Accident | ಬೆಂಗಳೂರು ಆಸ್ಪತ್ರೆಗೆ ಗಾಯಾಳು ಕುರುಬೂರು ಶಾಂತಕುಮಾರ್ ಏರ್‌ಲಿಫ್ಟ್‌!

ಅಪಘಾತದಲ್ಲಿ ಶಾಂತಕುಮಾರ್ ಅವರಿಗೆ ಬೆನ್ನುಮೂಳೆಗೆ ತೀವ್ರ ಗಾಯಾವಾಗಿದ್ದು, ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸಲು ಶಾಂತಕುಮಾರ್ ಅವರನ್ನು ಏರ್​ ಲಿಫ್ಟ್ ಮಾಡಿಸಲು ಸೋಮಣ್ಣ ತೀರ್ಮಾನಿಸಿದ್ದಾರೆ.;

Update: 2025-02-15 14:20 GMT
ಕುರುಬೂರು ಶಾಂತಕುಮಾರ್

ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಏರ್ ಆಂಬುಲೆನ್ಸ್ ಸಜ್ಜುಗೊಳಿಸಿದ್ದು ಶಾಂತಕುಮಾರ್ ಅವರನ್ನು ಚಂಡೀಗಡದಿಂದ ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುವುದು.

ರಸ್ತೆ ಅಪಘಾತದಲ್ಲಿ ಶಾಂತಕುಮಾರ್ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಶಾಂತಕುಮಾರ್ ಅವರಿಗೆ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದಕ್ಕೂ ಮುನ್ನ ಮಾತನಾಡಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರು, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಪಾಟಿಯಾಲ ಆಸ್ಪತ್ರೆಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ವಿ.ಸೋಮಣ್ಣ ತಿಳಿಸಿದ್ದರು.

ಅಪಘಾತದಲ್ಲಿ ಶಾಂತಕುಮಾರ್ ಅವರಿಗೆ ಬೆನ್ನುಮೂಳೆಗೆ ತೀವ್ರ ಗಾಯಾವಾಗಿದ್ದು, ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸಲು ಅವರನ್ನು ಏರ್​ ಲಿಫ್ಟ್ ಮಾಡಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಪಾಟಿಯಾಲ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು, ಅಗತ್ಯ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದು ಹೇಳಿದ್ದರು. 

ಕುರುಬೂರು ಶಾಂತಕುಮಾರ್ ಹಾಗೂ ಚೆನ್ನೈನ ರೈತ ಮುಖಂಡ ಪಾಂಡಿಯನ್‌ ಅವರು ಪ್ರಯಾಣಿಸುತ್ತಿದ್ದ ಕಾರು ನಿನ್ನೆ(ಫೆಬ್ರವರಿ 14) ಪಂಜಾಬ್​​ನ ಪಟಿಯಾಲ ರಸ್ತೆಯಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಕುರುಬೂರು ಶಾಂತಕುಮಾರ್ ಹಾಗೂ ತಮಿಳುನಾಡಿನ ಪಾಂಡಿಯನ್ ಅವರಿಗೆ ಗಾಯಗಳಾಗಿದ್ದವು. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೆಹಲಿಯ ಕನೋಲಿ ಬಾರ್ಡರ್ ನಲ್ಲಿ ವಿವಿಧ ಬೇಡಿಕೆಗಳ ಆಗ್ರಹಿಸಿ ಒಂದು ವರ್ಷದಿಂದ ಪ್ರತಿಭಟನೆ ನಡೆಯುತ್ತಿದ್ದು, ಈ ಸಂಬಂಧ ಫೆ.14 ರಂದು ದೆಹಲಿಯಲ್ಲಿ ಕರೆಯಲಾಗಿದ್ದ ಸಭೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯ ಈ ದುರ್ಘಟನೆ ಸಂಭವಿಸಿತ್ತು.

Tags:    

Similar News