ಆಗುತ್ತಿದೆ ಕನ್ನಡದ ‘ಕರಳೆ’

ಈಗಾಗಲೇ 52 ದಿನಗಳ ಚಿತ್ರೀಕರಣವಾಗಿದ್ದು, ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನೆಡೆಸಲಾಗಿದೆ. ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ.;

Update: 2025-03-25 06:36 GMT

ಕರಳೆ

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ರಕ್ಷಿತ್‍ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರವು ಜಾಪನೀಸ್‍ ಭಾಷೆಗೆ ಡಬ್‍ ಆಗಿ ಬಿಡುಗಡೆಯಾಗಿತ್ತು. ‘ಲೂಸಿಯಾ’ ಪವನ್‍ ನಿರ್ದೇಶನದ ‘ಯೂ ಟರ್ನ್’ ಚಿತ್ರವು ಫಿಲಿಪಿನೋ ಭಾಷೆಗೆ ರೀಮೇಕ್‍ ಆಗಿತ್ತು. ಇದೀಗ ಕನ್ನಡ ಚಿತ್ರವೊಂದು ಚೀನಿ (ಮಾಂಡರೀನ್‍) ಭಾಷೆಗೆ ಡಬ್‍ ಆಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಕರಳೆ’.

ಈ ಹಿಂದೆ ‘ಕಲಿವೀರ’ ಮತ್ತು ‘ಕನ್ನಡದೇಶದೊಳ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಅವಿರಾಮ್ ಕಂಠೀರವ, ಇನ್ನೊಂದು ವಿಭಿನ್ನ ಕಥೆ ಇರುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ನೈಜ ಘಟನೆ ಆಧಾರಿಸಿದ ಚಿತ್ರವಾಗಿದ್ದು, ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಈಗಾಗಲೇ 52 ದಿನಗಳ ಚಿತ್ರೀಕರಣವಾಗಿದ್ದು, ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನೆಡೆಸಲಾಗಿದೆ. ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ. ಚಿತ್ರತಂಡವು ಸದ್ಯದಲ್ಲೇ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ.

ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಸಮಾಜದ ವಾಸ್ತವ ಅಂಶಗಳನ್ನು, ಅಷ್ಟೇ ನೈಜವಾಗಿ ಮತ್ತು ಹಸಿಹಸಿಯಾಗಿ ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಈ ಚಿತ್ರವು ಕನ್ನಡವಲ್ಲದೆ ಚೀನಿ ಭಾಷೆಗೆ ಡಬ್‍ ಆಗುತ್ತಿರುವುದಕ್ಕೆ ಕಾರಣವಿದೆಯಂತೆ. ಇದು ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೀನಿ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನೆಡೆಸುತ್ತಿದ್ದಾರೆ. ಎರಡು ದೇಶಗಳಲ್ಲಿ ನೆಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಮತ್ತು ಚೀನಿ ಭಾಷೆಯಲ್ಲಿ ಸಿನಿಮಾ ಮಾಡಲಾಗುತ್ತಿದೆಯಂತೆ. ಈ ಚಿತ್ರದಲ್ಲಿ ಕುಂಕುಮ್‍ ಹರಿಹರ ಮುಂತಾದವರು ನಟಿಸುತ್ತಿದ್ದಾರೆ.

ಭಾರತದ ಪ್ರಮುಖ ಭಾಷೆ ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೀನಾದ ಮಾಂಡರೀನ್‍ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ ‘ಕರಳೆ’ ಚಿತ್ರಕ್ಕಿದೆ.

Tags:    

Similar News