Covid Scam | ಕೋವಿಡ್ ಹಗರಣ: ಹೈಕೋರ್ಟ್‌ಗೆ ನ್ಯಾ.ಕುನ್ಹಾ ವರದಿ ಸಲ್ಲಿಕೆ
Covid Scam| ಪ್ರತಿ ಪಿಪಿಇ ಕಿಟ್‌ಗೆ ₹400 ಮೂಲ ಬೆಲೆ ಇದ್ದರೆ ಅದನ್ನು ₹1,312ಗೆ ಪೂರೈಸಲಾಗಿದೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ.;
'ಕೋವಿಡ್-19ರ ಎರಡನೇ ಅಲೆಯ ಸಂದರ್ಭದಲ್ಲಿ ಅತೀ ದುಬಾರಿ ಬೆಲೆಗೆ ಪಿಪಿಇ ಕಿಟ್ ಪೂರೈಸಿವೆ ಎಂದು 'ಪ್ರುಡೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್' ಮತ್ತು 'ಎಲ್‌ಎಜೆ ಎಕ್ಸ್‌ಪೋರ್ಟ್ಸ್' ಲಿಮಿಟೆಡ್ ಕಂಪನಿಗಳ ಮೇಲೆ ಇದ್ದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ನಾ ಅವರ ಏಕಸದಸ್ಯ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ.
'ಪಿಪಿಇ ಕಿಟ್ ಪೂರೈಸಿರುವ ಈ ಎರಡೂ ಖಾಸಗಿ ಕಂಪನಿಗಳ ಪರ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶವನ್ನು ರದ್ದುಪಡಿಸಬೇಕು' ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ರೂಬೆನ್ ಜಾಕೊಬ್, 'ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು 'ಪ್ರುಡೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್' ಮತ್ತು 'ಎಲ್‌ಎಜೆ ಎಕ್ಸ್‌ಪೋರ್ಟ್ಸ್' ಕಂಪನಿಗಳು ಟೆಂಡರ್ ಪಡೆದುಕೊಂಡಿದ್ದವು. ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಹೊಸದಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳದೇ ಅಧಿಕಾರಿಗಳ ಜೊತೆ ಶಾಮೀಲಾಗಿ ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ಪೂರೈಸಿವೆ' ಎಂದು ದೂರಿದರು.
'ಪ್ರತಿ ಪಿಪಿಇ ಕಿಟ್‌ಗೆ ₹400 ಮೂಲ ಬೆಲೆ ಇದ್ದರೆ ಅದನ್ನು ₹1,312ಗೆ ಪೂರೈಸಲಾಗಿದೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಗರಣದ ತನಿಖೆಗೆ ರಚಿಸಲಾದ ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದ ಆಯೋಗವು ವರದಿ ನೀಡಿದೆ' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಕೋವಿಡ್ ಹಗರಣದ ಹೆಚ್ಚುವರಿ ದಾಖಲೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಮೇಲ್ಮನವಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ' ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.